ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಲೋಕ್ ಅದಾಲತ್‌ನಲ್ಲಿ ರಾಜಿ ಸಂಧಾನದಿಂದ ಪ್ರಕರಣಗಳು ಶೀಘ್ರ ಇತ್ಯರ್ಥಗೊಳ್ಳುವುದರ ಜತೆಗೆ ಕಕ್ಷಿದಾರರಲ್ಲಿ ಬಾಂಧವ್ಯವೂ ಉಳಿಯಲಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷೆ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್.ಹೆಗಡೆ ಹೇಳಿದರು.ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ನಗರದ ಜಿಲ್ಲಾ ನ್ಯಾಯಾಲಯ ಸಭಾಂಗಣದಲ್ಲಿ ಶನಿವಾರ ನಡೆದ ಲೋಕ್ ಅದಾಲತ್‌ನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ನ್ಯಾಯಾಲಯಗಳಲ್ಲಿ ಸಾವಿರಾರು ಪ್ರಕರಣಗಳು ಬಾಕಿ ಉಳಿದಿದ್ದು, ಅವೆಲ್ಲಾ ಇತ್ಯರ್ಥಗೊಳ್ಳಬೇಕೆಂದರೆ ಸಾಕಷ್ಟು ಕಾಲಾವಕಾಶ ಹಿಡಿಯಲಿದೆ. ಹಾಗಾಗಿ ಲೋಕ್ ಅದಾಲತ್‌ನಲ್ಲಿ ಅವುಗಳನ್ನು ಬಗೆಹರಿಸಿಕೊಳ್ಳುವುದು ಸೂಕ್ತ. ಇದರಿಂದ ಕಕ್ಷಿದಾರರು ಪಾವತಿಸಬೇಕಾದ ನ್ಯಾಯಾಲಯದ ಶುಲ್ಕ ಹಾಗೂ ಸಮಯ ಉಳಿತಾಯವಾಗಲಿದೆ. ಆದರೆ ಕೊಲೆ, ಅತ್ಯಾಚಾರ ಹಾಗೂ ಲೋಕಾಯುಕ್ತದ ಪ್ರಕರಣಗಳು ನ್ಯಾಯಾಲಯದಲ್ಲೇ ಇತ್ಯರ್ಥವಾಗಬೇಕಿದ್ದು, ಸಹಜವಾಗಿಯೇ ವಿಳಂಬವಾಗುತ್ತದೆ ಎಂದರು.ನಾವ್ಯಾರೂ ಶಾಶ್ವತವಲ್ಲ:
ಹೃದಯಾಘಾತದಂತಹ ಪ್ರಸಂಗಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಣ್ಣ ಪುಟ್ಟ ಪ್ರಕರಣಗಳನ್ನು ವ್ಯಾಜ್ಯಗಳಾಗಿ ಬೆಳೆಸಿಕೊಳ್ಳದೆ ಲೋಕ್ ಅದಾಲತ್‌ನಲ್ಲಿ ಬಗೆಹರಿಸಿಕೊಳ್ಳುವುದು ಸೂಕ್ತ ಮತ್ತು ಅಗತ್ಯ ಕೂಡ ಎಂದು ಹೇಳಿದರು.ವಕೀಲರ ಸಂಘದ ಅಧ್ಯಕ್ಷ ಡಿ.ಬಿ.ಸುಜೇಂದ್ರ ಮಾತನಾಡಿ, ನ್ಯಾಯ ಅರಸಿ ಬರುವ ಕಕ್ಷಿದಾರರಿಗೆ ಅತ್ಯುತ್ತಮವಾದ ತೀರ್ಪು ಸಿಗಬೇಕೆಂದರೆ ಅದು ರಾಜಿ ಸಂಧಾನದಿಂದ ಮಾತ್ರ ಸಾಧ್ಯ. ಅದಾಲತ್‌ನಲ್ಲಿ ಭಾಗವಹಿಸುವ ಮುನ್ನ ಇಲ್ಲಿ ಸಿಗುವಂತೆ ಇನ್ನೆಲ್ಲೂ ನ್ಯಾಯ ಸಿಗಲು ಸಾಧ್ಯವಿಲ್ಲ ಎಂಬುದನ್ನು ಕಕ್ಷಿದಾರರು ಮನದಟ್ಟು ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ವಿವಾದವನ್ನು ಬಗೆಹರಿಸಿಕೊಳ್ಳುವ ಸರಳ ವಿಧಾನ ಮುಂದೆ ಇರುವಾಗ ಸಂಘರ್ಷವನ್ನು ಯಾಕಾಗಿ ಬೆಳೆಸಿಕೊಳ್ಳಬೇಕು? ಪ್ರತಿಯೊಬ್ಬರಲ್ಲೂ ಪ್ರಕರಣಗಳು ಶೀಘ್ರ ಇತ್ಯರ್ಥವಾಗದಿರುವ ಬಗ್ಗೆ ಅಸಮಾಧಾನವಿದ್ದೇ ಇರುತ್ತದೆ. ನಿಮ್ಮೆದುರು ಇರುವ ಕಕ್ಷಿದಾರರು ನಿಮ್ಮ ಶತ್ರುವಲ್ಲ, ಬದಲಾಗಿ ನಿಮ್ಮೊಳಗಿರುವ ಸಿಟ್ಟು, ಅಹಂಕಾರ ಹಾಗೂ ಸಂಘರ್ಷದ ಮನಸ್ಥಿತಿ ಇದೆಯಲ್ಲ ಅವೇ ನಿಮ್ಮ ಶತ್ರು. ಆಸ್ತಿ, ಹಣ ಸಂಪಾದನೆ ಮಾಡುವುದು ನಮ್ಮ ಸುಖ, ಸಂತೋಷಕ್ಕಾಗಿ. ನಮ್ಮ ಸುಖಕ್ಕೆ ಸಿಗದ ಆಸ್ತಿ, ಹಣ ವಯಸ್ಸು ಇರುವಾಗ ಸಿಗದಿದ್ದಲ್ಲಿ ಪ್ರಯೋಜನವಾದರೂ ಏನು ಎಂದು ಪ್ರಶ್ನಿಸಿದರು.ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ.ಹನುಮಂತಪ್ಪ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಸಂಧಾನಕಾರರು, ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಭಾನುಮತಿ, ನ್ಯಾಯಾಧೀಶರಾದ ಪ್ರಕಾಶ್, ಮಂಜುನಾಥ, ಕುಲಕರ್ಣಿ, ಗುರುಪ್ರಸಾದ್, ರಾಘವೇಂದ್ರ, ಸುಜಾತ, ದ್ಯಾವಪ್ಪ, ಲತಾ, ಅನುರಾಧ, ಶರತ್ ಕುಮಾರ್, ನಂದಿನಿ, ವಕೀಲರು ಹಾಗೂ ಕಕ್ಷಿದಾರರು ಭಾಗವಹಿಸಿದ್ದರು,