ವಿವೇಕರ ಸಂದೇಶ ಅನುಸರಿಸಿದರೆ ಸದೃಢ ಸಮಾಜ ನಿರ್ಮಾಣ

| Published : Jan 13 2024, 01:35 AM IST

ಸಾರಾಂಶ

ಮೈಸೂರು ವಿವಿ ಎನ್ಎಸ್ಎಸ್ ಇಟಿಐ ಸಂಯೋಜಕ ಪ್ರೊ.ಬಿ. ಚಂದ್ರಶೇಖರ್

- ಮೈಸೂರು ವಿವಿ ಎನ್ಎಸ್ಎಸ್ ಇಟಿಐ ಸಂಯೋಜಕ ಪ್ರೊ.ಬಿ. ಚಂದ್ರಶೇಖರ್

---

ಕನ್ನಡಪ್ರಭ ವಾರ್ತೆ ಮೈಸೂರು

ಸ್ವಾಮಿ ವಿವೇಕಾನಂದರ ಬದುಕು ಹಾಗೂ ಸಂದೇಶವನ್ನು ಅನುಸರಿಸಿದರೆ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಮೈಸೂರು ವಿವಿ ಎನ್ಎಸ್ಎಸ್ ಇಟಿಐ ಸಂಯೋಜಕ ಪ್ರೊ.ಬಿ. ಚಂದ್ರಶೇಖರ್ ತಿಳಿಸಿದರು.

ಕುವೆಂಪುನಗರದ ಬಾಸುದೇವ ಸೋಮಾನಿ ಕಾಲೇಜಿನಲ್ಲಿ ಎನ್ಎಸ್ಎಸ್ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಜನ್ಮ ದಿನಾಚರಣೆ ಹಾಗೂ ಯುವ ಸಪ್ತಾಹ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ವಿವೇಕಾನಂದರು ಸಮಕಾಲೀನ ಭಾರತದ ಪ್ರಖ್ಯಾತ ತತ್ವಜ್ಞಾನಿ, ವಿದ್ವಾಂಸರು, ಸಂತರು, ದಾರ್ಶನಿಕರು ಆಗಿದ್ದಾರೆ. ಯುವಕರು ಹೆಚ್ಚಾಗಿರುವ ನಮ್ಮ ದೇಶದಲ್ಲಿ ವಿವೇಕಾನಂದರ ಚಿಂತನೆ, ಆದರ್ಶಗಳನ್ನು ಅನುಸರಿಸಿದರೆ ಉತ್ತಮ ಪ್ರಜೆಯಾಗಬಹುದು ಎಂದರು.

ಪ್ರತಿಯೊಬ್ಬರು ನಿಸ್ವಾರ್ಥ ಮಾನವೀಯತೆಯ ಸೇವೆಯನ್ನು ಮಾಡಬೇಕು. ಪ್ರತಿಯೊಬ್ಬರು ಗುರಿ ಮತ್ತು ಕನಸನ್ನು ಹೊಂದಿರಬೇಕು. ಆಗ ಮಾತ್ರ ಯಶಸ್ಸನ್ನು ಕಾಣಲು ಸಾಧ್ಯ. ಯಶಸ್ಸು ಕಾಣಲು ಅವಿರತವಾದ ಶ್ರಮವಿರಬೇಕು. ಪ್ರತಿಯೊಬ್ಬರು ಜ್ಞಾನವನ್ನು ಸಂಪಾದಿಸಿ, ಆ ಜ್ಞಾನದಿಂದ ಶ್ರೇಷ್ಠ ಬದುಕನ್ನು ನಿರ್ಮಿಸಿಕೊಳ್ಳಲು ಸಾಧ್ಯ. ಹೀಗಾಗಿ, ಪ್ರತಿಯೊಬ್ಬರು ನಿಮ್ಮನ್ನು ನೀವು ಜಯಿಸಿ, ಅರ್ಥ ಮಾಡಿಕೊಳ್ಳಿ. ಆಗ ಇಡೀ ಜಗತ್ತೆ ನಿಮ್ಮದಾಗುತ್ತದೆ ಎಂದು ಅವರು ಕಿವಿಮಾತು ಹೇಳಿದರು.

ಯಾವಾಗಲು ನಮ್ಮ ಕೆಲಸ ನಮ್ಮ ಪೂಜೆಯಾಗಬೇಕು. ಪ್ರಸ್ತುತದಲ್ಲಿ ಯುವಕರಿಗೆ ಸರಿಯಾದ ಮಾರ್ಗದರ್ಶನ, ಗುರಿ ಇಲ್ಲದೆ ಅವರ ಬದುಕಿನ ದಿಕ್ಕುಗಳು ಬೇರೆಡೆಯತ್ತಾ ಸಾಗುತ್ತಿವೆ. ಇಂತಹ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರ ಬದುಕು ಹಾಗೂ ಸಂದೇಶವನ್ನು ಅನುಸರಿಸಿದರೆ ಸದೃಢ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂದು ಅವರು ತಿಳಿಸಿದರು.

ಸಂಸ್ಥೆಯ ಕಾರ್ಯದರ್ಶಿ ಕುಬೇರ್ ಪಿ. ಗೌಡ ಮಾತನಾಡಿ, ಸ್ವಾಮಿ ವಿವೇಕಾನಂದರು ಆದರ್ಶ ವ್ಯಕ್ತಿಯಾಗಿದ್ದಾರೆ. ಅವರ ಚಿಂತನೆಗಳನ್ನು ಹಾಗೂ ಸಂದೇಶಗಳನ್ನು ನಾವೆಲ್ಲರು ಅಳವಡಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶಪಾಲ ಡಾ.ಎಂ. ಮಹದೇವಸ್ವಾಮಿ ಮಾತನಾಡಿ, ಶ್ರೇಷ್ಠ ಸಂತ ಸ್ವಾಮಿ ವಿವೇಕಾನಂದರು ಇಡೀ ಜಗತ್ತಿಗೆ ಸಾರಿದ ಸಂದೇಶಗಳನ್ನ ಪ್ರತಿಯೊಬ್ಬ ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಒಂದು ಶ್ರೇಷ್ಠ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.

ಕಾಲೇಜಿನ ಅಧೀಕ್ಷಕ ಡಾ.ಎಂ.ಪಿ. ಬಸವರಾಜು, ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಡಾ.ಟಿ. ರಮೇಶ ಮೊದಲಾದವರು ಇದ್ದರು.