ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿಉಡುಪಿ ನಗರ ಭಾಗದ ಸಾರ್ವಜನಿಕರ ಓಡಾಟಕ್ಕೆ ಅನುಕೂಲವಾಗುವಂತೆ 9 ವರ್ಷಗಳ ಹಿಂದೆ ನರ್ಮ್ ಬಸ್ಸುಗಳು ಚಾಲನೆಗೊಂಡಿದ್ದು, ಈ ಬಸ್ಸುಗಳ ಓಡಾಟದಿಂದ ಸಾವರ್ಜನಿಕರ ಪ್ರಶಂಸೆಗೂ ಪಾತ್ರವಾಗಿತ್ತು. ಆದರೆ ಪ್ರಸ್ತುತ ಆ 13 ಬಸ್ಸುಗಳ ಓಡಾಟವನ್ನು ಖಾಯಂ ಆಗಿ ಸ್ಥಗಿತಗೊಳಿಸಲಾಗಿರುತ್ತದೆ. ಇದರಿಂದ ಜನತೆಗೆ ತೀವ್ರ ತೊಂದರೆಯಾಗಿರುತ್ತದೆ. ಆದ್ದರಿಂದ ತಕ್ಷಣ ಅವುಗಳನ್ನು ಪುನರಾರಂಭಿಸಬೇಕು ಎಂದು ಉಡುಪಿ ಬಿಜೆಪಿ ಯುವ ಮೋರ್ಚಾ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರಿಗೆ ಮನವಿ ಸಲ್ಲಿಸಿತು.ಅಲ್ಲದೆ ಈ 45 ಬಸ್ಸುಗಳ ಮಂಜೂರಾತಿಯು 10 ವರ್ಷಗಳ ಹಿಂದಿನ ಸಮೀಕ್ಷೆಯಂತೆ ಆಗಿರುತ್ತದೆ, ಹೊಸ ಸಂಪರ್ಕ ರಸ್ತೆಗಳ ಅಭಿವೃದ್ಧಿ ಮತ್ತು ಪ್ರಸ್ತುತ ಪ್ರಯಾಣಿಕರ ಓಡಾಟದ ಸಂಖ್ಯೆಗೆ ಅನುಗುಣವಾಗಿ ಸದ್ರಿ ಬಸ್ಸುಗಳ ಸಂಖ್ಯೆಯನ್ನು ಕನಿಷ್ಠ 80ಕ್ಕೆ ಹೆಚ್ಚಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಯಿತು.
ಈ ಬಸ್ಸುಗಳಿಗೆ ಚಾಲಕರು ಮತ್ತು ನಿರ್ವಾಹಕರ ಕೊರತೆ ಇದ್ದು, ಈ ಹುದ್ದೆಗಳನ್ನೂ ಭರ್ತಿ ಮಾಡಿ, ಬಸ್ಸುಗಳ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕು. ಇದರಿಂದ ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಮತ್ತು ವಯೋವೃದ್ಧಿಗೆ ಸಹಾಯ ಮಾಗುತ್ತದೆ ಎಂದು ಆಗ್ರಹಿಸಲಾಗಿದೆ.ನರ್ಮ್ ಬಸ್ಸುಗಳ ಸೇವೆಯನ್ನು ಪುನರಾರಂಭಿಸಿ, ಬಸ್ಸುಗಳ ಸಂಖ್ಯೆಯನ್ನು ಹೆಚ್ಚಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಕೈಗೆತ್ತಿಕೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ಮನವಿಯಲ್ಲಿ ನೀಡಲಾಗಿದೆ.ಈ ಸಂದರ್ಭದಲ್ಲಿ ಉಡುಪಿ ನಗರ ಯುವಮೋರ್ಚಾ ಅಧ್ಯಕ್ಷರಾದ ಶ್ರೀವತ್ಸ, ಉಪಾಧ್ಯಕ್ಷರಾದ ಸಂದರ್ಶ ಆಚಾರ್ಯ, ಪ್ರಜ್ವಲ್ ಪೂಜಾರಿ, ಧನುಷ್ ಬಿ.ಕೆ., ಪ್ರಧಾನ ಕಾರ್ಯದರ್ಶಿಗಳಾದ ನಿತಿನ್ ಪೈ ಮಣಿಪಾಲ, ಶಿವಪ್ರಸಾದ್ ಕಾರ್ಯದರ್ಶಿಗಳಾದ ಧನುಷ್ ಕಡಿಯಾಳಿ, ಹರ್ಷರಾಜ್, ಆಕಾಶ್, ಭೂಷಣ್, ದೀಕ್ಷಿತ್ ಶೆಟ್ಟಿ, ರಮಿತ್ ಶೆಟ್ಟಿ, ತರುಣ್ ಉಪಸ್ಥಿತರಿದ್ದರು.