ಯೋಜನೆಗಳ ಸಾಕಾರ ಅಧಿಕಾರಿಗಳ ಹೊಣೆ: ರಘು

| Published : Jan 13 2024, 01:35 AM IST

ಸಾರಾಂಶ

ಕೇಂದ್ರ ಸರ್ಕಾರ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಕಾಲಕಾಲಕ್ಕೆ ಹಲವಾರು ಯೋಜನೆ, ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತದೆ. ಅವುಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವಲ್ಲಿ ಎಲ್ಲ ಇಲಾಖೆಗಳ ಹೊಣೆ ಇರುತ್ತದೆ ಎಂದು ಪ್ರಗತಿಪರ ಕೃಷಿಕ ರಘು ಸ್ವಾಧಿ ಸೊರಬದ ಚಂದ್ರಗುತ್ತಿ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಸೊರಬ

ಗ್ರಾಮಗಳ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಸಾಧ್ಯ ಎನ್ನುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಿಧ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಮಾಡುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ ಎಂದು ಪ್ರಗತಿಪರ ಕೃಷಿಕ ರಘು ಸ್ವಾಧಿ ಹೇಳಿದರು.

ತಾಲೂಕಿನ ಚಂದ್ರಗುತ್ತಿ ಗ್ರಾಮದ ಶ್ರೀ ರೇಣುಕಾಂಬಾ ಕಲ್ಯಾಣ ಮಂಟಪದ ಆವರಣದಲ್ಲಿ ಗುರುವಾರ ಕೆನರಾ ಬ್ಯಾಂಕ್ ಚಂದ್ರಗುತ್ತಿ ಶಾಖೆ ವತಿಯಿಂದ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸರ್ಕಾರದ ಯೋಜನೆಗಳನ್ನು ಜನತೆಗೆ ತಲುಪಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಆದರೆ, ಯೋಜನೆಗಳ ಕುರಿತು ಸಮರ್ಪಕ ಮಾಹಿತಿ ಕಾರ್ಯಕ್ರಮಗಳಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಗೈರು ಎದ್ದುಕಾಣುತ್ತಿದೆ. ಮಾಹಿತಿ ಅರಿವು ಕಾರ್ಯಕ್ರಮಗಳ ಯಶಸ್ವಿಗೆ ಅಧಿಕಾರಿಗಳ ಪಾಲ್ಗೊಳ್ಳುವಿಕೆ ಪ್ರಮುಖವಾಗಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರಿಯಾದ ಮಾಹಿತಿ ಇಲ್ಲದೇ ಗ್ರಾಮೀಣ ಜನತೆ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಸರ್ಕಾರದ ಕೆಲಸ ದೇವರ ಕೆಲಸ ಎಂಬುದನ್ನು ಅಧಿಕಾರಿಗಳು ಅರಿಯಬೇಕು. ಗ್ರಾಮೀಣ ಜನರಿಗೆ ಮೂಲ ಸೌಲಭ್ಯಗಳು ದೊರೆಯಬೇಕು. ಸರ್ಕಾರ ಪ್ರತಿಯೊಂದು ವಸ್ತುವಿನ ಮೇಲೆ ತೆರಿಗೆ ವಿಧಿಸುತ್ತದೆ. ಆದರೆ ಬಡವರಿಗೆ ಮಾತ್ರ ಯೋಜನೆಗಳು ತಲುಪದಿರುವುದು ಬೇಸರದ ಸಂಗತಿಯಾಗಿದೆ ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಇಂಥ ಮಾಹಿತಿ ಕಾರ್ಯಕ್ರಮಗಳು ನೆಪಮಾತ್ರಕ್ಕೆ ನಡೆಯಬಾರದು. ಗ್ರಾಮೀಣರಿಗೆ ಸದುಪಯೋಗ ವಾಗಬೇಕಾದರೆ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಿ ಜನತೆಗೆ ನೆರವಾಗಬೇಕು ಎಂದರು.ಕೆನರಾ ಬ್ಯಾಂಕ್‌ ಶಾಖಾ ವ್ಯವಸ್ಥಾಪಕ ಜಿ.ಅಶೋಕ್, ಕೇಂದ್ರ ಸರ್ಕಾರದಿಂದ ರೈತರಿಗೆ ದೊರೆಯುವ ಸೌಲಭ್ಯಗಳು, ಸಬ್ಸಿಡಿ ಹಾಗೂ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು.

ಉಜ್ವಲ ಯೋಜನೆಯಡಿ ಫಲಾನುಭವಿಗಳಿಗೆ ಬೆನ್ನೂರು ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ರೇಣುಕಾಂಬ ಇಂಡೇನ್ ಗ್ಯಾಸ್‌ ಮಾಲೀಕ ಎಂ.ಮಾರ್ಯಪ್ಪ ಉಚಿತ ಅಡುಗೆ ಅನಿಲ ಸಿಲಿಂಡರ್ ವಿತರಿಸಿದರು.

ಗ್ರಾಪಂ ಅಧ್ಯಕ್ಷೆ ಸರಿತಾ ಕೃಷ್ಣಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಯತೀಶ್, ನೋಡಲ್ ಅಧಿಕಾರಿ ಗೌಸ್, ಸಂಜೀವಿನಿ ಒಕ್ಕೂಟದ ಸದಸ್ಯೆ ಶಶಿಕಲಾ ಶೇಟ್, ಮುಖಂಡರಾದ ಪ್ರಕಾಶ್ ಮಿರ್ಜಿ, ಎಂ.ಜಿ. ಗಣಪತಿ, ಗ್ರಾಪಂ ಸಿಬ್ಬಂದಿ ಸಂತೋಷ್, ಆಶಾ ಕಾರ್ಯಕರ್ತೆಯರು, ಗ್ರಾಪಂ ಸಿಬ್ಬಂದಿ ಉಪಸ್ಥಿತರಿದ್ದರು.

- - -

ಕೋಟ್‌

ಸೊರಬ ತಾಲೂಕಿನ ವಿವಿಧ ಗ್ರಾಮಗಳಲ್ಲಿರುವ ಪ್ರಾಥಮಿಕ ಆರೋಗ್ಯ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆಯಿಂದ ಜನತೆಗೆ ಸೌಲಭ್ಯಗಳು ದೊರೆಯುತ್ತಿಲ್ಲ. ಇದರಿಂದ ಬಡವರಿಗೆ ಆರೋಗ್ಯ ಭಾಗ್ಯ ದೊರೆಯದಂತಾಗಿದೆ

- ರಘು ಸ್ವಾಧಿ, ಕೃಷಿಕ

- - -

-12ಕೆಪಿಸೊರಬ01:

ಸೊರಬ ತಾಲೂಕಿನ ಚಂದ್ರಗುತ್ತಿಯಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ರೇಣುಕಾಂಬಾ ಇಂಡೇನ್ ಗ್ಯಾಸ್‌ ಏಜೆಸ್ಸಿ ಮಾಲೀಕ ಮಾರ್ಯಪ್ಪ ಉಚಿತ ಗ್ಯಾಸ್ ಸಿಲಿಂಡರ್ ವಿತರಿಸಲಾಯಿತು.