ಚನ್ನಪಟ್ಟಣ: ಎಲೆಕೆರೆ ಬಳಿ ನೂತನ ರೈಲ್ವೆ ಮೇಲ್ಸೇತುವೆ ನಿರ್ಮಾಣ ಆಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅನುದಾನದಲ್ಲಿ ಮೇಲ್ಸೇತುವೆ ನಿರ್ಮಿಸಲಾಗಿದೆ. ಇದರಿಂದ ಸಾರ್ವಜನಿಕರಿಗೆ ಟ್ರಾಫಿಕ್ ಕಿರಿಕಿರಿ ತಪ್ಪಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.

ತಾಲೂಕಿನ ಎಲೇಕೇರಿ ಬಳಿ ನೂತನ ರಸ್ತೆ ಮೇಲ್ಸೇತುವೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ ಅವರು, ವಿ.ಸೋಮಣ್ಣ ಕೇಂದ್ರ ರೈಲ್ವೆ ಸಚಿವರಾಗಿ ಅತ್ಯುತ್ತಮ ಕೆಲಸ ಮಾಡ್ತಿದ್ದಾರೆ. ಮನವಿ ಮಾಡಿದ ತಕ್ಷಣವೇ ಎಲ್ಲದಕ್ಕೂ ಸ್ಪಂದಿಸುತ್ತಾರೆ. ಆದರೆ ಕೆಲ ವಿಚಾರದಲ್ಲಿ ಬೇರೆ ರಾಜ್ಯಗಳಿಗೆ ಸಿಗುವ ಆದ್ಯತೆ ನಮ್ಮ ರಾಜ್ಯಕ್ಕೆ ಸಿಗ್ತಿಲ್ಲ. ಬೆಂಗಳೂರು ಸುತ್ತಮುತ್ತಲಿನ ೧೦೦ ಕಿ.ಮೀ ವ್ಯಾಪ್ತಿಯಲ್ಲಿ ೪ ಪಥದ ರೈಲ್ವೆ ಟ್ರ್ಯಾಕ್ ನಿರ್ಮಾಣ ಆಗಬೇಕಿದೆ. ಬೆಂಗಳೂರಿನಿಂದ ತುಮಕೂರು, ಮೈಸೂರು, ಗೌರಿಬಿದನೂರು ಮಾರ್ಗವಾಗಿ ಹಿಂದೂಪುರ ಮತ್ತು ಕೋಲಾರಕ್ಕೆ ಚತುಷ್ಪಥ ಹಳಿ ನಿರ್ಮಿಸಬೇಕು. ಇದರಿಂದ ಸ್ಯಾಟಲೈಟ್ ಟೌನ್ ಗಳ ಅಭಿವೃದ್ಧಿ ಆಗುತ್ತದೆ. ವಂದೇಭಾರತ್ ರೈಲುಗಳನ್ನ ರಾಜ್ಯಕ್ಕೆ ಮತ್ತಷ್ಟು ಕೊಡಬೇಕು. ಪುಣೆಯಿಂದ ಬೆಂಗಳೂರಿಗೆ ಹೈಸ್ಪೀಡ್ ರೈಲು ಬೇಕು. ಇದರಿಂದ ಒಂದು ಬ್ಯುಸಿನೆಸ್ ಕಾರಿಡಾರ್ ನಿರ್ಮಾಣ ಆಗುತ್ತದೆ ಎಂದು ಮನವಿ ಮಾಡಿದರು.

ಸಂಸದ ಡಾ.ಸಿ.ಎನ್.ಮಂಜುನಾಥ್ ಮಾತನಾಡಿ, ಚನ್ನಪಟ್ಟಣದ ಎಲೆಕೇರಿ ಗೇಟ್‌ನ ಎಲ್.ಸಿ. ಸಂಖ್ಯೆ ೪೭ರ ಬದಲಿಗೆ ನಿರ್ಮಾಣಗೊಂಡಿರುವ ನೂತನ ರೈಲ್ವೆ ರಸ್ತೆ ಮೇಲ್ಸೇತುವೆ ಲೋಕಾರ್ಪಣೆಯಾಗಿರುವುದು ಈ ಭಾಗದ ಜನತೆಗೆ ಮಹತ್ವದ ಕೊಡುಗೆಯಾಗಿದೆ. ಪ್ರತಿದಿನ ಸುಮಾರು ೫೦ಕ್ಕೂ ಹೆಚ್ಚು ಬಾರಿ ರೈಲ್ವೆ ಗೇಟ್ ಮುಚ್ಚಲ್ಪಡುವುದರಿಂದ ಚನ್ನಪಟ್ಟಣ ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಸಂಚಾರ ದಟ್ಟಣೆ, ಸಮಯ ವ್ಯರ್ಥ ಮತ್ತು ಅನಗತ್ಯ ವಿಳಂಬ ಎದುರಿಸುತ್ತಿದ್ದರು. ಇದೀಗ ನೂತನ ರಸ್ತೆ ಮೇಲ್ಸೇತುವೆ ಸಾರ್ವಜನಿಕರ ಸುಗಮ, ಸುರಕ್ಷಿತ ಹಾಗೂ ತಡೆರಹಿತ ಸಂಚಾರಕ್ಕೆ ದಾರಿ ಮಾಡಿಕೊಡಲಿದೆ. ಇಂತಹ ಜನೋಪಯೋಗಿ ಮೂಲಸೌಕರ್ಯ ಯೋಜನೆಗಳು ಪ್ರದೇಶದ ಅಭಿವೃದ್ಧಿಗೆ ಹೊಸ ವೇಗ ನೀಡಿ, ಜನರ ದೈನಂದಿನ ಬದುಕನ್ನು ಇನ್ನಷ್ಟು ಸುಲಭಗೊಳಿಸಲಿವೆ ಎಂದರು.

ಬಾಕ್ಸ್‌..........

ಬಿಡದಿ ಟೌನ್‌ಶಿಪ್‌ನಲ್ಲಿ ಎಚ್ಡಿಕೆ ರಾಜಕೀಯ: ಎಂಬಿಪಾ ಆರೋಪ


ಚನ್ನಪಟ್ಟಣ: ಬಿಡದಿ ಟೌನ್‌ಶಿಪ್ ಆರಂಭ ಆಗಿದ್ದೇ ಕುಮಾರಸ್ವಾಮಿ ಕಾಲದಲ್ಲಿ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆದ ಆದಮೇಲೆ ಜೆಡಿಎಸ್‌ಗೆ ಹಾಗೂ ಕುಮಾರಸ್ವಾಮಿಗೆ ತೊಂದರೆ ಆಗಿದೆ. ಆ ಕಾರಣಕ್ಕೆ ಇದರಲ್ಲಿ ರಾಜಕೀಯದಲ್ಲಿ ತರುತ್ತಿದ್ದಾರೆ ಎಂದು ಸಚಿವ ಎಂ.ಬಿ.ಪಾಟೀಲ್ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಎರಡು ಬಾರಿ ಸಿಎಂ ಆಗಿದ್ದರೂ ಯೋಜನೆ ಕೈಬಿಟ್ಟಿಲ್ಲ. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಬೊಮ್ಮಾಯಿ, ಸದಾನಂದಗೌಡರ ಕಾಲದಲ್ಲೂ ಇದನ್ನ ಕೈಬಿಡಲಿಲ್ಲ. ಈಗ ವಿರೋಧ ಮಾಡುವವರು ೨೦ ವರ್ಷ ಯಾಕೆ ಅದನ್ನ ನಿಲ್ಲಿಸಲಿಲ್ಲ. ಇದು ಸಂಪೂರ್ಣ ರಾಜಕೀಯದಿಂದ ಕೂಡಿದೆ ಎಂದರು.

ಅನುದಾನದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂಬ ಆರ್.ಅಶೋಕ್ ಟ್ವೀಟ್ ವಿಚಾರಕ್ಕೆ ಪ್ರತಿಕ್ರಿಯಿಸಿ ಪಾಟೀಲರು, ಹಿಂದೆ ಬಿಜೆಪಿ ಅವರೇ ಈ ಕೆಲಸ ಮಾಡಿದ್ದರು. ಅವರ ಪಕ್ಷದ ಶಾಸಕರಿಗೆ ೫೦ ಕೋಟಿ ಅನುದಾನ ಕೊಟ್ಟು, ನಮ್ಮ ಪಕ್ಷದವರಿಗೆ ೨೫ ಕೋಟಿ ಕೊಟ್ಟಿದ್ದರು. ಆಗ ಅಶೋಕ್ ಏನ್ ಮಾಡ್ತಾ ಇದ್ದರಂತೆ? ಬೊಮ್ಮಾಯಿ ಸಿಎಂ ಆದಾಗ ಬಿಜೆಪಿಯವರು ಏನು ಮಾಡಿದರು. ಕಾಂಗ್ರೆಸ್ ಶಾಸಕರಿಗೆ ಎಷ್ಟು ಅನುದಾನ ಕೊಟ್ಟಿದ್ರು. ಅವರು ಮಾಡಿದ್ದನ್ನ ನಾವು ಕಂಟಿನ್ಯೂ ಮಾಡ್ತಿಲ್ಲ. ನಾವು ಜನರಿಗೆ ಒಳ್ಳೇದು ಮಾಡುತ್ತೇವೆ ಎಂದು ಉತ್ತರಿಸಿದರು.

ಪೊಟೋ೨೯ಸಿಪಿಟಿ೨: ಸಚಿವರಾದ ವಿ.ಸೋಮಣ್ಣ ಹಾಗೂ ಎಂ.ಬಿ.ಪಾಟೀಲ್ ವಿಶೇಷ ರೈಲಿನಲ್ಲಿ ಪ್ರಯಾಣಿಸಿದರು.

ಪೊಟೋ೨೯ಸಿಪಟಿ೩:

ಚನ್ನಪಟ್ಟಣಕ್ಕೆ ವಿಶೇಷ ರೈಲಿನಲ್ಲಿ ಆಗಮಿಸಿದ ಸಚಿವರಾದ ವಿ.ಸೋಮಣ್ಣ ಹಾಗೂ ಎಂ.ಬಿ.ಪಾಟೀಲರನ್ನು ಶಾಸಕ ಯೋಗೇಶ್ವರ್ ಸ್ವಾಗತಿಸಿದರು.