ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಬಿಹಾರ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಪ್ರಚಂಡ ಜಯಭೇರಿ ಸಾಧಿಸಿರುವ ಹಿನ್ನೆಲೆಯಲ್ಲಿ ನಗರದ ಮಹಾವೀರ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್ ಮಾತನಾಡಿ, ಬಿಹಾರ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಎನ್‌ಡಿಎ ಮೈತ್ರಿಕೂಟಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟಿದೆ. ಕಾಂಗ್ರೆಸ್ ದೇಶಾದ್ಯಂತ ಮತಗಳ್ಳತನ ನಡೆಯುತ್ತಿದೆ ಎಂದು ಆರೋಪಿಸಿ ರಾಷ್ಟ್ರಾದ್ಯಂತ ಅಭಿಯಾನ ನಡೆಸಿದ್ದರು. ಆದರೆ, ಮತದಾರರು ಇದನ್ನು ಗಣನೆಗೆ ತೆಗೆದುಕೊಳ್ಳದೆ ಎನ್‌ಡಿಎ ಮೈತ್ರಿಕೂಟಕ್ಕೆ ಹೆಚ್ಚಿನ ಬೆಂಬಲ ನೀಡಿದ್ದಾರೆ. ಇದರಿಂದ ಸಾರ್ವಜನಿಕವಾಗಿ ಕಾಂಗ್ರೆಸ್ ಮುಖಭಂಗಕ್ಕೆ ಒಳಗಾಗಿದೆ ಎಂದು ಹೇಳಿದರು.
ಬಿಹಾರ ಚುನಾವಣೆ ಬಿಜೆಪಿಗೆ ದೊಡ್ಡ ಮಟ್ಟದ ಗೆಲುವನ್ನು ತಂದುಕೊಟ್ಟಿದೆ. ಜಂಗಲ್‌ರಾಜ್ಯ ಎಂಬ ಹೆಸರು ಪಡೆದುಕೊಂಡಿದ್ದ ಬಿಹಾರದಲ್ಲಿ ನಿತೀಶ್‌ಕುಮಾರ್ ಅವರ ಆಡಳಿತ ವೈಖರಿ ಎಲ್ಲವನ್ನೂ ಬದಲಾವಣೆ ಮಾಡಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಮತ್ತು ನಿತೀಶ್ ಕುಮಾರ್ ಅವರ ಜೋಡಿ ಒಳ್ಳೆಯ ಕೆಲಸ ಮಾಡುವುದರೊಂದಿಗೆ ಅಲ್ಲಿನ ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.ಮನೆಗೊಂದು ಕೆಲಸ ಎಂಬ ಕಿವಿ ಮೇಲೆ ಹೂ ಮುಡಿಸುವ ಕೆಲಸವನ್ನು ಮಹಾ ಘಟಬಂಧನ್ ಮಾಡಿತ್ತು. ಇದು ಸಾಧ್ಯವಾಗದ ಮಾತು. ಆದರೂ ಮತದಾರರು ಎನ್‌ಡಿಎ ಮೈತ್ರಿಕೂಟಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಟನ್ ಕಬ್ಬಿನ ಬೆಲೆಯನ್ನು ೧೦೦ ರು. ಹೆಚ್ಚಳ ಮಾಡುವಂತೆ ರೈತರು ಪ್ರತಿಭಟನೆ ನಡೆಸಿದ್ದರು. ಆದರೆ, ಸರ್ಕಾರ ಅದನ್ನು ಮಾಡದ ಕಾರಣ ರೈತರ ಕಟ್ಟೆ ಒಡೆದಿದೆ. ಇದರಿಂದ ಏನೆಲ್ಲಾ ಆಗಿದೆ ಎಂಬುದನ್ನು ರಾಜ್ಯದ ಜನತೆ ನೋಡಿದ್ದಾರೆ. ಇನ್ನಾದರೂ ಸರ್ಕಾರ ಅಭಿವೃದ್ಧಿಯ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಮುಂದಿನ ಚುನಾವಣೆಯಲ್ಲಿ ಮಂಡ್ಯದಲ್ಲೂ ಸಹ ಬಿಜೆಪಿ- ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿವೇಕ್, ನಗರ ಅಧ್ಯಕ್ಷ ವಸಂತ್‌ಕುಮಾರ್, ಗ್ರಾಮಾಂತರ ಅಧ್ಯಕ್ಷ ಭೀಮೇಶ್, ಮುಖಂಡರಾದ ಸಿ.ಟಿ. ಮಂಜುನಾಥ್, ನಾಗಣ್ಣ ಮಲ್ಲಪ್ಪ, ಹೊಸಹಳ್ಳಿ ಶಿವು, ಶಿವಕುಮಾರ್ ಆರಾಧ್ಯ, ಆನಂದ, ಮಹಂತಪ್ಪ, ವಿನಯ್ ಸೇರಿದಂತೆ ನೂರಾರು ಮಂದಿ ಭಾಗವಹಿಸಿ ಸಿಹಿ ವಿತರಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
---‘ಬಿಹಾರದಲ್ಲಿ ಬಿಜೆಪಿ ಎಬ್ಬಿಸಿದ ಬಿರುಗಾಳಿಗೆ ಮಹಾಘಟಬಂಧನ್ ಪಕ್ಷಗಳು ತರಗೆಲೆಗಳಾಗಿವೆ. ಮತಚೋರಿ ವಿಷಯವಾಗಿ ವಿಪಕ್ಷಗಳು ಮತದಾರರಿಗೆ ಏನೆಲ್ಲಾ ಗೊಂದಲ ಮೂಡಿಸಿದ್ದರೂ ಯಾವುದನ್ನೂ ಲೆಕ್ಕಿಸದೆ ಎನ್‌ಡಿಎ ಮೈತ್ರಿಕೂಟಕ್ಕೆ ಮತ ನೀಡುವ ಮೂಲಕ ಅಭೂತಪೂರ್ವ ಗೆಲುವು ತಂದುಕೊಟ್ಟಿದ್ದಾರೆ. ಮತಚೋರಿ ಆರೋಪದೊಂದಿಗೆ ಕಾಂಗ್ರೆಸ್ ಸಾರ್ವಜನಿಕವಾಗಿ ಮುಜುಗರಕ್ಕೆ ಒಳಗಾಗಿದೆ. ದೇಶದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಪರದಾಡುವ ಸ್ಥಿತಿ ಎದುರಾಗಿದೆ.’
- ಡಾ.ಎನ್.ಎಸ್.ಇಂದ್ರೇಶ್, ಜಿಲ್ಲಾ ಅಧ್ಯಕ್ಷರು, ಬಿಜೆಪಿ;Resize=(128,128))
;Resize=(128,128))
;Resize=(128,128))