ಕಾರಟಗಿ: ಲೋಕಸಭೆಯ ಹಾಲಿ ಬಲದ ಆಧಾರದ ಮೇಲೆ ಮಹಿಳಾ ಮೀಸಲಾತಿ ತಕ್ಷಣವೇ ಜಾರಿ ಮಾಡಬೇಕೆಂದು ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಕಾರಟಗಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ನವಲಿ ವೃತ್ತದ ಬಸ್ ನಿಲ್ದಾಣದ ಎದುರು ಕಾರಟಗಿ ತಾಲೂಕು ಘಟಕದ ಸದಸ್ಯೆಯರು ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಕೆಲಕಾಲ ಪ್ರತಿಭಟನೆ ನಡೆಸಿದರು.ಈ ವೇಳೆ ಮಹಿಳಾ ಘಟಕದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಗೊಂಡಬಾಳ ಮಾತನಾಡಿ, 2024ರ ಲೋಕಸಭಾ ಚುನಾವಣೆಯಿಂದಲೇ ನಾರಿಶಕ್ತಿ ವಂದನ್ ಅಧಿನಿಯಮ ಜಾರಿಗೆ ನಾವು ಆಗ್ರಹಿಸಿದ್ದೇವು. ಆದರೆ, ಈ ಬೇಡಿಕೆ ನಿರ್ಲಕ್ಷಿಸಲಾಯಿತು. ಸುಮಾರು 30 ತಿಂಗಳು ಸುಮ್ಮನಿದ್ದು, ಇದ್ದಕ್ಕಿದ್ದಂತೆ ಏ.16ರ ರಾತ್ರಿ ಮಸೂದೆ ಜಾರಿಗೆ ತರಲಾಯಿತು. ಮಹಿಳಾ ಮೀಸಲಾತಿ ಕಾನೂನು ಮತ್ತು ಕ್ಷೇತ್ರ ಪುನರ್ ವಿಂಗಡಣೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರದ ಎನ್‌ಡಿಎ ಸರ್ಕಾರವು ಕೇವಲ ರಾಜಕೀಯ ಲಾಭಕ್ಕಾಗಿ ಈ ವಿಷಯ ಬಳಸಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಾ ಘಟಕದ ಅಧ್ಯಕ್ಷೆ ಸೌಮ್ಯ ಕಂದಗಲ್ ಮಾತನಾಡಿ, ಕಾಂಗ್ರೆಸ್ ಯಾವತ್ತಿಗೂ ಮಹಿಳೆಯರ, ರೈತರ ಹಾಗೂ ಬಡವರ ಪರವಾಗಿದ್ದು, ಮಹಿಳೆಯರಿಗಾಗಿ ಹಲವಾರು ಯೋಜನೆ ಜಾರಿಗೆ ತಂದಿದೆ. ಆದರೆ, ಬಿಜೆಪಿ ಮೊದಲಿನಿಂದಲೂ ಮಹಿಳಾ ವಿರೋಧಿ ಧೋರಣೆ ತಳೆದಿದೆ. ಬಿಜೆಪಿ ಮಹಿಳೆಯರ ಮೇಲೆ ನಿಜವಾದ ಕಾಳಜಿ ಇದ್ದರೆ ಮೊದಲು ಕ್ಷೇತ್ರ ವಿಂಗಡಣೆ ಎಂಬ ಷರತ್ತನ್ನು ಬಿಟ್ಟು ತಕ್ಷಣವೇ ಮಹಿಳಾ ಮೀಸಲಾತಿ ಕಾನೂನನ್ನು ಜಾರಿಗೆ ತರಲಿ ಎಂದು ಒತ್ತಾಯಿಸಿದರು.ಜಿಲ್ಲಾ ಮಹಿಳಾ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೀಪಾ ರಾಥೋಡ್, ಶರಣಪ್ಪ ಪರಕಿ ಮಾತನಾಡಿ, ಅಂದಿನ ಪ್ರಧಾನ ಮಂತ್ರಿ ದಿ.ರಾಜೀವ್ ಗಾಂಧಿ 73-74 ನೇ ತಿದ್ದುಪಡಿ ಮೂಲಕ ಎಲ್ಲ ಸ್ಥಳಿಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ ನೀಡಿದ್ದರಿಂದ ಇಂದು ಸ್ಥಳಿಯ ಸಂಸ್ಥೆಗಳಲ್ಲಿ ಶೇ.50% ಮಹಿಳಾ ಮೀಸಲು ಇದೆ. ಮನುವಾದಿ ಬಿಜೆಪಿ ಮಹಿಳೆಯರನ್ನು ಸದಾ ಹತ್ತಿಡುತ್ತಾ ನಾಟಕ ಮಾಡುತ್ತಾ ಬಂದಿದೆ. ಕಾಂಗ್ರೆಸ್ 16 ವರ್ಷ ಮಹಿಳಾ ಪ್ರಧಾನಿ, ಮೊದಲ ರಾಷ್ಟ್ರಪತಿ, ಮುಖ್ಯಮಂತ್ರಿ, ರಾಜ್ಯಪಾಲರು ಸೇರಿದಂತೆ ಅನೇಕ ಸಾಂವಿಧಾನಿಕ ಮಹತ್ವದ ಹುದ್ದೆ ನೀಡಿ ಗೌರವಿಸಿದೆ. ಇಂದೇ ಪ್ರಧಾನಿ ನರೇಂದ್ರ ಮೋದಿ ರಾಜಿನಾಮೆ ಕೊಟ್ಟು ತಮ್ಮ ಸ್ಥಾನಕ್ಕೆ ಮಹಿಳೆಯನ್ನು ಕೂಡಿಸಲಿ, ಇಲ್ಲದಿದ್ದರೆ, ನಿಮ್ಮ ಊಸರವಳ್ಳಿ ನಾಟಕ ಅರ್ಥ ಆಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣೆಗೌಡ ಮಾಲಿ ಪಾಟೀಲ್, ನಗರ ಘಟಕ ಅಧ್ಯಕ್ಷ ಅಯ್ಯಪ್ಪ ಉಪ್ಪಾರ, ಮಹಿಳಾ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷೆ ಯಶೋಧ ಮರಡಿ, ನಗರ ಘಟಕದ ಅಧ್ಯಕ್ಷೆ ಅಂಬಿಕಾ ವಳಕಲದಿನ್ನಿ, ಸಾವಿತ್ರಿ ಕನ್ನಾರಿ, ಶ್ರೀದೇವಿ ಬಡಿಗೇರ, ಸಿದ್ದಲಿಂಗಮ್ಮ ಶೀಲವಂತರ, ಪಲ್ಲವಿ ಟಿವಿಎಸ್, ಬಿಸಿಯೂಟ ತಯಾರಕರ ಸಂಘ ಅಧ್ಯಕ್ಷೆ ಸುನೀತಾ ಹಾಗೂ ಅನಿತಾ ನಾಯಕ ಸೇರಿದಂತೆ ಬ್ಲಾಕ್ ಗ್ಯಾರಂಟಿ ಸಮಿತಿ ಜಿಲ್ಲಾ ಉಪಾಧ್ಯಕ್ಷ ನಾಗರಾಜ್ ಅರಳಿ, ಪುರಸಭೆ ಅಧ್ಯಕ್ಷ ಮಂಜುನಾಥ್ ಮೇಗೂರು, ಸ್ಥಾಯಿ ಸಮಿತಿ ಅಧ್ಯಕ್ಷ ದೊಡ್ಡಬಸವರಾಜ್ ಬೂದಿ, ಚನ್ನಬಸಪ್ಪ ಸುಂಕದ್, ಶರಣಪ್ಪ ದಿವಟರ್, ಶರಣಪ್ಪ ಕಾಯಿಗಡ್ಡಿ, ಮೂಕಪ್ಪ ನಾಯಕ, ಬಸವರಾಜ್ ಬೂದಗುಂಪಾ, ಮಂಜುನಾಥ್ ನಾಯಕ, ಚಂದ್ರಶೇಖರ ಉಪ್ಪಾರ, ಶರಣಪ್ಪ ಸುಗ್ಗನಳ್ಳಿ ಇನ್ನಿತರರು ಇದ್ದರು.