ಸಾರಾಂಶ
ಬೆಂಗಳೂರಿನ ಯೂತ್ ಫಾರ್ ಸೇವಾ ಸಂಸ್ಥೆಯು, ಸಮಾಜದಿಂದ ಪಡೆದಿದ್ದನ್ನು ಸಮಾಜಕ್ಕೆ ನೀಡಬೇಕು ಎಂಬ ಸಂದೇಶ ಹೊತ್ತು ರಾಜ್ಯದ ವಿವಿಧ ಜಿಲ್ಲೆಗಳ ಸರ್ಕಾರಿ ಶಾಲೆಯ ಮಕ್ಕಳಿಗೆ ಕಲಿಕೋಪಕರಣಗಳನ್ನು ವಿತರಣೆ ಮಾಡುತ್ತಿದೆ ಎಂದು ಯೂತ್ ಫಾರ್ ಸೇವಾ ಸಂಸ್ಥೆ ಸಂಯೋಜಕ ಎಂ.ವಿ.ರಾಜೇಂದ್ರ ಕುಮಾರ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ
ಬೆಂಗಳೂರಿನ ಯೂತ್ ಫಾರ್ ಸೇವಾ ಸಂಸ್ಥೆಯು, ಸಮಾಜದಿಂದ ಪಡೆದಿದ್ದನ್ನು ಸಮಾಜಕ್ಕೆ ನೀಡಬೇಕು ಎಂಬ ಸಂದೇಶ ಹೊತ್ತು ರಾಜ್ಯದ ವಿವಿಧ ಜಿಲ್ಲೆಗಳ ಸರ್ಕಾರಿ ಶಾಲೆಯ ಮಕ್ಕಳಿಗೆ ಕಲಿಕೋಪಕರಣಗಳನ್ನು ವಿತರಣೆ ಮಾಡುತ್ತಿದೆ ಎಂದು ಯೂತ್ ಫಾರ್ ಸೇವಾ ಸಂಸ್ಥೆ ಸಂಯೋಜಕ ಎಂ.ವಿ.ರಾಜೇಂದ್ರ ಕುಮಾರ್ ತಿಳಿಸಿದರು.ಕಟ್ಟಿನಮನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯೂತ್ ಫಾರ್ ಸೇವಾ ಸಂಸ್ಥೆಯಿಂದ 1 ರಿಂದ 7ನೇ ತರಗತಿ ಮಕ್ಕಳಿಗೆ ಶಾಲಾ ಬ್ಯಾಗ್, ಜಾಮಿಟ್ರಿ ಬಾಕ್ಸ್, ಪೌಚ್ ಸೇರಿದಂತೆ ಕಲಿಕೋಪಕರಣಗಳನ್ನು ವಿತರಿಸಿ ಮಾತನಾಡಿ, ಕಳೆದ 10 ವರ್ಷದಿಂದಲೂ ಯೂತ್ ಪಾರ್ ಸೇವಾ ಸಂಸ್ಥೆ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳ ಮಕ್ಕಳಿಗೆ ಕಲಿಕೋಪಕರಣ ವಿತರಿಸುತ್ತಿದೆ ಎಂದರು.
ನರಸಿಂಹರಾಜಪುರ ತಾಲೂಕಿನಲ್ಲಿ ಕಳೆದ 7 ವರ್ಷದಿಂದ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಿಗೆ ಕಲಿಕೋಪಕರಣ ವಿತರಿಸಲಾಗುತ್ತಿದೆ. ಈ ವರ್ಷ ಈಗಾಗಲೇ ಹೊನ್ನೇಕೊಡಿಗೆ, ಬೈರಾಪುರ, ವರ್ಕಾಟೆ, ಮೂಡಬಾಗಿಲು, ಮಡಬೂರು, ಬಿ.ಎಚ್. ಕೈಮರ ಸೇರಿದಂತೆ ಗ್ರಾಮೀಣ ಭಾಗದ 14 ಸರ್ಕಾರಿ ಶಾಲೆಗಳ 576 ಮಕ್ಕಳಿಗೆ ವಿತರಿಸಿದ್ದೇವೆ. ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲೆ ಉಳಿಯಬೇಕು ಎಂಬ ಉದ್ದೇಶದಿಂದ ಸಾಮಾಗ್ರಿ ವಿತರಿಸಿದ್ದೇವೆ ಎಂದರು.ಕಟ್ಟಿನಮನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್ ಡಿಎಂಸಿ ಶಿಕ್ಷಣ ತಜ್ಞ ಶಂಕರನಾರಾಯಣ ಭಟ್ ಮಾತನಾಡಿ, ಮಕ್ಕಳು ಸಂಸ್ಥೆ ನೀಡಿದ ಕಲಿಕೋಪಕರಣಗಳ ಸದುಪಯೋಗ ಮಾಡಿ. ಮುಂದೆ ದೊಡ್ಡವರಾದ ಮೇಲೆ ನೀವು ಸಹ ಸಮಾಜದ ಋಣ ತೀರಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಯೂತ್ ಫಾರ್ ಸೇವಾ ಸಂಸ್ಥೆ ಸ್ವಯಂ ಸೇವಕ ಸುಭಾಷ್, ಶಾಲಾ ಮುಖ್ಯೋಪಾಧ್ಯಾಯಿನಿ ಭಾರತಿ, ಸಹ ಶಿಕ್ಷಕರು ಇದ್ದರು.