ಸಾರಾಂಶ
ಕಟ್ಟಡ ಕಾರ್ಮಿಕರ ಮಂಡಳಿ ಬೇಜವಾಬ್ದಾರಿತನದಿಂದ ಕಳೆದ 3 ವರ್ಷಗಳಿಂದಲೂ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಬರುತ್ತಿಲ್ಲ. ಅಲ್ಲದೇ, ಈ ಬಾರಿ ಕಾರ್ಮಿಕರ ಎಲ್ಲಾ ಪರಿಹಾರ ಧನದ ವಿತರಣೆ ವಿಳಂಬವಾಗಿದೆ. 60 ವರ್ಷ ತುಂಬಿದ ಕಟ್ಟಡ ಕಾರ್ಮಿಕರಿಗೆ ಪಿಂಚಿಣಿ ಸೌಲಭ್ಯ ಹೊರತು ಪಡಿಸಿ ಬೇರೆ ಯಾವುದೇ ಸೌಲಭ್ಯಗಳಿಲ್ಲ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪಟ್ಟಣದಲ್ಲಿ ಬಿಎಂಎಸ್ ಕಟ್ಟಡ ಕಾರ್ಮಿಕ ಸಂಘದ ಕಾರ್ಯಕರ್ತರು ಅಂಚೆ ಪತ್ರ ಚಳವಳಿ ನಡೆಸಿ ಸರ್ಕಾರದ ವಿರುದ್ಧ ಪ್ರತಿಭಟಿಸಿದರು.ಸಂಘದ ರಾಜ್ಯ ಗೌರವಾಧ್ಯಕ್ಷ ವಾಸುದೇವು ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಕಟ್ಟಡ ಕಾರ್ಮಿಕ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಬ್ಯಾನರ್ ಹಿಡಿದು ಅಂಚೆ ಕಚೇರಿವರೆಗೂ ಜಾಥಾ ನಡೆಸಿದರು.
ಕಾರ್ಮಿಕರು ಈಗಾಗಲೇ ಹಲವು ಬಾರಿ ನಮ್ಮ ಸಮಸ್ಯೆಗಳ ಕುರಿತು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿ ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಪತ್ರ ಬರೆದು ಪೋಸ್ಟ್ ಮಾಡಿದರು.ಕಟ್ಟಡ ಕಾರ್ಮಿಕರ ಮಂಡಳಿ ಬೇಜವಾಬ್ದಾರಿತನದಿಂದ ಕಳೆದ 3 ವರ್ಷಗಳಿಂದಲೂ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಬರುತ್ತಿಲ್ಲ. ಅಲ್ಲದೇ, ಈ ಬಾರಿ ಕಾರ್ಮಿಕರ ಎಲ್ಲಾ ಪರಿಹಾರ ಧನದ ವಿತರಣೆ ವಿಳಂಬವಾಗಿದೆ. 60 ವರ್ಷ ತುಂಬಿದ ಕಟ್ಟಡ ಕಾರ್ಮಿಕರಿಗೆ ಪಿಂಚಿಣಿ ಸೌಲಭ್ಯ ಹೊರತು ಪಡಿಸಿ ಬೇರೆ ಯಾವುದೇ ಸೌಲಭ್ಯಗಳಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 10 ತಿಂಗಳಿನಿಂದಲೂ ಪಿಂಚಿಣಿ ಸ್ಥಗಿತಗೊಳಿಸಲಾಗಿದೆ. ವೃದ್ಯಾಪ್ಯದಲ್ಲಿ ಅವರ ಜೀವನ ನಿರ್ವಹಣೆ ತುಂಬಾ ಕಷ್ಟಕರವಾಗಿದೆ. ಹಾಗಾಗಿ 3 ಸಾವಿರ ದಿಂದ 5 ಸಾವಿರ ಪಿಂಚಿಣಿ ಏರಿಸಬೇಕು ಎಂದು ಆಗ್ರಹಿಸಿದ ಕಾರ್ಮಿಕರು, ಈಗಲೂ ನಮ್ಮ ಬೇಡಿಕೆಗೆ ಕ್ರಮ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಉಗ್ರ ಪ್ರತಿಭಟನೆ ನಡೆಸುವುದಾಗಿವ ಎಚ್ಚರಿಕೆ ನೀಡಿ ಪತ್ರ ರವಾನಿಸಿದರು.ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳಾದ ಕೆಂಚೇಗೌಡ, ರಾಜು, ರಾಮಚಂದ್ರ, ಪ್ರದೀಪ್, ಮಂಜುನಾಥ್, ಕುಮಾರ್, ಯೋಗೇಶ್ ಸೇರಿದಂತೆ ಇತರರು ಇದ್ದರು.