ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜಕೀಯಕ್ಕಾಗಿ ದೇವಸ್ಥಾನ, ದೇವರನ್ನು ಬಳಸುವ ಬಿಜೆಪಿ ನಾಯಕರು ತಮ್ಮ ಆಡಳಿತ ಅವಧಿಯಲ್ಲಿ ಧಾರ್ಮಿಕ ಸಂಸ್ಥೆಗಳ ಜೀರ್ಣೋದ್ಧಾರ ಮತ್ತು ನಿರ್ಮಾಣಕ್ಕಾಗಿ ಕೊಡುಗೆ ನೀಡದೇ, ನಮ್ಮ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯ, ಅನುದಾನ ನೀಡಿರುವುದನ್ನು ಸಹಿಸದೆ ಅಸೂಯೆಯಿಂದ ಮಾತನಾಡುತ್ತಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.ಕಳೆದ ಮೂರು ವರ್ಷಗಳಿಂದ ಸಚಿವರು ಕೆಲಸ ಮಾಡಿಲ್ಲ ಎಂದು ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿರುವ ರಾಮಲಿಂಗಾರೆಡ್ಡಿ, ತಾವು ಮುಜರಾಯಿ ಸಚಿವರಾಗಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಕುರಿತಂತೆ ಮಾಹಿತಿ ಬಿಡುಗಡೆ ಮಾಡಿದ್ದಾರೆ.
ಬಿಜೆಪಿಯಂತೆ ರಾಜಕೀಯಕ್ಕೆ ಮಾತನಾಡಲ್ಲ:2019-20ರಿಂದ 2022-23ರ ಅವಧಿಯಲ್ಲಿ ಬಿಜೆಪಿ ಆಡಳಿತದಲ್ಲಿತ್ತು. ಈ ಅವಧಿಯಲ್ಲಿ 7884 ಧಾರ್ಮಿಕ ಸಂಸ್ಥೆಗಳು, ದೇವಸ್ಥಾನಗಳ ಜೀರ್ಣೋದ್ಧಾರ, ನಿರ್ಮಾಣ ಮತ್ತು ಅಭಿವೃದ್ಧಿಗಾಗಿ 537.45 ಕೋಟಿ ರು. ಮಾತ್ರ ಬಿಡುಗಡೆ ಮಾಡಿದ್ದಾರೆ. ಅದೇ 2023-24ರಿಂದ 2025-26ರ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ 6,637 ಸಂಸ್ಥೆಗಳಿಗೆ 874.42 ಕೋಟಿ ರು. ಅನುದಾನ ನೀಡಲಾಗಿದೆ. ಅವರು ನಾಲ್ಕು ವರ್ಷಗಳ ಸಾಧನೆಗಿಂತ ನಮ್ಮ ಮೂರು ವರ್ಷದ ಸಾಧನೆ ದೊಡ್ಡದಿದೆ. ಅವರಂತೆ ನಾವು ರಾಜಕೀಯಕ್ಕಾಗಿ ಮಾತನಾಡದೆ ದೇವಸ್ಥಾನಗಳ ಅಭಿವೃದ್ಧಿಯ ನೈಜ ಉದ್ದೇಶದಿಂದ ಕೆಲಸ ಮಾಡಿರುವುದಕ್ಕೆ ಅಂಕಿ-ಅಂಶಗಳೇ ಸಾಕ್ಷಿ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ದೇವಸ್ಥಾನಗಳ ಅಭಿವೃದ್ದಿಗಷ್ಟೇ ಅಲ್ಲದೆ ರಾಜ್ಯದ ಪ್ರಮುಖ ದೇವಸ್ಥಾನಗಳ ನೈಜ ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ ಪ್ರಾಧಿಕಾರಗಳನ್ನು ರಚಿಸಲಾಗಿದೆ. ಶ್ರೀ ಮಲೆಮಹದೇಶ್ವರ ಕ್ಷೇತ್ರ, ಶ್ರೀ ಚಾಮುಂಡೇಶ್ವರಿ ಕ್ಷೇತ್ರ, ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರ, ಶ್ರೀ ಹುಲಿಗಮ್ಮ ಕ್ಷೇತ್ರ, ಶ್ರೀ ರೇಣುಕಾ ಯಲ್ಲಮ್ಮ ದೇವಿ ಕ್ಷೇತ್ರ, ಶ್ರೇ ರೇಣುಕಾಂಬ ಕ್ಷೇತ್ರಗಳ ಅಭಿವೃದ್ಧಿಗಾಗಿ ಪ್ರಾಧಿಕಾರ ರಚಿಸಲಾಗಿದೆ. ಅದರ ಜತೆಗೆ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಮತ್ತು ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಗಳ ಅಭಿವೃದ್ಧಿಗಾಗಿಯೂ ಹೊಸ ಪ್ರಾಧಿಕಾರ ರಚನೆಗೆ ಉದ್ದೇಶಿಸಲಾಗಿದೆ ಎಂದಿದ್ದಾರೆ.
ಭೂ ವರಾಹ ಯೋಜನೆ ಅಡಿಯಲ್ಲಿ 328 ಮುಜರಾಯಿ ದೇವಸ್ಥಾನಗಳ ಆಸ್ತಿಗಳ ಸಂರಕ್ಷಿಸಿ, ಒತ್ತುವರಿ ತೆರವು ಮಾಡಲು ಕ್ರಮ ಕೈಗೊಳ್ಳಲಾಗಿದೆ. ರಾಜ್ಯದ ಪ್ರಮುಖ 400 ದೇವಸ್ಥಾನಗಳು ಮತ್ತು ಹೊರ ರಾಜ್ಯದ ದೇವಸ್ಥಾನಗಳಲ್ಲಿ ಮುಜರಾಯಿ ಇಲಾಖೆಗೆ ಸಂಬಂಧಿಸಿದ ಯಾತ್ರಾರ್ಥಿಗಳಿಗಾಗಿ ಕೊಠಡಿಗಳ ನಿರ್ಮಾಣಕ್ಕೆ ಅನುದಾನ ಒದಗಿಸಲಾಗಿದೆ. ವೈಷ್ಣೋದೇವಿ ಯಾತ್ರೆ ಕೈಗೊಳ್ಳುವವರಿಗೆ ತಲಾ 5 ಸಾವಿರ ಸಹಾಧನ ನೀಡುವ ಪ್ರಕ್ರಿಯೆ ಆರಂಭಿಸಲಾಗಿದೆ. ಜಲನಿಧಿ ಕಲ್ಯಾಣಿ ಪುನಶ್ಚೇತನ ಯೋಜನೆ ಅಡಿ 259 ಕಲ್ಯಾಣಿಗಳ ಪುನಶ್ಚೇತನಗೊಳಿಸುವ ಗುರಿಯೊಂದಿಗೆ ಕೆಲಸ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.
ವಾರಣಾಸಿಯಲ್ಲಿ, ಮಂತ್ರಾಲಯದಲ್ಲಿ, ಶ್ರೀ ಶೈಲಂ ಕ್ಷೇತ್ರ, ತುಳಜಾಪುರ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಹಾಲಿ ಇರುವ ಸಮುದಾಯ ಭವನಗಳ ದುರಸ್ತಿ ಮತ್ತು ಹೊಸದಾಗಿ ನಿರ್ಮಾಣಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಮುಜರಾಯಿ ಇಲಾಖೆ ದೇವಸ್ಥಾನಗಳ ಅರ್ಚಕರ ತಸ್ತಿಕ್ ಮೊತ್ತ, ದೇವಸ್ಥಾನಗಳಿಗೆ ವರ್ಷಾಸನ ಹೆಚ್ಚಿಸಲಾಗಿದೆ. ಬೆಂಗಳೂರಿನ ಕೆ.ಆರ್.ವೃತ್ತದ ಬಹುಮಹಡಿ ಕಟ್ಟಡ ಎದುರಿನಲ್ಲಿ 27 ಕೋಟಿ ರು. ವೆಚ್ಚ ಮಾಡಿ ಧಾರ್ಮಿಕ ಸೌಧ ನಿರ್ಮಾಣಕ್ಕೆ ಚಾಲನೆಯನ್ನೂ ನೀಡಲಾಗಿದೆ. 18 ವರ್ಷಗಳ ನಂತರ ಆಗಮ ಘಟಿಕೋತ್ಸವ ನಡೆಸಿ 2023-24ನೇ ಸಾಲಿನಲ್ಲಿ ಸರ್ವಾಹಮ ಪ್ರವರ ಮತ್ತು ಪ್ರವೀಣ ಪಕ್ಷೇಗಳಲ್ಲಿ ಉತ್ತೀರ್ಣರಾದ 3160 ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.