ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರುಹಿಂದುಳಿದ ವರ್ಗಗಳ ಆಯೋಗದಿಂದ ನಡೆಸಲು ಉದ್ದೇಶಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುರಿತು ಬಿಜೆಪಿ ಜನಪ್ರತಿನಿಧಿಗಳು ಹಾಗೂ ನಾಯಕರಲ್ಲಿ ಮಾಹಿತಿ ಕೊರತೆ ಇದ್ದು, ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎ.ಸಿ. ವಿನಯರಾಜ್ ಆರೋಪಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮೀಕ್ಷೆಯ ಪೂರ್ವಭಾವಿಯಾಗಿ ಎಲ್ಲ ಮನೆಗಳಿಗೆ ಸ್ಟಿಕ್ಕರ್ ಅಂಟಿಸಲಾಗಿದೆ. ಇದನ್ನೇ ಸಮೀಕ್ಷೆ ಎಂಬುದಾಗಿ ಬಿಜೆಪಿ ಮುಖಂಡರು ಜನರ ನಡುವೆ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದರು.ಬಿಜೆಪಿ ಮುಖಂಡರು ಗೊಂದಲಕ್ಕೆ ಒಳಗಾಗಿರಬಹುದು. ಆದರೆ ಹಿಂದುಳಿದ ವರ್ಗದ ಜನರಲ್ಲಿ ಈ ಬಗ್ಗೆ ಯಾವುದೇ ಗೊಂದಲ ಇಲ್ಲ. ಜನರ ಅಭಿವೃದ್ಧಿಗಾಗಿ ಸರ್ಕಾರ ಕೈಗೊಳ್ಳುವ ಉತ್ತಮ ಯೋಜನೆಗಳ ಯಶಸ್ವಿ ಜಾರಿಗೆ ಜನಪ್ರತಿನಿಧಿಗಳು ಕೆಲಸ ಮಾಡಬೇಕೇ ಹೊರತು ಇಂಥ ವಿಚಾರಗಳಲ್ಲೂ ರಾಜಕೀಯ ಮಾಡುವುದು ಸಲ್ಲದು ಎಂದು ವಿನಯರಾಜ್ ಹೇಳಿದರು.ಬಿಜೆಪಿ ಆಡಳಿತವಿದ್ದಾಗ ಅಕ್ರಮ ಮರಳುಗಾರಿಕೆ ಅಥವಾ ಅಕ್ರಮ ಕೆಂಪುಕಲ್ಲು ಗಣಿಗಾರಿಕೆ ಮಟ್ಟ ಹಾಕಲು ಯಾವುದೇ ಕ್ರಮ ವಹಿಸಿಲ್ಲ. ಇದರಿಂದ ರಾಜ್ಯದ ಬೊಕ್ಕಸಕ್ಕೆ ನೂರಾರು ಕೋಟಿ ರು. ಹಣ ನಷ್ಟವಾಗಿದೆ. ಇದೀಗ ಕಾಂಗ್ರೆಸ್ ಸರ್ಕಾರ ಕೆಂಪುಕಲ್ಲು ಗಣಿಗಾರಿಕೆಗೆ ನಿಯಮ ರೂಪಿಸಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದೆ. ಇದರಲ್ಲೂ ಬಿಜೆಪಿ ನಾಯಕರು ಅಪಸ್ವರ ಎತ್ತುತ್ತಿದ್ದಾರೆ ಎಂದರು.ಎಲ್ಲದಕ್ಕೂ ರಾಜಕೀಯ ಮಾಡುವ ಬಿಜೆಪಿ ಶಾಸಕರು ಮಂಗಳೂರು ದಸರಾ ಕಾರ್ಯಕ್ರಮಕ್ಕೆ ಹಾಕಲಾದ ಫ್ಲೆಕ್ಸ್‌ಗಳನ್ನು ತೆಗೆಯುತ್ತಿರುವ ಬಗ್ಗೆ ಮೌನ ವಹಿಸಿರುವುದು ಯಾಕೆ ಎಂದು ಪ್ರಶ್ನಿಸಿದರು.ಕಾಂಗ್ರೆಸ್ ಮುಖಂಡರಾದ ಪ್ರಕಾಶ್ ಸಾಲ್ಯಾನ್, ಅಪ್ಪಿ, ಸುಹಾನ್ ಆಳ್ವ, ನೀರಜ್ ಪಾಲ್, ವಿಕಾಸ್ ಶೆಟ್ಟಿ, ನಮಿತಾ ಡಿ. ರಾವ್, ಟಿ. ಹೊನ್ನಯ್ಯ, ಚಂದ್ರಕಲಾ ಜೋಗಿ ಇದ್ದರು.