ಸೇತುವೆ ಉದ್ಘಾಟನೆಯಿಂದ ಪ್ರವಾಸೋದ್ಯಮಕ್ಕೆ ಅನುಕೂಲ: ಶಾಸಕ ಆರಗ ಜ್ಞಾನೇಂದ್ರ

| Published : Jul 13 2025, 01:18 AM IST

ಸೇತುವೆ ಉದ್ಘಾಟನೆಯಿಂದ ಪ್ರವಾಸೋದ್ಯಮಕ್ಕೆ ಅನುಕೂಲ: ಶಾಸಕ ಆರಗ ಜ್ಞಾನೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಬಹುಕಾಲದ ನಿರೀಕ್ಷೆಯ ಯೋಜನೆಯಾದ 423 ಕೋಟಿ ರು. ವೆಚ್ಚದಲ್ಲಿ ಅತೀ ಕಡಿಮೆ ಅವಧಿಯಲ್ಲಿ ನಿರ್ಮಾಣಗೊಂಡಿರುವ ಶರಾವತಿ ಹಿನ್ನೀರಿನ 2125 ಮೀಟರ್ ಉದ್ದದ ಅಂಬಾರಗೋಡ್ಲು-ಕನಸವಳ್ಳಿ ಸಿಗಂದೂರು ಸಂಪರ್ಕ ಸೇತುವೆಯನ್ನು ಜು.14 ರಂದು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ಬಹುಕಾಲದ ನಿರೀಕ್ಷೆಯ ಯೋಜನೆಯಾದ 423 ಕೋಟಿ ರು. ವೆಚ್ಚದಲ್ಲಿ ಅತೀ ಕಡಿಮೆ ಅವಧಿಯಲ್ಲಿ ನಿರ್ಮಾಣಗೊಂಡಿರುವ ಶರಾವತಿ ಹಿನ್ನೀರಿನ 2125 ಮೀಟರ್ ಉದ್ದದ ಅಂಬಾರಗೋಡ್ಲು-ಕನಸವಳ್ಳಿ ಸಿಗಂದೂರು ಸಂಪರ್ಕ ಸೇತುವೆಯನ್ನು ಜು.14 ರಂದು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಸಂಕಲ್ಪ ಹಾಗೂ ಸಂಸತ್ ಸದಸ್ಯ ಬಿ.ವೈ.ರಾಘವೇಂದ್ರರವರ ವಿಶೇಷ ಶ್ರಮದಲ್ಲಿ ನಿರ್ಮಾಣಗೊಂಡಿರುವ ಈ ಸೇತುವೆ ತಾಂತ್ರಿಕವಾಗಿ ದೇಶದ ಎರಡನೇ ಅತಿ ಉದ್ದದ ಮತ್ತು ತಾಂತ್ರಿಕವಾಗಿ ಆಕರ್ಷಣೀಯ ಸೇತುವೆಯಾಗಿದ್ದು, ಈ ಪ್ರದೇಶ ಪ್ರವಾಸಿ ಕೇಂದ್ರವಾಗಿ ಪರಿವರ್ತನೆಗೊಳ್ಳುವ ಸಾಧ್ಯತೆಯಿದೆ ಎಂದು ಶನಿವಾರ ಪಟ್ಟಣದ ಶಾಸಕರ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲೆಯ ಸಮಗ್ರ ಅಭಿವೃದ್ಧಿಯಲ್ಲಿ ಸಂಸದ ಬಿ.ವೈ.ರಾಘವೇಂದ್ರರ ಸಾಧನೆ ಪವಾಡ ಸದೃಶವಾಗಿದೆ. ಸೇತುವೆಗಳು, ಹೆದ್ದಾರಿ ನಿರ್ಮಾಣ, ವಿಮಾನ ನಿಲ್ದಾಣ, ರೈಲ್ವೆ ಹೀಗೆ ಸಾವಿರಾರು ಕೋಟಿ ರು. ಅನುದಾನ ಕ್ಷತ್ರಕ್ಕೆ ಹರಿದು ಬಂದಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಾರದಿದ್ದಲ್ಲಿ ಕನಸವಳ್ಳಿ ಸೇತುವೆಯೂ ನಿರ್ಮಾಣವಾಗುತ್ತಿರಲಿಲ್ಲ ಎಂದು ಹೇಳಿದರು.

ಈ ಸೇತುವೆ ನಾಮಕರಣದ ಬಗ್ಗೆ ಹಲವು ಹೆಸರುಗಳು ಪ್ರಸ್ಥಾಪವಾಗಿದ್ದರೂ ಸಿಗಂದೂರು ಚೌಡೇಶ್ವರಿ ದೇವಿಯ ಹೆಸರು ನಾಮಕರಣ ಮಾಡುವ ಬಗ್ಗೆ ಉನ್ನತ ಮಟ್ಟದಲ್ಲಿ ಒಲವು ವ್ಯಕ್ತವಾಗಿದೆ. ಇದಕ್ಕೆ ರಾಜ್ಯ ಸರ್ಕಾರದ ಶಿಫಾರಸು ಕೂಡಾ ಮುಖ್ಯವಾಗಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ನೀರಾವರಿ ವಿದ್ಯುತ್ ಯೋಜನೆಗಳಿಗೆ ತ್ಯಾಗ ಮಾಡಿರುವ ಸಂತ್ರಸ್ತರ ಸಮಸ್ಯೆಗಳಿಗೆ ಈವರೆಗೂ ಪರಿಹಾರ ದೊರೆಯದಿರುವುದು ವಿಷಾದನೀಯ ಸಂಗತಿಯಾಗಿದೆ. ನಾಡಿಗೆ ಬೆಳಕು ನೀಡಿದ್ದರೂ ಸೂಕ್ತ ಪರಿಹಾರ ದೊರೆಯದೇ ಕಳೆದ 60 ವರ್ಷಗಳಿಂದ ಸಂತ್ರಸ್ತರ ಕುಟುಂಬಗಳು ಕತ್ತಲೆಯಲ್ಲಿಯೇ ಜೀವನ ಸಾಗಿಸುತ್ತಿರುವುದಕ್ಕೆ ತಾಂತ್ರಿಕ ಸಮಸ್ಯೆ ಮಾತ್ರವಲ್ಲದೇ ಈ ಮೊದಲಿನ ಸರ್ಕಾರಗಳ ಇಚ್ಛಾಶಕ್ತಿಯ ಕೊರತೆಯೂ ಕಾರಣವಾಗಿದೆ. ಇದೇ ಸಂಕಷ್ಟದಲ್ಲಿ ಬಹಳ ಮಂದಿ ಜೀವವನ್ನೂ ತೆರುವಂತಾಗಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.

ಜು.14 ರಂದು ಬೆಳಗ್ಗೆ 10.30 ಗಂಟೆಗೆ ಸೇತುವೆ ಉದ್ಘಾಟನೆಯ ನಂತರ ಸಚಿವ ನಿತಿನ್ ಗಡ್ಕರಿಯವರು ಸಿಗಂದೂರು ಚೌಡೇಶ್ವರಿ ದೇವಿಯ ದರ್ಶನ ಪಡೆದು ಮಧ್ಯಾಹ್ನ 12 ಗಂಟೆಗೆ ಸಾಗರದ ನೆಹರೂ ಮೈದಾನದಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳದ್ದಾರೆ. ಈ ಸಭೆಯಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಬಿಜೆಪಿಯ ಪ್ರಮುಖರಾದ ಸಂದೇಶ್ ಜವಳಿ, ಸೊಪ್ಪುಗುಡ್ಡೆ ರಾಘವೇಂದ್ರ, ಪ್ರಶಾಂತ್ ಕುಕ್ಕೆ, ಸಂತೋಷ್ ದೇವಾಡಿಗ, ಪ್ರಮೋದ್ ಪೂಜಾರಿ ಇದ್ದರು.

---

ಗ್ಯಾರಂಟಿ ಯೋಜನೆಯಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿ ನಿಂತ ನೀರಾಗಿದೆ. ಸರ್ಕಾರದಲ್ಲಿ ಸಚಿವರುಗಳ ನಡುವೆ ಅಂತರ್ಯದ್ಧ ಆರಂಭವಾಗಿದ್ದು, ಕ್ಷೇತ್ರದ ಯಾವುದೇ ಕಾಮಗಾರಿಗಳಿಗೆ ಸರ್ಕಾರದಿಂದ ಚಿಕ್ಕಾಸು ಕೂಡ ಬಿಡುಗಡೆಯಾಗುತ್ತಿಲ್ಲ.

- ಆರಗ ಜ್ಞಾನೇಂದ್ರ, ಶಾಸಕ