ಕಿನ್ನಿಗೋಳಿ ರಾಮಮಂದಿರ ಅಮೃತಮಹೋತ್ಸವ

| Published : May 13 2025, 01:22 AM IST

ಸಾರಾಂಶ

ಕಿನ್ನಿಗೋಳಿ ಶ್ರೀ ರಾಮ ಮಂದಿರದಲ್ಲಿ ಜರಗಿದ ಮಂದಿರದ ಅಮೃತ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಮೂರು ಲೋಕಕ್ಕೆ ಕಂಟಕನಾಗಿದ್ದ ರಾವಣನ ಲಂಕೆಯನ್ನು ರಾಮನ ಬಂಟ ಹನುಮ ಸುಟ್ಟ. ಕಡಲಿಗೆ ಕಪಿಗಳಿಂದ ಸೇತುವೆ ಕಟ್ಟಿಸಿ ರಾವಣನನ್ನು ಸಂಹರಿಸಿದ. ಶತ್ರುಗಳ ಸಂಹಾರಕ್ಕೆ ಭಾರತೀಯ ಸೈನಿಕರಿಗೆ ರಾಮದೇವರು ಶಕ್ತಿಯನ್ನು ನೀಡಲೆಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶಿಸಿದ್ದಾರೆ.

ಕಿನ್ನಿಗೋಳಿ ಶ್ರೀ ರಾಮ ಮಂದಿರದಲ್ಲಿ ಜರಗಿದ ಮಂದಿರದ ಅಮೃತ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಭಜನೆಯಿಂದ ದೇವರನ್ನು ಒಲಿಸಿಕೊಳ್ಳುವುದು ಸುಲಭ. ಹಿಂದುತ್ವದ ಕೇಂದ್ರವಾಗಿ, ಕಿನ್ನಿಗೊಳಿಯ ರಾಮಮಂದಿರ ಅಮೃತಮಹೋತ್ಸವವನ್ನು ಆಚರಿಸುತ್ತಿರುವುದು ಅಭಿನಂದನೀಯ ಎಂದು ಹೇಳಿದರು.

ಕಟೀಲು ಕ್ಷೇತ್ರದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಮಾತನಾಡಿ 1941ರಲ್ಲಿ ಕಟೀಲು ಮೇಳದವರಿಂದ ದೇವರನ್ನು ಇಟ್ಟು ಐದು ದಿನಗಳ ದೇವೀ ಮಹಾತ್ಮ್ಯೆ ಯಕ್ಷಗಾನ ನಡೆದ ಈ ಜಾಗದಲ್ಲೇ ರಾಮ ಮಂದಿರ ಸ್ಥಾಪನೆಯಾಗಿ ಇವತ್ತು ಅಮೃತ ಮಹೋತ್ಸವ ನಡೆಯುತ್ತಿದೆ. ಭಜನೆ ಆರಾಧನೆಯ ಮೂಲಕ ರಾಮಮಂದಿರ ಶಕ್ತಿಕೇಂದ್ರವಾಗಿದೆ ಎಂದರು.

ಮಂಗಳೂರು ರಥಬೀದಿ ವೆಂಕಟರಮಣ ದೇವಸ್ಥಾನದ ಮೊಕ್ತೇಸರರಾದ ಸಿಎ ಎಂ. ಜಗನ್ನಾಥ ಕಾಮತ್ ಅಧ್ಯಕ್ಷತೆ ವಹಿಸಿದ್ದು , ಸುರಗಿರಿ ದೇವಳದ ಮಾಜಿ ಆಡಳಿತ ಮೊಕ್ತೇಸರ ಕೆ. ಸೀತಾರಾಮ ಶೆಟ್ಟಿ, ಸುರಗಿರಿ ದೇವಳದ ಅರ್ಚಕರಾದ ವಿಶ್ವೇಶ್ವರ ಭಟ್, ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ಜಗದೀಶ ಆಚಾರ್ಯ, ಮೂಕಾಂಬಿಕಾ ದೇವಸ್ಥಾನದ ಧರ್ಮದರ್ಶಿ ವಿವೇಕಾನಂದ, ಶ್ರೀರಾಮ ಮಂದಿರದ ಅಧ್ಯಕ್ಷ ರಾಜೇಶ್ ನಾಯಕ್. ಕಾರ್ಯದರ್ಶಿ ರಾಧಾಕೃಷ್ಣ ನಾಯಕ್, ಉಪಾಧ್ಯಕ್ಷ ಆದಿತ್ಯ ಎಂ. ಕಾಮತ್, ಕೋಶಾಧಿಕಾರಿ ಮಂಜುನಾಥ ಮಲ್ಯ ಮತ್ತಿತರರಿದ್ದರು. ರಘುನಾಥ ಕಾಮತ್ ನಿರೂಪಿಸಿದರು.

ಅಮೃತ ಮಹೋತ್ಸವದಂಗವಾಗಿ ಶ್ರೀರಾಮ ತಾರಕ ಮಂತ್ರ ಹವನ, ಖ್ಯಾತ ಗಾಯಕರಾದ ಶಂಕರ ಶ್ಯಾನುಭಾಗ್ ಭಕ್ತಿಗಾನ, ದುರ್ಗಾ ಮಕ್ಕಳ ಮೇಳದವರಿಂದ ಯಕ್ಷಗಾನ ಬಯಲಾಟ ನಡೆಯಿತು.