ಪುತ್ತೂರು: ಪುತ್ತೂರು ಶಾಸಕರು ಮಹಿಳೆಯರ ಮೇಲೆ ನಿರಂತರ ದಬ್ಬಾಳಿಕೆ ನಡೆಯುತ್ತಿದ್ದು, ಪುತ್ತೂರಿನ ಮಹಿಳಾ ಕಾಲೇಜಿನ ಪ್ರಾಂಶುಪಾಲರ ಅಮಾನತಿನ ಹಿಂದೆ ಶಾಸಕರ ಕೈವಾಡವಿದೆ. ಮಹಿಳಾ ಅಧಿಕಾರಿಗಳ ವಿರುದ್ಧ ಅಧಿಕಾರದ ದರ್ಪ ತೋರಿಸುತ್ತಿದ್ದಾರೆ. ಈ ಧೋರಣೆ ಇದೇ ರೀತಿ ಮುಂದುವರಿದರೆ ಶಾಸಕರ ಮನೆ ಮುಂದೆ ಮಹಿಳೆಯರನ್ನು ಸೇರಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಪುತ್ತೂರು ಬಿಜೆಪಿ ಮಹಿಳಾ ಮೋರ್ಛಾ ಎಚ್ಚರಿಕೆ ನೀಡಿದೆ.
ಬಿಜೆಪಿ ಮಹಿಳಾ ಮೋರ್ಛಾ ವತಿಯಿಂದ ಮಂಗಳವಾರ ಪುತ್ತೂರು ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿರುವ ಅಮರ್ ಜವಾನ್ ಜ್ಯೊತಿ ಸ್ಮಾರಕದ ಬಳಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಸಮಿತಿ ಮುಖಂಡರಾದ ಸುಲೋಚನಾ ಭಟ್ ಅವರು ಅಭಿವೃದ್ಧಿ ಇಲ್ಲದ ಪುತ್ತೂರು ೮೦ರ ದಶಕಕ್ಕೆ ಮರಳಿದೆ. ಶಾಸಕರ ಒಣ ಜಂಭ, ಗೂಂಡಾಗಿರಿ ಸಂಸ್ಕೃತಿ ಮಾತ್ರ ಕಾಣುತ್ತಿದ್ದು, ಇದಕ್ಕೆ ಮಹಿಳಾ ಅಧಿಕಾರಿಗಳು ಬಲಿಯಾಗುತ್ತಿದ್ದಾರೆ. ಕಾಲೇಜಿನ ಪ್ರಿನ್ಸಿಪಾಲರನ್ನು ಅಮಾನತು ಮಾಡಿದ್ದು, ಮಹಿಳಾ ವೈದ್ಯಾಧಿಕಾರಿ ವರ್ಗಾವಣೆ ಮಾಡಿದ್ದು, ಸರಕಾರಿ ಶಾಲೆಯ ಮುಖ್ಯ ಶಿಕ್ಷಕಿಯನ್ನು ಕಚೇರಿಗೆ ಕರೆದು ಬೈದಿರುವುದು ಇವೆಲ್ಲ ಮಹಿಳಾ ವಿರೋಧಿ ನೀತಿಗೆ ಸಾಕ್ಷಿಯಾಗಿದೆ ಎಂದರು. ಯಾವುದೇ ತಪ್ಪು ಮಾಡದ ಮಹಿಳಾ ಕಾಲೇಜು ಪ್ರಿನ್ಸಿಪಾಲರನ್ನು ಅಮಾನತು ಮಾಡಿರುವುದು ತಪ್ಪು. ಅವರ ಅಮಾನತು ರದ್ದುಪಡಿಸುವವರೆಗೆ ಹೋರಾಟ ಮಾಡಲು ನಾವು ಸಿದ್ಧರಿದ್ದೇವೆ ಎಂದರು.ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಛಾ ಅಧ್ಯಕ್ಷೆ ಮಂಜುಳಾ ರಾವ್ ಮಾತನಾಡಿ, ಮಹಿಳಾ ಅಧಿಕಾರಿಗಳು ಪುತ್ತೂರಿನಲ್ಲಿ ಇರಬಾರದು ಎಂಬ ರೀತಿಯಲ್ಲಿ ಶಾಸಕರು ವರ್ತಿಸುತ್ತಿದ್ದಾರೆ. ಮಹಿಳೆಯರು ಮತ್ತು ದಲಿತರನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ. ಶಾಸಕರ ಈ ಧೋರಣೆ ಮುಂದುವರಿದರೆ ಮಹಿಳೆಯರೆಲ್ಲ ಒಟ್ಟಾಗಿ ಶಾಸಕರ ಮನೆ ಮುಂದೆ ಪ್ರತಿಭಟನೆ ಮಾಡಲೂ ಹಿಂದೆ ಸರಿಯುವುದಿಲ್ಲ. ಶಾಸಕರು ರಸ್ತೆಯಲ್ಲಿ ನಡೆಯಲಾಗದ ಸ್ಥಿತಿ ತರುತ್ತೇವೆ ಎಂದು ಎಚ್ಚರಿಸಿದರು.ದ.ಕ. ಜಿಪಂ ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಮಾತನಾಡಿ, ಶಾಸಕರನ್ನು ಜನ ಆರಿಸಿದ್ದು ಅಭಿವೃದ್ಧಿ ಮಾಡಲು. ದಬ್ಬಾಳಿಕೆ ಮಾಡುವುದಕ್ಕಲ್ಲ. ಕಾಲೇಜಿನ ಪ್ರಾಂಶುಪಾಲರನ್ನು ಎಲ್ಲರೆದುರು ಬೈಯ್ಯುವ ಶಾಸಕರು, ತಾವು ಅಧ್ಯಕ್ಷರಾಗಿರುವ ಕಾಲೇಜಿನ ಅಭಿವೃದ್ಧಿ ಸಮಿತಿಯ ಸಭೆ ಎಷ್ಟು ಮಾಡಿದ್ದೀರಿ. ಕಾಲೇಜಿಗೆ ಎಷ್ಟು ಸಾರಿ ಭೇಟಿ ನೀಡಿದ್ದೀರಿ ಎಂದು ಪ್ರಶ್ನಿಸಿದರು. ಸಂಜೀವ ಮಠಂದೂರು ಶಾಸಕರಾಗಿದ್ದಾಗ ಅನೇಕ ಅಭಿವೃದ್ಧಿ ಆಗಿತ್ತು. ಈಗ ಅಭಿವೃದ್ಧಿ ಶೂನ್ಯವಾಗಿದೆ ಎಂದು ಹೇಳಿದರು.
ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿ.ಬಿ., ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ನಗರಸಭೆ ನಿಕಟಪೂರ್ವ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಮುಖಂಡರಾದ ವಿದ್ಯಾ ಗೌರಿ, ಯಶೋಧಾ, ಆಶಾ ತಿಮ್ಮಪ್ಪ ಗೌಡ, ಲಿಖಿತಾ ಉಪಸ್ಥಿತರಿದ್ದರು.ಮಹಿಳಾ ಮೋರ್ಛಾ ಮುಖಂಡರಾದ ಸ್ವರ್ಣಲತಾ ಹೆಗ್ಡೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗೌರಿ ಬನ್ನೂರು ಕಾರ್‍ಯಕ್ರಮ ನಿರ್ವಹಿಸಿದರು. ಉಪ ವಿಭಾಗಾಧಿಕಾರಿಗೆ ಕೊಡುವ ಮನವಿಯನ್ನು ಜಯಲಕ್ಷ್ಮೀ ಶಗ್ರಿತ್ತಾಯ ಓದಿದರು.