ಪ್ರಯತ್ನಕ್ಕೆ ಮತ್ತೊಂದು ಹೆಸರೇ ಶ್ರೀ ಭಗೀರಥ

| Published : May 05 2025, 12:51 AM IST

ಸಾರಾಂಶ

ಶಿವಮೊಗ್ಗ: ಪ್ರಯತ್ನಕ್ಕೆ ಮತ್ತೊಂದು ಹೆಸರೇ ಶ್ರೀ ಭಗೀರಥ. ಪಿತೃಗಳಿಗೆ ಮುಕ್ತಿ ನೀಡಲು ಅತ್ಯಂತ ಪವಿತ್ರಳಾದ ದೇವ ಗಂಗೆಯನ್ನು ಧರೆಗಿಳಿಸಿ, ನಮ್ಮೆಲ್ಲರನ್ನು ಪವಿತ್ರಗೊಳಿಸಿದವರು ಭಗೀರಥರು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.

ಶಿವಮೊಗ್ಗ: ಪ್ರಯತ್ನಕ್ಕೆ ಮತ್ತೊಂದು ಹೆಸರೇ ಶ್ರೀ ಭಗೀರಥ. ಪಿತೃಗಳಿಗೆ ಮುಕ್ತಿ ನೀಡಲು ಅತ್ಯಂತ ಪವಿತ್ರಳಾದ ದೇವ ಗಂಗೆಯನ್ನು ಧರೆಗಿಳಿಸಿ, ನಮ್ಮೆಲ್ಲರನ್ನು ಪವಿತ್ರಗೊಳಿಸಿದವರು ಭಗೀರಥರು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.

ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಉಪ್ಪಾರ ಸಮಾಜ ಸಹಯೋಗದಲ್ಲಿ ಭಾನುವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ಶ್ರೀ ಭಗೀರಥ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಶ್ರೀ ಭಗೀರಥರು ನಿರ್ಜೀವ ವಸ್ತುಗಳಿಗೆ ಸಂಸ್ಕಾರ ನೀಡಿದವರು. ಪಿತೃಗಳಿಗೆ ಶಕ್ತಿ ಕೊಡುವ ಸಲುವಾಗಿ ಗಂಗೆಯನ್ನು ಧರೆಗಿಳಿಸಿ ನಮ್ಮೆಲ್ಲರ ಪಾಪ‌ ಕಳೆಯುವ ಶ್ರೇಷ್ಠ ಕೆಲಸ ಮಾಡಿದರು. ಕಲುಷಿತವನ್ನು ಪವಿತ್ರಗೊಳಿಸುವುದು ಗಂಗೆ ಮಾತ್ರ. ಭಗೀರಥ ಪ್ರಯತ್ನದ ಪರಿಣಾಮ ಇದು. ತನ್ನನ್ನು ತಾನು ಶುದ್ಧಗೊಳಿಸುವ ಶಕ್ತಿ ಆಕೆಗೆ ಮಾತ್ರ ಇದೆ ಎಂದರು.

ಪ್ರಯತ್ನಕ್ಕೆ ಮತ್ತೊಂದು ಹೆಸರೇ ಭಗೀರಥ. ಬಿಹಾರದ ಸಾಮಾನ್ಯ ವ್ಯಕ್ತಿ ದಶರಥ ಮಂಝಿ ಗುಡ್ಡ ಕಡಿದು ರಸ್ತೆ ‌ಮಾಡಿದ್ದಾನೆ. ಅನೇಕ‌ ಜೀವ ರಾಶಿಗಳ‌ ಉಳುವಿಗೆ ಕಾರಣನಾಗುತ್ತಾನೆ. ಇದು ಭಗೀರಥ ಪ್ರಯತ್ನದ ಒಂದು ಉದಾಹರಣೆ ಎಂದರು.

ಇದು ಸಣ್ಣ ಸಮಾಜವಲ್ಲ.‌ ಪವಿತ್ರ ಗಂಗೆಯನ್ನು ನೀಡಿದ ಸಮಾಜ. ಎಲ್ಲ ಸಣ್ಣ ಸಮಾಜಗಳು ಒಟ್ಟಾಗಿದ್ದಾಗ ಇಡೀ ಸಮಾಜಕ್ಕೆ ಶಕ್ತಿ ಬರುತ್ತದೆ. ಭಗೀರಥ ಪ್ರಯತ್ನದ ಮೂಲಕವೇ ಸಮಾಜವನ್ನು‌ ಇನ್ನೂ ಉತ್ತಮ ರೀತಿಯಲ್ಲಿ‌ ಕಟ್ಟಿ, ಶ್ರೇಷ್ಠ ಕೊಡುಗೆಗಳನ್ನು ನೀಡಬೇಕಿದೆ ಎಂದು ಹೇಳಿದರು.

ಜಿಲ್ಲಾ ಉಪ್ಪಾರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ದೇವೇಂದ್ರಪ್ಪ‌ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಉಪ್ಪಾರ ಸಮಾಜಕ್ಕೆ ಒಂದು ಉತ್ತಮ‌ ಇತಿಹಾಸವಿದೆ. ಬೇರೆ ಬೇರೆ ಸ್ಥಳಗಳಲ್ಲಿ ಈ ಸಮಾಜವನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಡುತ್ತಾರೆ. ಉಪ್ಪಾರರು ಇಕ್ಷಾಕು ಕುಲಕ್ಕೆ ಸೇರಿದವರು. ಉಪ್ಪಾರ ಸಮಾಜದ ಹೆಸರು ಉಳಿಯಲು ಭಗೀರಥರು ಕಾರಣರಾಗಿದ್ದು, ಪಿತೃಗಳಿಗೆ ಮುಕ್ತಿ ನೀಡಲು ಹಾಗೂ ಮನುಕುಲದ ಉದ್ಧಾರಕ್ಕಾಗಿ ದೃಢ ಸಂಕಲ್ಪದಿಂದ ನಿರಂತರ ತಪಗೈದು ದೇವಗಂಗೆಯನ್ನು ಧರೆಗೆಳೆಸಿದರು ಶ್ರೀ ಭಗೀರಥರು ಎಂದು ತಿಳಿಸಿದರು.

ಗಂಗಾ ನದಿ ನೀರಿನಿಂದಾಗಿ ದೇಶದ ಹಲವು‌ ಪ್ರದೇಶದ ಜನರು ನೆಮ್ಮದಿ ಬದುಕು ನಡೆಸುತ್ತಿದ್ದು, ಭಗೀರಥರ ತಪಸ್ಸಿನ ಫಲ ಇದಕ್ಕೆ ಕಾರಣವಾಗಿದೆ. ರಾಜ್ಯ ಸರ್ಕಾರ ಇಂತಹ ಮಹಾನ್ ಮಹರ್ಷಿಗಳ ಜಯಂತಿ ಆಚರಣೆ ಮಾಡುತ್ತಿರುವುದು ಅಭಿನಂದನೀಯ ಎಂದರು.

ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ಎಸ್.ಟಿ.ಹಾಲಪ್ಪ ಮಾತನಾಡಿ, ರಾಮನ ಕುಲದಲ್ಲಿ ಹುಟ್ಟಿದ ನಾವು, ನಂತರದ ದಿನಗಳಲ್ಲಿ ತಮ್ಮ‌ ಕುಲ ಕಸುಬಿನಿಂದ ಗುರುತಿಸಲ್ಪಡುತ್ತಾ, ಮಣ್ಣಿನ‌ ಕೆಲಸ, ಕೆರೆ ಕಟ್ಟೆ, ಮನೆ ಕಟ್ಟುವ ಕೆಲಸದಲ್ಲಿ ತೊಡಗಿ ಶ್ರಮಜೀವಿಗಳಾದೆವು. ಮುಂದಿನ ಪೀಳಿಗೆಗೆ ಉತ್ತಮ ಶಿಕ್ಷಣ ನೀಡಬೇಕು. ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಬೆಳೆದು ಸಮಾಜಕ್ಕೆ ಉತ್ತಮ‌ ಕೊಡುಗೆ ನೀಡಬೇಕು. ಸಮಾಜ ಬಾಂಧವರು ಒಗ್ಗಟ್ಟಿನಿಂದ ಇರಬೇಕು. ನಮ್ಮ ಶಕ್ತಿ‌ಯನ್ನು ನಾವು ತಿಳಿಯಬೇಕು ಎಂದರು.

ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್ ಮಾತನಾಡಿ, ಯಶಸ್ವಿ ತಪಸ್ಸಿನ‌ ಮೂಲಕ ಗಂಗಾ ಮಾತೆಯನ್ನು ಧರೆಗಿಳಿಸಿದವರು ಭಗೀರಥ. ಭರತ ಖಂಡದಲ್ಲಿ‌ ಅತ್ಯಂತ ಪವಿತ್ರ ನದಿ ಗಂಗೆ. ಇಂತಹ ಗಂಗೆ ಮಾತೆಯನ್ನು‌ ಪಡೆದ ನಾವೇ ಧನ್ಯರು ಎಂದು ಹೇಳಿದ ಅವರು, ಸಣ್ಣ ಸಣ್ಣ ಹಿಂದುಳಿದ ಸಮಾಜಗಳಿಗೆ ಪ್ರತ್ಯೇಕ ಮೀಸಲಾತಿ ಕಲ್ಪಿಸಿದರೆ ಸಾಮಾಜಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಅಭಿವೃದ್ಧಿ ಸಾಧ್ಯ. ಉಪ್ಪಾರ ಸಮಾಜದಂತಹ ಸಮಾಜಗಳನ್ನು ಗುರುತಿಸಿ ಸ್ಥಾನಮಾನ ನೀಡಬೇಕು ಎಂದು ಹೇಳಿದರು.

ಶಿವಮೊಗ್ಗ ತಹಸೀಲ್ದಾರ್‌ ರಾಜೀವ್, ಜಿಲ್ಲಾ ಉಪ್ಪಾರ ಸಂಘದ ಖಜಾಂಚಿ ನಾಗರಾಜ ಕಂಕಾರಿ ಸೇರಿದಂತೆ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.