ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಭಗವಾನ್ ಬುದ್ಧರು ಪ್ರಸ್ತುತಪಡಿಸಿದ ಸಮಾನತೆ, ಸಹೋದರತೆ, ಭ್ರಾತೃತ್ವದಂತಹ ಮೌಲ್ಯಯುತ ಆದರ್ಶ ಚಿಂತನೆಗಳು ವಿಶ್ವಶಾಂತಿಗೆ ಪ್ರೇರಕವಾಗಿವೆ ಕೊಳ್ಳೇಗಾಲ ಶಾಸಕ ಎ.ಆರ್. ಕೃಷ್ಣಮೂರ್ತಿ ತಿಳಿಸಿದರು.ನಗರದ ಜೆ.ಎಚ್. ಪಟೇಲ್ ಸಭಾಂಗಣದ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ೨೫೬೯ನೇ ಬುದ್ಧ ಪೂರ್ಣಿಮೆ ಅಂಗವಾಗಿ ಆಯೋಜಿಸಲಾಗಿದ್ದ ಭಗವಾನ್ ಬುದ್ಧ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಡೀ ಜಗತ್ತಿಗೆ ಶಾಂತಿಮಂತ್ರ ಬೋಧಿಸಿದ ಬುದ್ಧರ ಜಯಂತಿಯನ್ನು ಇದೇ ಮೊದಲ ಬಾರಿಗೆ ಆಚರಿಸುವ ಮೂಲಕ ಸರ್ಕಾರ ಉತ್ತಮ ನಿರ್ಧಾರ ಕೈಗೊಂಡಿದೆ. ಇದೊಂದು ಗೌರವಪೂರ್ವಕ ಕಾರ್ಯಕ್ರಮವಾಗಿದೆ. ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ಕಣ್ಣೀರು ಒರೆಸಿದ ಬುದ್ಧ ಪರಿಪೂರ್ಣ ಜೀವನದ ಆತ್ಮವಿಶ್ವಾಸ ತುಂಬಿದರು. ಹುಟ್ಟು ಸಾವುಗಳ ಮಧ್ಯೆ ಇರಬೇಕಾದ್ದು ಪ್ರೀತಿ ಮಾತ್ರ ಎಂದು ಸಾರಿದ ಬುದ್ಧ ಮಾನವಪ್ರೇಮವನ್ನು ಜಗತ್ತಿಗೆ ಉಣಬಡಿಸಿದರು ಎಂದರು.ಮನುಕುಲಕದ ಒಳಿತಿಗೆ ಸ್ಪಂದಿಸುವುದೇ ನಿಜವಾದ ಧರ್ಮ, ಅದು ಬೌದ್ಧದರ್ಮವಾಗಿದೆ. ಬುದ್ಧ ಅವರ ವೈಚಾರಿಕ ಪ್ರಜ್ಞೆಯಿಂದ ಕೂಡಿದ ತತ್ವ ಅದರ್ಶ ಚಿಂತನೆಗಳಿಗೆ ಮಾರುಹೋದವರೇ ಇಲ್ಲ. ವಿಶ್ವಶಾಂತಿಗೆ ಬುದ್ಧರ ಮೌಲ್ಯಯುತ ಚಿಂತನೆಗಳನ್ನು ಅಳವಡಿಸಿಕೊಳ್ಳುವುದು ಸೂಕ್ತವಾಗಿದೆ. ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಭಗವಾನ್ ಬುದ್ಧರ ಮಹತ್ವವನ್ನು ಅರಿತು ೧೯೫೬ರಲ್ಲಿ ಲಕ್ಷಾಂತರ ಅನುಯಾಯಿಗಳೊಂದಿಗೆ ಬೌದ್ಧಧರ್ಮ ಸ್ವೀಕರಿಸಿದರು ಎಂದು
ತಿಳಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ ಮಾತನಾಡಿ, ಬುದ್ಧ ಅವರ ಎಲ್ಲಾ ಚಿಂತನೆಗಳು ಮಾನವ ಜೀವನವನ್ನು ಉತೃಷ್ಟ್ರತೆಯಡೆಗೆ ಕೊಂಡೊಯ್ಯಲಿವೆ. ಬುದ್ಧರು ಯಾವುದೇ ಬಲವಂತದ ಆಚರಣೆಗೆ ಆದ್ಯತೆ ನೀಡದೇ ಸಹಜ ಜೀವನಕ್ಕೆ ಒತ್ತು ನೀಡಿದರು. ಪ್ರತಿಯೊಬ್ಬರು ಸರಳ ಸಮರಸದ ಜೀವನ ನಡೆಸಬೇಕು. ಆಗ ಮಾತ್ರ ಸ್ವಸ್ಥ ಸಮಾಜ ಸಾಧ್ಯವಾಗಲಿದೆ ಎಂದು ಬುದ್ಧರು ಪ್ರತಿಪಾದಿಸಿದರು ಎಂದು ಹೇಳಿದರು.
ಮುಖ್ಯಭಾಷಣ ಮಾಡಿದ ನಗರದ ಸಾಹಿತಿ ಡಾ. ಬಿ.ಆರ್. ಕೃಷ್ಣಕುಮಾರ್ ಮಾತನಾಡಿ, ಬುದ್ಧ ಎಂದರೇ ಅರಿವು. ಬುದ್ಧಮಾರ್ಗ ಎಂದರೇ ಜಾಗೃತಿಯ ಮಾರ್ಗವಾಗಿದೆ. ವ್ಯಕ್ತಿಯು ತನ್ನ ಸಮಸ್ಯೆಗಳನ್ನು ತಾನೇ ಅರ್ಥೈಸಿಕೊಂಡು ಪರಿಹಾರ ಕಂಡುಕೊಳ್ಳಬೇಕು. ನಿಮಗೆ ನೀವೇ ಬೆಳಕು. ಇಂತಹ ಸಾರ್ವಕಾಲಿಕ ಶ್ರೇಷ್ಠ ಹಾಗೂ ಅದ್ಭುತ ಚಿಂತನೆಗಳನ್ನು ಜನಸಾಮಾನ್ಯರಿಗೆ ಬೋಧಿಸಿದ ಭಗವಾನ್ ಬುದ್ಧ ಅವರು ಈ ಜಗತ್ತಿನ ಮೊದಲ ಮನೋ ವಿಜ್ಞಾನಿಯಾಗಿದ್ದಾರೆ. ತಳಸಮುದಾಯಗಳನ್ನು ತಮ್ಮೆಡೆಗೆ ಸೆಳೆದು ಜೀವನ ಉನ್ನತೀಯಡೆಗೆ ಕೊಂಡೊಯ್ದ ಬುದ್ಧ ಪರಂಪರೆ ಇಂದಿಗೂ ಪ್ರಸ್ತುತವಾಗಿದೆ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು ಅವರು ಬುದ್ಧ ಯಾವುದೇ ಜಾತಿ, ಸಮುದಾಯಕ್ಕೆ ಸೀಮಿತಗೊಳ್ಳದ ಮೇರುವ್ಯಕ್ತಿತ್ವ. ಮನುಷ್ಯನಾಗಿ ಹುಟ್ಟಿ ಮನುಷ್ಯನಾಗಿ ಬದುಕಬೇಕು. ಬುದ್ಧರ ಅದರ್ಶ ಚಿಂತನೆಗಳನ್ನು ಭಾರತ ಮಾತ್ರವಲ್ಲ. ಪ್ರಪಂಚದ ಬಹುತೇಕ ರಾಷ್ಟ್ರಗಳು ಅಳವಡಿಸಿಕೊಂಡಿವೆ. ಅನುಸರಿಸುತ್ತಿವೆ. ವಿಶ್ವಶಾಂತಿಗೆ ಬುದ್ಧರ ತತ್ವಚಿಂತನೆಗಳು ಪರಿಹಾರವಾಗಿವೆ. ಪ್ರತಿಯೊಬ್ಬರು ಸಹೋದರತೆಯಿಂದ ಬದುಕಬೇಕೆಂಬುದೇ ಬುದ್ಧರ ಆಶಯವಾಗಿತ್ತು ಎಂದರು.
ಟಿ. ನರಸೀಪುರದ ಲುಂಬಿಣಿ ಬೌದ್ಧವಿಹಾರದ ಭಂತೆ ಸವಣಪಾಲ ಬಂತೇಜೀ ಹಾಗೂ ಕಿರಿಯ ಬಂತೇಜೀ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಚುಡಾ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ ಮುನ್ನಾ, ನಗರಸಭಾ ಸದಸ್ಯ ಮಹೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನಂಜುಂಡಯ್ಯ, ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾಧ್ಯಕ್ಷರಾದ ಬಸವರಾಜು, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಆರಂಭದಲ್ಲಿ ಜನಪದ ಗಾಯಕರಾದ ಸಿ.ಎಂ. ನರಸಿಂಹಮೂರ್ತಿ ಮತ್ತು ತಂಡ ನಡೆಸಿಕೊಟ್ಟ ಬುದ್ಧ ಗೀತಗಾಯನ ಕಾರ್ಯಕ್ರಮ ಗಮನ ಸೆಳೆಯಿತು.ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಸಾರಾನಾಥ ಬೌದ್ಧವಿಹಾರದಿಂದ ಆರಂಭವಾದ ಭಗವಾನ್ ಬುದ್ಧ ಪ್ರತಿಮೆ ಮೆರವಣಿಗೆಯು ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಜಿಲ್ಲಾಡಳಿತ ಭವನ ತಲುಪಿತು. ಬಳಿಕ ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಜಿಲ್ಲಾಡಳಿತ ಭವನದ ಮುಂಭಾಗದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
-----------12ಸಿಎಚ್ಎನ್14
ಚಾಮರಾಜನಗರದ ಜೆ.ಎಚ್. ಪಟೇಲ್ ಸಭಾಂಗಣದ ೨೫೬೯ನೇ ಬುದ್ಧ ಪೂರ್ಣಿಮೆ ಅಂಗವಾಗಿ ಆಯೋಜಿಸಿದ್ದ ಭಗವಾನ್ ಬುದ್ಧ ಜಯಂತಿ ಕಾರ್ಯಕ್ರಮವನ್ನು ಶಾಸಕ ಎ.ಆರ್. ಕೃಷ್ಣಮೂರ್ತಿ ಉದ್ಘಾಟಿಸಿದರು.