ಮುಂಡರಗಿ: ಪಟ್ಟಣದ ಗದಗ ರಸ್ತೆಯಲ್ಲಿರುವ ಎಸ್.ಎಸ್. ಪಾಟೀಲ ನಗರದಲ್ಲಿ ಆಟವಾಡುತ್ತಿದ್ದ 10 ವರ್ಷದ ಬಾಲಕನಿಗೆ ಹುಚ್ಚು ನಾಯಿಯೊಂದು ಕಚ್ಚಿದ ಘಟನೆ ಗುರುವಾರ ಸಂಜೆ ನಡೆದಿದೆ.

ಹುಚ್ಚುನಾಯಿ ಕಚ್ಚಿದ ಬಾಲಕನನ್ನು ಎಸ್.ಎಸ್. ಪಾಟೀಲ ನಗರದ ನಿವಾಸಿ ಪರಶುರಾಮ ತಿಪ್ಪಣ್ಣ ಕೊಳೇಕಾರ್ ಎಂದು ಗುರುತಿಸಲಾಗಿದೆ. ನಾಯಿ ಬಾಲಕನ ಬೆನ್ನಿಗೆ ಕಚ್ಚಿದ್ದು, ಬಾಲಕ ನೋವಿನಿಂದ ಒದ್ದಾಡಿದ್ದಾನೆ. ನಂತರ ಪಾಲಕರು ಬಾಲಕನನ್ನು ತಕ್ಷಣವೇ ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ.

ನಮ್ ಪ್ಲಾಟಿನ್ಯಾಗ ಬೀದಿನಾಯಿ ಕಾಟ ಭಾಳ ಆಗೈತ್ರಿ. ಆಟಾ ಆಡಾಕಂತ್ ಹೋದ ಮಗಾ ಹುಚ್ಚನಾಯಿ ಕಡಿಸ್ಗೊಂಡ್ ಬಂದಾನ. ಪುರಸಭೆ ಕೂಡಲೇ ಬೀದಿನಾಯಿ ಹಿಡಿಯಬೇಕು. ನಮ್ ಹುಡುಗನಂಗ್ ಈ ಹಿಂದೆ ಅನೇಕ ಮಕ್ಕಳಿಗೂ ಬೀದಿನಾಯಿ ಕಡದಾವು. ಪುರಸಭೆ ಬೇಗನೇ ನಾಯಿ ಹಿಡಿಯುವ ಕೆಲ್ಸ ಮಾಡಬೇಕು ಎಂದು ಪರಶುರಾಮನ ತಾಯಿ ಒತ್ತಾಯಿಸಿದ್ದಾರೆ.ಇಂದು ಮಕ್ಕಳ ಸಾಹಿತ್ಯ ಗೌರವ ಪ್ರಶಸ್ತಿ ಪ್ರದಾನ

ಮುಂಡರಗಿ: ಧಾರವಾಡದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಏ. 25ರಂದು ಸಂಜೆ 5.30ಕ್ಕೆ ಮುಂಡರಗಿ ಕಲಾ ಶಿಕ್ಷಣ- ಸಂಸ್ಕೃತಿ ಪ್ರತಿಷ್ಠಾನ ಹಾಗೂ ಧಾರವಾಡ ಚಿಲಿಪಿಲಿ ಸಂಸ್ಥೆ ಸಹಯೋಗದಲ್ಲಿ ಆದರ್ಶ ಶಿಕ್ಷಕಿ ಕಲಾ ನಿಂಗು ಸೊಲಗಿ ಸ್ಮರಣೆಯಲ್ಲಿ ಕೊಡುವ 2025ರ ಮಕ್ಕಳ ಸಾಹಿತ್ಯ ಗೌರವ ಪ್ರಶಸ್ತಿ ಹಾಗೂ ಮಕ್ಕಳ ಸಾಹಿತ್ಯ ಪುಸ್ತಕ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ.2025ರ ಮಕ್ಕಳ ಸಾಹಿತ್ಯ ಗೌರವ ಪ್ರಶಸ್ತಿಯನ್ನು ವಿಜಯಪುರದ ಜಂಬುನಾಥ ಕಂಚ್ಯಾಣಿ ಅವರಿಗೆ, 2025ರ ಮಕ್ಕಳ ಸಾಹಿತ್ಯ ಪುಸ್ತಕ ಪ್ರಶಸ್ತಿಯನ್ನು ಮಸ್ಕಿಯ ಗುಂಡುರಾವ್ ದೇಸಾಯಿ ಅವರ ಚಾರ್ಲಿ ಚಾರ್ಲಿ ವೇರ್ ಆರ್ ಯು ಕೃತಿಗೆ ಕೊಡಲಾಗಿದ್ದು, ಹಂಪಿ ಕನ್ನಡ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಡಾ. ಮಲ್ಲಿಕಾ ಘಂಟಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.ಚಿಂತಕ ಆನಂದಗೌಡ ಪಾಟೀಲ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಿದ್ದಾರೆ. ಪ್ರಶಸ್ತಿ ಪುರಸ್ಕೃತರ ಕುರಿತು ಧಾರವಾಡ ಆಕಾಶವಾಣಿ ವಿಶ್ರಾಂತ ನಿಲಯ ನಿರ್ದೇಶಕ ಶರಣಬಸವ ಚೋಳಿನ, ಹುಲಕೋಟಿಯ ಡಾ. ವಿನಾಯಕ ಕಮತದ ಮಾತನಾಡಲಿದ್ದಾರೆ. ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಅಧ್ಯಕ್ಷತೆ ವಹಿಸುವರು ಎಂದು ಕಲಾ ಶಿಕ್ಷಣ- ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಡಾ. ನಿಂಗು ಸೊಲಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.