ಸಾರಾಂಶ
ಕನ್ನಡಪ್ರಭ ವಾರ್ತೆ ತಾಳಿಕೋಟೆ: ಬೈಲಾಟ, ನಾಟಕ, ನೃತ್ಯಗಳು ಟೀವಿ ಮಾಧ್ಯಮದ ಧಾರಾವಾಹಿ ಮತ್ತು ಸಿನಿಮಾಗಳ ಪ್ರಭಾವದಿಂದ ನಶಿಸುತ್ತಿವೆ. ಬೆಲೆ ಕಟ್ಟಲಾಗದ ಈ ಕಲೆ ಹುಟ್ಟಿಕೊಂಡಿರುವುದು ಉತ್ತರ ಕರ್ನಾಟಕದ ನಿತ್ಯ ಬದುಕಿನಿಂದ ಎಂದು ಅಸ್ಕಿ ಫೌಂಡೇಶನ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ ಹೇಳಿದರು.
ತಾಲೂಕಿನ ಬಳಗಾನೂರ ಗ್ರಾಮದಲ್ಲಿ ನೀಲಗಂಗಾಂಭಿಕಾ ದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಳ್ಳಲಾದ ಸಾವು ತಂದ ಸೌಭಾಗ್ಯ ಎಂಬ ಸಾಮಾಜಿಕ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಉತ್ತರ ಕರ್ನಾಟಕ ಹಳ್ಳಿಗಾಡಿನ ಬದುಕಿನಲ್ಲಿ ನಿತ್ಯ ನಡೆಯುತ್ತಿರುವ ಸನ್ನಿವೇಶಗಳನ್ನು ಆಧರಿಸಿ ನಾಟಕ ಕಲೆ ಹುಟ್ಟುಕೊಂಡಿದೆ. ಆದರೆ ಕಲಾವಿದರು ತಮ್ಮ ಬದುಕಿಗಾಗಿ ಸಾಕಷ್ಟು ಕಡೆಗಳಲ್ಲಿ ನಾಟಕ ಕಲೆ ಪ್ರದರ್ಶಿಸುತ್ತಿದ್ದಾರೆ. ಆದರೆ, ಅದನ್ನು ನೋಡಲು ಜನರು ಬರುತ್ತಿಲ್ಲ. ಇದಕ್ಕೆ ಇಂದಿನ ಟೀವಿ ಮಾಧ್ಯಮಗಳ ಪ್ರಭಾವ. ಸಿನಿಮಾಗಳು ಜನರ ದಾರಿಯನ್ನು ತಪ್ಪಿಸುತ್ತಿವೆ. ನಾಟಕದ ಕಲೆಯಲ್ಲಿ ಜೀವನದ ಬದುಕನ್ನು ತಿದ್ದುವ ಸಂದೇಶಗಳಿವೆ. ನಮ್ಮ ಬದುಕು ಧಾರಾವಾಹಿಗಳಿಂದ ಆಚೆ ಬರದಿರುವದು ದುರದೃಷ್ಠಕರವಾಗಿದೆ ಎಂದು ವಿಷಾದಿಸಿದರು.ವಿರೇಶಗೌಡ ಬಾಗೇವಾಡಿ ಮಾತನಾಡಿ, ಗ್ರಾಮೀಣ ಸೊಗಡಿನ ನಾಟಕ, ಬೈಲಾಟ ಕಲೆಗಳು ಇನ್ನೂ ಜೀವಂತವಾಗಿರುವುದು ಹೆಮ್ಮೆಯ ಸಂಗತಿ. ಈ ನಾಟಕಗಳಲ್ಲಿ ದೇಶದ ಸಂಸ್ಕೃತಿ, ಸಂಸ್ಕಾರವನ್ನು ಬಿತ್ತುವಂತಹ ಸನ್ನಿವೇಶಗಳನ್ನು ಪ್ರದರ್ಶನ ಮಾಡುತ್ತಿರುವುದು ಶ್ಲಾಘನೀಯ. ಬಳಗಾನೂರ ಗ್ರಾಮದ ಶ್ರೀ ನೀಲಗಂಗಾಂಭಿಕಾ ದೇವಿಯ ಜಾತ್ರೋತ್ಸವ ಅಂಗವಾಗಿ ೫ ದಿನಗಳ ಕಾಲ ವಿವಿಧ ಕಲಾವಿದರನ್ನು ಕರೆಯಿಸಿ ಪ್ರೋತ್ಸಾಹಿಸಿ ವೈಭವ ಪೂರಿತವಾಗಿ ಜಾತ್ರೆ ಮಾಡುತ್ತಿರುವದು ಊರಿನ ಹಿರಿಮೆ ಇನ್ನಷ್ಟು ಹೆಚ್ಚಿಸಿದೆ ಎಂದರು.ಮುಖ್ಯ ಅತಿಥಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ) ಮಾತನಾಡಿ, ಇಂದಿನ ದಿನಮಾನದಲ್ಲಿ ಕಲಾವಿದರು ಬದುಕು ಕಟ್ಟಿಕೊಳ್ಳಲು ಶ್ರಮಿಸುತ್ತಿರುವ ಬಗ್ಗೆ ವಿವರಿಸಿದರು. ಕಲಾವಿದರ ಬದುಕು ಕಟ್ಟಿಕೊಳ್ಳುತ್ತಿರುವದು ಗ್ರಾಮೀಣ ಜನರಿಂದ, ಅದನ್ನು ಉಳಿಸಿ ಬೆಳೆಸುವದರ ಜೊತೆಗೆ ಪ್ರೋತ್ಸಾಹಿಸುವ ಕಾರ್ಯ ಬಳಗಾನೂರ ಗ್ರಾಮದ ಜನರು ಮಾಡಿರುವದು ಹೆಮ್ಮೆಯ ಸಂಗತಿ ಎಂದರು.ಈ ವೇಳೆ ಮುಖಂಡರಾದ ದ್ಯಾಮನಗೌಡ ಪಾಟೀಲ, ಎಸ್.ಐ.ಕಡಕೋಳ, ಮಲ್ಲಣ್ಣ ದೋರನಳ್ಳಿ, ಎಂ.ಬಿ.ಅಲದಿ, ಕಲ್ಲಪ್ಪ ಮಡಿವಾಳರ, ಶ್ರೀಕಾಂತಗೌಡ ಬಿರಾದಾರ, ಬಾಪುಗೌಡ ಬಿರಾದಾರ, ಶಿವಣ್ಣ ದೋರನಳ್ಳಿ, ಶಿವಲಿಂಗಪ್ಪ ಪಡಶೆಟ್ಟಿ, ಶಿವನಗೌಡ ಬಿರಾದಾರ, ಹೂವಪ್ಪಗೌಡ ಬಿರಾದಾರ, ಸಿದ್ರಾಮ ಅಲದಿ, ಬಸನಗೌಡ ದೋರನಳ್ಳಿ, ಚಂದ್ರಶೇಖರ ಅಲದಿ, ಪ್ರಭು ಪತ್ತೇಪೂರ, ಅಮರೇಶ ಪಾಟೀಲ, ಬಸವರಾಜ ಜೀರಲಭಾವಿ ಮೊದಲಾದವರು ಉಪಸ್ಥಿತರಿದ್ದರು.________