ಕನ್ನಡಪ್ರಭ ವಾರ್ತೆ ಕುಶಾಲನಗರ

ಪ್ರತಿಯೊಬ್ಬರೂ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಖ್ಯಾತ ಚಿತ್ರನಟ ರಮೇಶ್ ಅರವಿಂದ್ ಕರೆ ನೀಡಿದ್ದಾರೆ.

ಕುಶಾಲನಗರದ ಎಸ್ ಎಲ್ ಎನ್ ಸಭಾಂಗಣದಲ್ಲಿ ಕುಶಾಲನಗರ ರೋಟರಿ ಸಂಸ್ಥೆಯ ಸುವಣ೯ ಸಂಭ್ರಮ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಯಾವುದೇ ಕೆಲಸವನ್ನು ಮನಸ್ಸಿಟ್ಟು ಮಾಡಿದ್ದೇ ಆದಲ್ಲಿ ಅದ್ಬುತ ಯಶಸ್ಸು ಸಾಧ್ಯವಿದೆ, ಯಾವುದೇ ಕೆಲಸ ಮಾಡುವ ಮುನ್ನ ನಿಮ್ಮ ಕೆಲಸವನ್ನು ಜಗತ್ತು ಗಮನಿಸುತ್ತಿರುತ್ತದೆ ಎಂದುಕೊಂಡು ಮಾಡಿದಾಗ ಕೆಲಸ ಸುಲಭ ಸಾಧ್ಯವಾಗುತ್ತದೆ ಎಂದರು.ಸಾಮಾಜಿಕ ಸೇವೆ ಮೂಲಕ ಕುಶಾಲನಗರ ರೋಟರಿ ಸಂಸ್ಥೆಯು 50 ವಷ೯ಗಳನ್ನು ಕಳೆದಿರುವುದು ಗಮನಾಹ೯ವಾಗಿದೆ ಎಂದು ಶ್ಲಾಘಿಸಿದ ರಮೇಶ್ ಅರವಿಂದ್ ಖ್ಯಾತ ಕಲಾವಿದರು ಮೊದಲಿನಂತೆ ವಷ೯ಗಟ್ಟಲೆ ವಾರಗಟ್ಟಲೆ ಸೂಪರ್ ಸ್ಟಾರ್ ಗಳಾಗಿ ಮುಂದುವರೆಯುವ ಕಾಲದ ಬದಲಾಗಿ ಸೂಪರ್ ಸ್ಟಾರ್ ಗಿರಿ ಗಂಟೆಗೆ ಸೀಮಿತವಾಗುವ ಕಾಲದಲ್ಲಿ ನಾವಿದ್ದೇವೆ. ಆದರೆ ರೋಟರಿ ಸಂಸ್ಥೆಯು ಕೈಗೊಳ್ಲುವ ಸೇವಾ ಕಾಯ೯ ಸಮಾಜದಲ್ಲಿ 50 ವಷಾ೯ನುಗಟ್ಟಲೆ ಕಾಲ ರೋಟರಿಯನ್ನು ಸೂಪರ್ ಸ್ಟಾರ್ ಆಗಿಯೇ ಇರುವಂತೆ ಮಾಡಿದೆ ಎಂದೂ ರಮೇಶ್ ಹೇಳಿದರು.ಸಂವಾದ ಕಾಯ೯ಕ್ರಮದಲ್ಲಿ ಪಾಲ್ಗೊಂಡಿದ್ದ ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಸಣ್ಣ ವಯಸ್ಸಿನಲ್ಲಿಯೇ ಜನ ನನಗೆ ಶಾಸಕನಾಗುವ ಅವಕಾಶ ಕಲ್ಪಿಸಿದ್ದಾರೆ. ಹೀಗಾಗಿ ಜನಸೇವೆಗೆ ತಾನು ಸಮಯ ಮುಡಿಪಾಗಿಟ್ಟಿದ್ದೇನೆ ಎಂದರು. ಸುಮಾರು 25 ವಷ೯ಗಳ ಸಮಸ್ಯೆಯಾಗಿ ಪರಿಣಮಿಸಿದ್ದ ಮಡಿಕೇರಿ ತ್ಯಾಜ್ಯದ ಗುಡ್ಡೆಗೆ ವೈಜ್ಞಾನಿಕ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಲಾಗಿದೆ. ಸ್ವಚ್ಛಭಾರತ್ ಯೋಜನೆಯಡಿಯಲ್ಲಿ 12 ಕೋಟಿ ರು. ಅನುದಾನದಲ್ಲಿ ಮಡಿಕೇರಿ, ಕುಶಾಲನಗರ ಮತ್ತು ವೀರಾಜಪೇಟೆಗಳಲ್ಲಿ ತ್ಯಾಜ್ಯ ವಿಲೇವಾರಿಯನ್ನು ವೈಜ್ಞಾನಿಕ ರೀತಿಯಲ್ಲಿ ಮಾಡಲಾಗುತ್ತದೆ ಎಂದು ಹೇಳಿದರು.ಮಕ್ಕಳಲ್ಲಿ ಪ್ಲಾಸ್ಟಿಕ್ ಬಳಕೆಯಿಂದಾಗುವ ಅಪಾಯದ ಬಗ್ಗೆ ತಿಳುವಳಿಕೆ ಮೂಡಿಸಿ, ಪ್ಲಾಸ್ಟಿಕ್ ಮುಕ್ತ ಕೊಡಗನ್ನು ರೂಪಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದೂ ಡಾ.ಮಂತರ್ ಗೌಡ ಕರೆ ನೀಡಿದರು.ರೋಟರಿ ಸುವಣ೯ ಸಂಭ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ರೋಟರಿ ಜಿಲ್ಲೆ 3181 ನ ಗವನ೯ರ್ ಪಿ.ಕೆ. ರಾಮಕೃಷ್ಣ, ಸ್ವಚ್ಚ ಕುಶಾಲನಗರದಂತ ಗಮನಾಹ೯ ಯೋಜನೆ ಮೂಲಕ ರೋಟರಿ ಸಂಸ್ಥೆಯು ಅತ್ಯುತ್ತಮ ಕೆಲಸ ಮಾಡಿದೆ ಎಂದು ಶ್ಲಾಘಿಸಿದರು. ಎಸ್ ಎಲ್ ಎನ್ ಸಂಸ್ಥೆಯ ಪ್ರಮುಖರಾದ ಸಾತಪ್ಪನ್ ಮಾತನಾಡಿ, ಕುಶಾಲನಗರ ಸ್ವಚ್ಚ ನಗರವಾಗಿ ರೂಪಾತಂರಗೊಂಡು ಕೊಡಗಿನಲ್ಲಿಯೇ ಸ್ವಚ್ಚತೆಗೆ ಮಾದರಿಯಾಗಬೇಕೆಂದು ಕರೆ ನೀಡಿದರು.ಕುಶಾಲನಗರ ರೋಟರಿ ಸಂಸ್ಥೆಯ ಅಧ್ಯಕ್ಷ ಮಾಳೆಯಂಡ ಮನುಪೆಮ್ಮಯ್ಯ ಮಾತನಾಡಿ, 48 ಸದಸ್ಯರ ಸಹಕಾರದೊಂದಿಗೆ ಸ್ವಚ್ಚ ಕುಶಾಲನಗರ, ಪ್ಲಾಸ್ಟಿಕ್ ಮುಕ್ತ ಕುಶಾಲನಗರಕ್ಕಾಗಿ ಪಣತೊಟ್ಟಿದ್ದೇವೆ. ಉತ್ತಮ ಸಮಾಜದ ಪರಿಕಲ್ಪನೆಯೊಂದಿಗೆ ವೈವಿಧ್ಯಮಯ ಕಾಯ೯ಕ್ರಮಗಳನ್ನು ಆಯೋಜಿಸುತ್ತಾ ಸುವಣ೯ ಸಂಭ್ರಮ ವಷ೯ವನ್ನು ಆಚರಿಸಿಕೊಳ್ಳಲಾಗುತ್ತಿದೆ ಎಂದರು.ಸುವಣ೯ ಸಂಭ್ರಮ ಆಚರಣಾ ಸಮಿತಿ ಅಧ್ಯಕ್ಷ ಎಸ್.ಕೆ. ಸತೀಶ್ ಮಾತನಾಡಿ, 1976 ರಲ್ಲಿ ಕೆ.ಬಿ. ಬೋಪಣ್ಣ ಅಧ್ಯಕ್ಷತೆಯಲ್ಲಿ ಪ್ರಾರಂಭವಾದ ಕುಶಾಲನಗರ ರೋಟರಿ ಸಂಸ್ಥೆಯು ಮಾನವ ಸೇವೆ, ವಿದ್ಯಾಸೇವೆ, ಆರೋಗ್ಯಸೇವೆಯಂಥ ಹಲವಾರು ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದೆ ಎಂದು ಮಾಹಿತಿ ನೀಡಿದರು.ಎಸ್ ಎಲ್ ಎನ್ ಸಂಸ್ಥೆ ಪ್ರಮುಖ ವಿಶ್ವನಾಥನ್, ದಾನಿಗಳಾದ ಸಿ.ಜೆ. ಅನಿಲ್ ಕುಮಾರ್, ಶರಣ್ ಪೂಣಚ್ಚ, ಕುಶಾಲನಗರ ರೋಟರಿ ಕ್ಲಬ್‌ನ ಕಾರ್ಯದರ್ಶಿ ಹೆಚ್.ಪಿ. ಮಂಜುನಾಥ್, ಖಜಾಂಚಿ ಕೆ.ಎಂ. ಜೇಕಬ್, ಸುವರ್ಣ ಸಂಭ್ರಮ ಸಮಿತಿ ಉಪಾಧ್ಯಕ್ಷರಾಗಿ ಮಹೇಶ್ ಕುಮಾರ್ ನಲ್ವಾಡೆ, ಡಾ. ಹರಿ ಎ. ಶೆಟ್ಟಿ, ಸಂಚಾಲಕ ಕ್ರೆಜ್‌ವೆಲ್ ಕೋಟ್ಸ್, ಸಹಾಯಕ ಗವರ್ನರ್ ಉಲ್ಲಾಸ್‌ಕೃಷ್ಣ, ಸಮಿತಿ ಕಾರ್ಯದರ್ಶಿ ಎಂ.ಡಿ. ರಂಗಸ್ವಾಮಿ, ಖಜಾಂಚಿ ಪಿ.ಆರ್. ನವೀನ್, ಸಹ ಕಾರ್ಯದರ್ಶಿ ರಿಚರ್ಡ್ ಡಿಸೋಜ, ಹಣಕಾಸು ಸಮಿತಿ ಅಧ್ಯಕ್ಷ ಸಿ.ಎ. ರುದ್ರೇಶ್ ಪಟೇಲ್, ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಕೆ.ಎಸ್. ರಾಜಶೇಖರ್, ಸೇರಿದಂತೆ ರೋಟರಿ ಪ್ರಮುಖರು ಹಾಜರಿದ್ದರು. ಕಾಯ೯ಕ್ರಮದಲ್ಲಿ ಎಸ್ ಎಲ್ ಎನ್ ಸಂಸ್ಥೆಯ ಸಾತಪ್ಪನ್ ಮತ್ತು ವಿಶ್ವನಾಥನ್ ಅವರಿಗೆ ರೋಟರಿ ಗೋಲ್ಡನ್ ಪಸ೯ನಾಲಿಟಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಖ್ಯಾತ ನಿರೂಪಕ ನಿರಂಜನ್ ದೇಶಪಾಂಡೆ ನಿರೂಪಿಸಿದ ಸಾಂಸ್ಕೖತಿಕ ಕಾಯ೯ಕ್ರಮಗಳು ಕಿಕ್ಕಿರಿದು ಸೇರಿದ್ದ ಜನರನ್ನು ಆಕಷಿ೯ಸಿತ್ತು. ಖ್ಯಾತ ಗಾಯಕ ಚಂದನ್ ಶೆಟ್ಟಿ ಅವರ ಹಾಡುಗಳು, ಮಿಮಿಕ್ರಿ ಕಲಾವಿದ ಗೋಪಿಯವರ ಮಿಮಿಕ್ರಿ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಪ್ರವೀಣ್ ಮತ್ತು ದೀಪಿಕಾ ಅವರ ಹಾಸ್ಯ, ನೖತ್ಯ ಕಾಯ೯ಕ್ರಮಗಳು, ವಣ೯ ಚೌಹಾನ್ ಮತ್ತು ಖಾಸಿಂ ಆಲಿ ಅವರ ಗಾಯನ ಕಾಯ೯ಕ್ರಮಗಳು ರೋಟರಿ ಸುವಣ೯ ಮಹೋತ್ಸವದ ಪ್ರಮುಖ ಆಕಷ೯ಣೆಯಾಗಿದ್ದವು. ಕೊಡವ ನೖತ್ಯಕ್ಕೆ ಚಂದನ್ ಶೆಟ್ಟಿ ಕೂಡ ಹೆಜ್ಜೆ ಹಾಕಿ ಗಮನ ಸೆಳೆದರು.ಪತ್ರಕರ್ತರ ಸಂಘದ ಕಟ್ಟಡಕ್ಕೆ 50 ಸಾವಿರ ರು.

ಕಾರ್ಯಕ್ರಮದಲ್ಲಿ ರೋಟರಿ ಸುವರ್ಣ ಮಹೋತ್ಸವ ಅಂಗವಾಗಿ ಕುಶಾಲನಗರ ಕಾರ್ಯನಿರತ ಪತ್ರಕರ್ತರ ಸಂಘದ ಕಟ್ಟಡ ನಿರ್ವಹಣೆಗಾಗಿ ರೋಟರಿ ವತಿಯಿಂದ 50 ಸಾವಿರ ರುಪಾಯಿ ಚೆಕ್ ಅನ್ನು ಸಂಘದ ಅಧ್ಯಕ್ಷರಾದ ಚಂದ್ರಮೋಹನ್ ಎಂ.ಎನ್. ಅವರಿಗೆ ರೋಟರಿ ಅಧ್ಯಕ್ಷ ಮನು ಪೆಮ್ಮಯ್ಯ ಕ್ಷೇತ್ರ ಶಾಸಕ ಡಾ ಮಂತರ್ ಗೌಡ ಉಪಸ್ಥಿತಿಯಲ್ಲಿ ಹಸ್ತಾಂತರಿಸಿದರು.


ಇದೇ ಸಂದರ್ಭ ಶಾಸಕ ಡಾ ಮಂತರ್ ಗೌಡ ಅವರು ಕುಶಾಲನಗರ ಕಾರ್ಯನಿರತ ಪತ್ರಕರ್ತರ ಸಂಘದ ಕಟ್ಟಡ ನಿರ್ಮಾಣಕ್ಕೆ ಶಾಸಕರ ಅನುದಾನದಲ್ಲಿ 5 ಲಕ್ಷ ರೂಗಳ ದೇಣಿಗೆ ನೀಡುವುದಾಗಿ ಘೋಷಿಸಿದರು.