ಮೋಹನ್ ರಾಜ್
ಕನ್ನಡಪ್ರಭ ವಾರ್ತೆ ಮಡಿಕೇರಿಕೋಟ್ಯಾಂತರ ಮಂದಿಗೆ ಆರಾಧ್ಯ ದೈವ, ಕುಡಿಯಲು ಹಾಗೂ ಕೃಷಿಗೆ ನೀರು ಪೂರೈಸುವ ಕರುನಾಡಿನ ಜೀವನದಿ ಎಂದೇ ಖ್ಯಾತಿಯಾದ ಕಾವೇರಿ ನದಿ ಇಂದು ತನ್ನ ಉಗಮ ಸ್ಥಾನವಾದ ಕೊಡಗು ಜಿಲ್ಲೆಯಲ್ಲೇ ಮಲಿನಗೊಳ್ಳುತ್ತಿರುವುದು ವಿಷಾದಕಾರಿ ಸಂಗತಿ.ಹೌದು ಕಾವೇರಿ ನದಿ ತನ್ನ ಹುಟ್ಟೂರಿನಲ್ಲೇ ಅತಿಯಾಗಿ ಮಲಿನಗೊಳ್ಳುತ್ತಿದ್ದಾಳೆ ಅಂದರೆ ತಪ್ಪಾಗಲ್ಲ. ಇದಕ್ಕೆ ಪುಷ್ಟಿ ನೀಡುವ ಅನೇಕ ಸಂಗತಿಗಳನ್ನು ನಾವಿಲ್ಲಿ ಕಾಣಬಹುದು. ಇದೀಗ ಜಿಲ್ಲೆಯಲ್ಲಿ ಕಾಫಿ ಕೊಯ್ಲು ಸಮಯ, ಕೆಲ ಭಾಗದ ಮಾಲೀಕರು ಕಾಫಿ ಪಲ್ಫರ್ ಮಾಡಿದ ಕಲುಷಿತ ನೀರನ್ನು ಕೂಡ ನದಿಗೆ ಹರಿಯ ಬಿಡುತ್ತಿರುವ ಹಿನ್ನೆಲೆ ನದಿ ನೀರು ಬಣ್ಣ ಬದಲಾಗುವುದರ ಜತೆಗೆ ಅಶುದ್ಧಗೊಂಡು ವಿಷಯುಕ್ತವಾಗುತ್ತಿದೆ.
ನೆಲ್ಯಹುದಿಕೇರಿ ಹಾಗೂ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲ ಹೋಟೆಲ್, ರೆಸಾರ್ಟ್, ವಸತಿಗೃಹ ಸೇರಿದಂತೆ ಮನೆಗಳ ಶೌಚದ ನೀರು ಕೂಡ ಪ್ರತಿದಿನ ಹರಿದು, ಕಾವೇರಿ ನದಿ ಸೇರುತ್ತಿದೆ. ಇಲ್ಲಿ ಮಾತ್ರವಲ್ಲ ಮಡಿಕೇರಿ, ಮೂರ್ನಾಡು, ಕೊಂಡಂಗೇರಿ, ಬೇತ್ರಿ, ನಾಪೋಕ್ಲು, ಕೊಟ್ಟಮುಡಿ, ಸೇರಿದಂತೆ ಜಿಲ್ಲೆಯ ವಿವಿಧ ಕಡೆ ಕಾವೇರಿ ನದಿ ತಟದಲ್ಲಿರುವ ಪಟ್ಟಣಗಳ ಹಲವು ಮನೆಗಳ ಶೌಚದ ನೀರು, ಪಟ್ಟಣದ ಅಂಗಡಿಗಳ ತ್ಯಾಜ್ಯ ಸೇರಿದಂತೆ ವಿವಿಧ ತ್ಯಾಜ್ಯದ ನೀರು ಉಪನದಿಗಳ ಮುಖಾಂತರ ಕಾವೇರಿ ಒಡಲು ಸೇರುತ್ತಿದ್ದು, ಮತ್ತಷ್ಟು ಅಶುದ್ಧಗೊಳ್ಳುತ್ತಿದ್ದಾಳೆ ಕಾವೇರಿ.ಇನ್ನೂ ಸಿದ್ದಾಪುರ ಸಮೀಪದ ಕಾವೇರಿ ಸೇತುವೆಯ ಬಳಿಯಲ್ಲಂತೂ ಹೇಳತೀರದಷ್ಟು ರಾಶಿ ರಾಶಿ ಕಸವನ್ನು ಎಸೆಯಲಾಗಿದೆ ಅಂದರೆ ಇಲ್ಲಿ ಬೇರೆ ಯಾರೋ ಪ್ರವಾಸಿಗರು ಅಥವಾ ಹೊರ ಜಿಲ್ಲೆ, ಹೊರ ರಾಜ್ಯದವರು ತಂದು ಈ ತ್ಯಾಜ್ಯವನ್ನು ಎಸೆದಿಲ್ಲ ಬದಲಿಗೆ ಬುದ್ಧಿವಂತ ಸ್ಥಳೀಯ ನಾಗರಿಕರೇ ಈ ಕೃತ್ಯ ಎಸಗುತ್ತಿದ್ದಾರೆ. ಅಂದರೆ ಪ್ರತಿನಿತ್ಯ ಅವರು ಬಳಸುವ ಪ್ಲಾಸ್ಟಿಕ್ ಮತ್ತು ಇನ್ನಿತರರ ವಿನಾಶಕಾರಿ ತ್ಯಾಜ್ಯವನ್ನು ರಾಶಿಗಟ್ಟಲೆ ತಂದು ಇಲ್ಲಿಗೆ ಎಸೆದು ಹೋಗುತ್ತಿದ್ದಾರೆ.
ಮುಂದಿನ ಪೀಳಿಗೆಗೆ ಸ್ವಚ್ಚ ಪರಿಸರವನ್ನು ಉಳಿಸಿಬೇಕಾದ ಬುದ್ದಿಜೀವಿ ಎಂದು ಹೇಳಿಕೊಳ್ಳುವ ಮಾನವ ಸಮುದಾಯ ಇಡಿ ಪರಿಸರವನ್ನೇ ಹಾಳು ಮಾಡಿಕೊಂಡು ಬರುತ್ತಿರುವುದಕ್ಕೆ ಇಂತಹ ಉದಾಹರಣೆಗಳೇ ಸಾಕ್ಷಿ.ಕಳೆದ ಕೆಲ ವರ್ಷಗಳಿಂದ ಕಾವೇರಿ ಸೇತುವೆ ಸುತ್ತಮುತ್ತ ಪ್ರದೇಶವನ್ನು ನೆಲ್ಯಹುದಿಕೇರಿಯ ಡೊಮಿನೋಸ್ ಯುವಕ ಸಂಘ, ಮುತ್ತಪ್ಪ ಯುವಕಲಾ ಸಂಘ, ಯುವ ಬ್ರಿಗೇಡ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ನದಿ ತೀರ ಹಾಗೂ ನೀರಿನಲ್ಲಿ ಎಸೆದಿದ್ದ ತ್ಯಾಜ್ಯಗಳನ್ನು ನದಿಯಿಂದ ತೆಗೆದು ಸ್ವಚ್ಛಗೊಳಿಸಿ, ದಡಗಳಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಟ್ಟು, ಪಾರ್ಕ್ ನಿರ್ಮಾಣ ಮಾಡುವ ಕಾರ್ಯ ಮಾಡಿವೆ. ಹೀಗಿದ್ದರೂ ಶುಚಿತ್ವ ಕಾಪಾಡಬೇಕಾದ ಸ್ಥಳೀಯರು ಅರಿತೇ ಇಂತಹ ಕೃತ್ಯ ಎಸಗುತ್ತಿರುವುದು ದೊಡ್ಡ ದುರಂತವೇ ಸರಿ.
ಈ ಹಿಂದಿನಿಂದಲೂ ಕಾವೇರಿ ನದಿಗೆ ತ್ಯಾಜ್ಯ ನೀರು, ಕಸ ಸೇರುತ್ತಿರುವ ಕುರಿತು ಹಲವು ವರದಿಗಳು ಬಂದರು ಕೂಡ ನದಿ ಸಂರಕ್ಷಣೆ ಮಾಡಬೇಕಾದ ಮಾಲಿನ್ಯ ನಿಯಂತ್ರಣ ಮಂಡಳಿ ಇತ್ತ ಗಮನ ಹರಿಸದೆ ನಿರ್ಲಕ್ಷ್ಯ ತೋರಿರುವುದು ಕೂಡ ಕಾವೇರಿ ಕಲುಷಿತಗೊಳ್ಳಲು ಎಡೆಮಾಡಿಕೊಟ್ಟಂತಿದೆ. ಆದುದರಿಂದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗಮನ ಹರಿಸಿ ಜೀವ ನದಿಯ ಪಾವಿತ್ರ್ಯತೆಯನ್ನು ಉಳಿಸಬೇಕೆಂಬುದೇ ಪ್ರಜ್ಞಾವಂತ ನಾಗರಿಕರ ಒತ್ತಾಯವಾಗಿದೆ.
ಕಾವೇರಿ ನದಿ ಸಂರಕ್ಷಣೆಗೆ ಸರ್ಕಾರ ಒತ್ತು ನೀಡಲಿ ಯುವ ಬ್ರಿಗೇಡ್ ಹಾಗೂ ಮುತ್ತಪ್ಪ ಯುವಕಲಾ ಸಂಘದ ವತಿಯಿಂದ ಸಿದ್ದಾಪುರ ಸೇತುವೆಯ ಬಳಿ ನದಿ ಶುಚಿಗೊಳಿಸಲಾಗಿತ್ತು. ಮದ್ಯದ ಬಾಟಲಿಗಳು ಪ್ಲಾಸ್ಟಿಕ್ ಸೇರಿದಂತೆ ರಾಶಿಗಟ್ಟಲೆ ತ್ಯಾಜ್ಯ ನದಿಯಿಂದ ಹೊರತೆಗೆದಿದ್ದೆವು. ಇದೀಗ ಜನ ಮತ್ತದೇ ಚಾಳಿ ಮುಂದುವರೆಸಿದ್ದಾರೆ. ಗ್ರಾಮ ಪಂಚಾಯಿತಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಕಾವೇರಿ ನದಿ ಸಂರಕ್ಷಣೆಗೆ ಸರ್ಕಾರ ವಿಶೇಷ ಒತ್ತು ನೀಡಬೇಕು.ಪ್ರಣಾವ್ (ಅಪ್ಪು) ಅಧ್ಯಕ್ಷರು, ಮುತ್ತಪ್ಪ ಯುವಕಲಾ ಸಂಘಕಾವೇರಿ ನದಿ ನೀರಿಗೆ ತ್ಯಾಜ್ಯಗಳನ್ನು ಎಸೆಯುವುದು, ಕಲುಷಿತ ನೀರನ್ನು ಹರಿಯ ಬಿಡುತ್ತಿರುವ ಕುರಿತು ಸ್ಥಳೀಯ ಸಂಘ ಸಂಸ್ಥೆಗಳ ಮುಖಾಂತರ ಮಾಹಿತಿ ಗಮನಕ್ಕೆ ಬಂದಿದೆ. ಶೀಘ್ರದಲ್ಲೇ ಈ ಭಾಗಕ್ಕೆ ಸೆನ್ಸಾರ್ ಕ್ಯಾಮರಾ ಅಳವಡಿಸಲಾಗುವುದು. ಅಲ್ಲದೆ ಕಸವನ್ನು ಎಸೆಯುವವರಿಗೆ ಹಾಗೂ ತ್ಯಾಜ್ಯ ನೀರನ್ನು ನದಿಗೆ ಬಿಡುತ್ತಿರುವವರಿಗೆ ದೊಡ್ಡ ಮೊತ್ತದ ದಂಡ ವಿಧಿಸಲಾಗುತ್ತದೆ. ಮಡಿಕೇರಿ ರಸ್ತೆಯಲ್ಲಿ ಈಗಾಗಲೇ ಕ್ಯಾಮರಾ ಅಳವಡಿಸಲಾಗಿದ್ದು, ಕಸದ ಸಮಸ್ಯೆ ಕಡಿಮೆ ಆಗಿದೆ.
ನಂಜುಂಡಸ್ವಾಮಿ, ನೆಲ್ಯಹುದಿಕೇರಿ ಪಿಡಿಒಸೇತುವೆ ಬಳಿ ಇಷ್ಟೊಂದು ಪ್ರಮಾಣದಲ್ಲಿ ಕಸದ ರಾಶಿಯಾಗಲು ಪಂಚಾಯಿತಿಗಳ ನಿರ್ಲಕ್ಷ್ಯವೇ ನೇರ ಹೊಣೆ. ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ದೊಡ್ಡ ಪ್ರಮಾಣದ ದಂಡ ವಿಧಿಸಲು ಸ್ಥಳೀಯ ಪಂಚಾಯಿತಿಗಳು ಕ್ರಮ ಕೈಗೊಳ್ಳಬೇಕು. ಜತೆಗೆ ಜನತೆಗೂ ಜಾಗೃತಿ ಕೊರತೆ ಹೆಚ್ಚಾಗಿದೆ. ಶಿಯಾಬುದ್ದೀನ್ ವಿ.ಪಿ.ಎಸ್, ಜೆಡಿಎಸ್ ಗ್ರಾಮ ಸಮಿತಿ ಅಧ್ಯಕ್ಷ, ನೆಲ್ಯಹುದಿಕೇರಿ
ನಾವು ಹಿಂದಿನಿಂದಲೂ ಸೇತುವೆ ಸುತ್ತಮುತ್ತ ಗಿಡಗಳನ್ನು ನೆಟ್ಟು ಕಸದ ರಾಶಿ ಇರುವ ಕಡೆಗಳಲ್ಲಿ ಸ್ವಚ್ಛತೆ ಕಾರ್ಯಕ್ರಮ ಕೈಗೊಳ್ಳುವ ಮೂಲಕ ಶುಚಿಗೊಳಿಸಿದ್ದೆವು. ಇತ್ತೀಚೆಗೆ ಜನ ಹೆಚ್ಚಿನ ಪ್ರಮಾಣದಲ್ಲಿ ಕಸ ಎಸೆದಿರುವುದು ವಿಷಾದಕರ ಸಂಗತಿ. ಈ ಕುರಿತು ಸಂಬಂಧಪಟ್ಟ ಪಂಚಾಯಿತಿಗಳಿಗೆ ಮನವಿ ಸಲ್ಲಿಸಿ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದೇವೆ.ಶ್ರೇಯಸ್ ಕುಮಾರ್, ಅಧ್ಯಕ್ಷರು ಡೊಮಿನೋಸ್ ಯುವಕ ಸಂಘ
ನದಿ ಸಮೀಪ ರಾಶಿ ರಾಶಿ ಕಸವನ್ನು ಸುರಿದಿರುವ ಕುರಿತು ಮಾಹಿತಿ ದೊರೆತೆ ಬೆನ್ನಲೆ ತ್ಯಾಜ್ಯವನ್ನು ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಪಂಚಾಯಿತಿ ಕಡೆಯಿಂದ ಅಳವಡಿಸಲಾಗಿದ್ದ ಕ್ಯಾಮರ ನಿರ್ವಹಣೆ ಇಲ್ಲದೆ ಕೆಟ್ಟು ನಿಂತಿದ್ದ ಹಿನ್ನೆಲೆ ಸಮಸ್ಯೆಯನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಸಿಸಿ ಕ್ಯಾಮರಾವನ್ನು ದುರಸ್ತಿ ಗೊಳಿಸಲು ಈಗಾಗಲೇ ಸೂಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ಕಸ ಎಸೆಯುವವರಿಗೆ ದಂಡ ವಿಧಿಸುವ ಮೂಲಕ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗುವುದು. ಸ್ಥಳೀಯರು ಹೆಚ್ಚಾಗಿ ಎಸೆಯಲು ಸಾಧ್ಯವಿಲ್ಲ. ಯಾಕೆಂದರೆ ಮನೆ ಮನೆಗೆ ಕಸದ ವಾಹನ ತೆರಳುತ್ತಿದೆ. ವಲಸೆ ಕಾರ್ಮಿಕರು ಎಸೆದಿರುವ ಸಾಧ್ಯತೆ ಇದೆ ಯಾಕೆಂದರೆ ಅವರಿಗೆ ಸ್ಥಳೀಯ ಭಾಷೆಯ ಹಿಡಿತವಿಲ್ಲ.। ತಿಮ್ಮಯ್ಯ, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಸಿದ್ದಾಪುರ ಗ್ರಾಮ ಪಂಚಾಯಿತಿ