ಸಾರಾಂಶ
ನಮ್ಮ ಜೇನುಗೂಡು ಟ್ರಸ್ಟ್ ವತಿಯಿಂದ ಮುಂದಿನ ದಿನಗಳಲ್ಲಿ ಉಚಿತ ಟೈಲರಿಂಗ್ ತರಬೇತಿ, ಕಂಪ್ಯೂಟರ್ ತರಬೇತಿಯಂತಹ ಕಾರ್ಯಕ್ರಮಗಳ ಅನುಷ್ಠಾನಕ್ಕೆ ತೀರ್ಮಾನಿಸಲಾಗಿದ್ದು ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡುತ್ತೇವೆ.
ಕನ್ನಡಪ್ರಭ ವಾರ್ತೆ ಸೂಲಿಬೆಲೆ
ಹೊಸಕೋಟೆ ತಾಲೂಕಿನಲ್ಲಿ ಜೇನುಗೂಡು ರೂರಲ್ ಡೆವಲಪ್ ಮೆಂಟ್ ಆ್ಯಂಡ್ ಕಲ್ಚರಲ್ ಟ್ರಸ್ಟ್ ಶಿಕ್ಷಣ ಇಲಾಖೆಯ ಕಾರ್ಯಗಳೊಂದಿಗೆ ಕೈಜೋಡಿಸಿ ಶೈಕ್ಷಣಿಕ ಸೇವೆಗಳನ್ನು ನೀಡುತ್ತಾ ಬರುತ್ತಿರುವುದು ಶ್ಲಾಘನೀಯ ವಿಚಾರ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ.ಸತೀಶಗೌಡ ಹೇಳಿದರು.ಸೂಲಿಬೆಲೆ ಹೋಬಳಿ ಜನತಾ ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ದತ್ತು ಸ್ವೀಕಾರ ಕಾರ್ಯಕ್ರಮ ಹಾಗೂ ಶಾಲಾ ಮಕ್ಕಳಿಗೆ ಶೈಕ್ಷಣಿಕ ಪೂರಕ ಪರಿಕರಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಾಲೆಗೆ ಅಗತ್ಯವಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಶೀಘ್ರದಲ್ಲಿಯೇ ಕೊಡಿಸಲಾಗುವುದು ಹಾಗೂ ಶಾಲೆಗೆ ಅಗತ್ಯವಿರುವ ಸುಣ್ಣ, ಬಣ್ಣವನ್ನು ಸಹ ವೈಯಕ್ತಿಕವಾಗಿ ಮಾಡಿಸಿಕೊಡಲಾಗುವುದು ಎಂದು ಹೇಳಿದರು.ಜೇನುಗೂಡು ರೂರಲ್ ಡೆವಲಪ್ ಮೆಂಟ್ ಹಾಗೂ ಸೂಲಿಬೆಲೆ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಬ್ಯಾಂಕ್ ಸಹಯೋಗದಲ್ಲಿ ೭೫ ಮಕ್ಕಳಿಗೆ ತಟ್ಟೆ, ಲೋಟ ವಿತರಣೆ, ಟ್ರಸ್ಟಿನ ಉಪಾಧ್ಯಕ್ಷ ಕೆ.ಎಂ.ಚೌಡೇಗೌಡ ವತಿಯಿಂದ ೭೫ ವಿದ್ಯಾರ್ಥಿಗಳಿಗೆ ಗುರುತಿನ ಚೀಟಿ ವಿತರಣೆ ಹಾಗೂ ಟ್ರಸ್ಟಿನ ವತಿಯಿಂದ ಲೇಖನ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ನಾಗರಾಜ್ ಮಾತನಾಡಿ, ಜೇನುಗೂಡು ಟ್ರಸ್ಟ್ ಶಿಕ್ಷಣ ಇಲಾಖೆಯ ರಾಯಭಾರಿಯಾಗಿ ಕೆಲಸ ಮಾಡುತ್ತಿದೆ, ಟ್ರಸ್ಟಿನ ಮಹಾಪೋಷಕರಾದ ಬಿ.ವಿ.ಸತೀಶಗೌಡರ ಮಾರ್ಗದರ್ಶನದಲ್ಲಿ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಕಂಪನಿಗಳ ಸಿ.ಎಸ್.ಅರ್ ಅನುದಾನದಲ್ಲಿ ಕಟ್ಟಡ ನಿರ್ಮಾಣ ಮಾಡಿಸಿಕೊಟ್ಟಿದ್ದು, ನಿರಂತರ ೫ ವರ್ಷಗಳ ಕಾಲ ಟ್ರಸ್ಟ್ ಶಿಕ್ಷಣ ಕ್ಷೇತ್ರಕ್ಕೆ ಸಹಕಾರಿಯಾಗಿದೆ ಎಂದರು.ಉಪಾಧ್ಯಕ್ಷ ಕೆ.ಎಂ.ಚೌಡೇಗೌಡ ಮಾತನಾಡಿ, ಶಾಲೆಯ ಅಭಿವೃದ್ಧಿಗೆ ಟ್ರಸ್ಟ್ ನಿರಂತರವಾಗಿ ಶ್ರಮಿಸುತ್ತದೆ, ಮುಂದಿನ ದಿನಗಳಲ್ಲಿ ೭೫ ಮಕ್ಕಳಿಗೆ ಟ್ರ್ಯಾಕ್ ಶೂಟ್ ನೀಡಲಾಗುತ್ತದೆ, ಲೇಖನ ಸಾಮಗ್ರಿಗಳ ವಿತರಣೆ ಹಾಗೂ ಶೀಘ್ರವಾಗಿ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಟ್ರಸ್ಟ್ ನ ಸಂಘಟನಾ ಕಾರ್ಯದರ್ಶಿ ಎಸ್.ಕೆ.ವಸಂತಕುಮಾರ್ ಮಾತನಾಡಿ, ನಮ್ಮ ಜೇನುಗೂಡು ಟ್ರಸ್ಟ್ ವತಿಯಿಂದ ಮುಂದಿನ ದಿನಗಳಲ್ಲಿ ಉಚಿತ ಟೈಲರಿಂಗ್ ತರಬೇತಿ, ಕಂಪ್ಯೂಟರ್ ತರಬೇತಿಯಂತಹ ಕಾರ್ಯಕ್ರಮಗಳ ಅನುಷ್ಠಾನಕ್ಕೆ ತೀರ್ಮಾನಿಸಲಾಗಿದ್ದು ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡುತ್ತೇವೆ ಎಂದು ತಿಳಿಸಿದರು. ಟ್ರಸ್ಟಿನ ಉಪಾಧ್ಯಕ್ಷ ಕೆ.ಎಂ.ಚೌಡೇಗೌಡ, ಪ್ರಧಾನ ಕಾರ್ಯದರ್ಶಿ ಬೆಟ್ಟಹಳ್ಳಿ ಗೋಪಿನಾಥ್, ಬಡ್ತಿ ಮುಖ್ಯ ಶಿಕ್ಷಕರ ಸಂಘದ ಆಧ್ಯಕ್ಷ ಬಿ.ಶ್ರೀನಿವಾಸ್, ಸಮೂಹ ಸಂಪನ್ಮೂಲ ವ್ಯಕ್ತಿ ಕೆ.ಎನ್.ಮಂಜುನಾಥ್, ಸಹಕಾರ ಬ್ಯಾಂಕ್ ಸಿಇಒ ಶ್ರೀನಿವಾಸಮೂರ್ತಿ, ನಿರ್ದೇಶಕರಾದ ನಾರಾಯಣಸ್ವಾಮಿ, ಮುತ್ತುರಾಜ್, ಸೈಯದ್ ಮಹಬೂಬ್, ಶಾಲಾ ಆಧ್ಯಕ್ಷ ರವಿಕುಮಾರ್, ಪತ್ರಕರ್ತ ಅತ್ತಿಬೆಲೆ ಮಂಜುನಾಥ್, ಸಮಾಜ ಸೇವಕರಾದ ಹಸಿಗಾಳ ಜಗದೀಶ್, ಚಿಕ್ಕಹರಳಗೆರೆ ಜಗದೀಶ್, ಮುಖ್ಯಶಿಕ್ಷಕಿ ಪದ್ಮಿನಿ, ಗೌರಮ್ಮ, ತಬಸಮ್, ಪವಿತ್ರ, ಸಾಹಿದಾಬಿ ಇತರರು ಇದ್ದರು.