ಪುತ್ತೂರು: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸ್ಥಾಪಕಾಧ್ಯಕ್ಷರಾಗಿದ್ದ ಹಿರಿಯ ಪತ್ರಕರ್ತ ದಿ. ಬಿ.ಟಿ. ರಂಜನ್ ಸ್ಮರಣೆಯಲ್ಲಿ ಹೋಬಳಿ ಮಟ್ಟದಲ್ಲಿನ ಅತ್ಯುತ್ತಮ ಪತ್ರಿಕಾ ವರದಿಗೆ ವರ್ಷಕ್ಕೊಮ್ಮೆ ಬಿ.ಟಿ. ರಂಜನ್ ಪ್ರಶಸ್ತಿ ನೀಡಲು ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ನಿರ್ಧರಿಸಿದೆ. 18ರಂದು ಪುತ್ತೂರು ಪತ್ರಿಕಾ ಭವನದಲ್ಲಿ ನಡೆಯುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುತ್ತದೆ.ಉಪವಿಭಾಗ ಮಟ್ಟದ ಆಯ್ಕೆ: ಪುತ್ತೂರು, ಕಡಬ, ಸುಳ್ಯ ಮತ್ತು ಬೆಳ್ತಂಗಡಿ ತಾಲೂಕು ಸೇರಿದ ಪುತ್ತೂರು ಉಪ ವಿಭಾಗ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಯನಿರತ ಪತ್ರಕರ್ತರು 2025ರ ಜ.1ರಿಂದ ಅದೇ ವರ್ಷದ ಡಿ.31ರ ಅವಧಿಯಲ್ಲಿ ಪತ್ರಿಕೆಗಳಲ್ಲಿ ಬರೆದಿರುವ ಅತ್ಯುತ್ತಮ ಮಾನವಾಸಕ್ತಿಯ ವರದಿಗಳಲ್ಲಿ ಆಯ್ಕೆ ಮಾಡಿ ಒಬ್ಬ ವರದಿಗಾರನಿಗೆ ಬಿ.ಟಿ. ರಂಜನ್ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ನಾಲ್ಕು ತಾಲೂಕುಗಳ ಕಾರ್ಯನಿರತ ಪತ್ರಕರ್ತರ ಸಂಘದ ಮೂಲಕ ಆಯಾ ತಾಲೂಕುಗಳ ಕಾರ್ಯನಿರತ ಪತ್ರಕರ್ತರು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. 2025ರಲ್ಲಿ ಪ್ರಕಟವಾದ, ತಮ್ಮ ಬೈಲೈನ್ ಹೊಂದಿರುವ ಮಾನವಾಸಕ್ತಿಯ ವರದಿಗಳ 2 ಪ್ರತಿಗಳನ್ನು ವರದಿಗಾರರು ತಮ್ಮ ತಾಲೂಕು ಸಂಘದ ದೃಢೀಕರಣ ಪತ್ರದೊಂದಿಗೆ ಜುಲೈ 11ರ ಒಳಗೆ ಅಧ್ಯಕ್ಷರು, ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಬ್ಲ್ಯೂಜೆ ಘಟಕ), ಪತ್ರಿಕಾ ಭವನ, ಪುತ್ತೂರು ಈ ವಿಳಾಸಕ್ಕೆ ಕಳುಹಿಸಿ ಕೊಡಲು ಕೋರಲಾಗಿದೆ. ಒಬ್ಬ ವರದಿಗಾರ ಒಂದಕ್ಕಿಂತ ಹೆಚ್ಚು ವರದಿಗಳ ಪ್ರತಿಗಳನ್ನು ಕಳಿಸಬಹುದು.

ಪ್ರಶಸ್ತಿಗೆ ಬಂದ ಮಾನವಾಸಕ್ತಿಯ ವರದಿಗಳನ್ನು ಆಯ್ಕೆ ಸಮಿತಿಯು ಪರಿಶೀಲಿಸಿ ಒಂದು ಅತ್ಯುತ್ತಮ ವರದಿಯನ್ನು 2026ನೇ ಸಾಲಿನ ಬಿ.ಟಿ. ರಂಜನ್ ಪ್ರಶಸ್ತಿಗೆ ಆಯ್ಕೆ ಮಾಡಲಿದೆ ಎಂದು ಪುತ್ತೂರು ತಾಲೂಕು ಕಾರ್ಯನಿರತ ಪತ್ರಿಕರ್ತರ ಸಂಘದ ಅಧ್ಯಕ್ಷ ಸುಧಾಕರ ಸುವರ್ಣ, ಪ್ರಧಾನ ಕಾರ್ಯದರ್ಶಿ ಸಿ.ಶೇ. ಕಜೆಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹಿರಿಯ ಪತ್ರಕರ್ತ ಬಿ.ಟಿ.ರಂಜನ್: ಸುಮಾರು 4 ದಶಕಗಳ ಕಾಲ ಪುತ್ತೂರಿನಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದ ಬಿ.ಟಿ. ರಂಜನ್ ಅವರು ಪುತ್ತೂರು ತಾಲೂಕಿನ ಉಪ್ಪಿನಂಗಡಿ ನಿವಾಸಿಯಾಗಿದ್ದು, ಮುಂಗಾರು ಸಹಿತ ಹಲವು ಪತ್ರಿಕೆಗಳಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸ್ಥಾಪಕಾಧ್ಯಕ್ಷರಾಗಿದ್ದರು. ಅವರಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಪುತ್ತೂರಿನ ಡಾ.ಶಿವರಾಮ ಕಾರಂತ ಬಾಲವನ ಪತ್ರಿಕೋದ್ಯಮ ಜೀವಮಾನ ಸಾಧನಾ ಪ್ರಶಸ್ತಿ, ಸೇರಿದಂತೆ ಅನೇಕ ಸನ್ಮಾನ ಗೌರವಗಳು ಇವರಿಗೆ ಸಂದಿದ್ದವು. 2022ರ ಫೆ.5ರಂದು ಇವರು ನಿಧನರಾಗಿದ್ದರು. ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸ್ಥಾಪಕಾಧ್ಯಕ್ಷರಾಗಿ ಬಿ.ಟಿ. ರಂಜನ್ ವಹಿಸಿದ ನೇತೃತ್ವ ಮತ್ತು ಪತ್ರಿಕಾ ಕ್ಷೇತ್ರಕ್ಕೆ ಸಲ್ಲಿಸಿದ ಸುದೀರ್ಘ ಸೇವೆಯ ನೆನಪನ್ನು ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ಬಿ.ಟಿ. ರಂಜನ್ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.