ಹುಬ್ಬಳ್ಳಿ:

ಬಿಆರ್‌ಟಿಎಸ್‌ ಬಸ್‌ ಸಾರಿಗೆ ಆರಂಭವಾದ ಮೇಲೆ ಉಳಿದ ಬಸ್ಸು ಏರುವ ಪ್ರಯಾಣಿಕರ ಬಸ್‌ ಶೆಲ್ಟರ್‌ಗಳೇ ಮಾಯವಾಗಿವೆ!

ಇದರಿಂದ ಬಿಆರ್‌ಟಿಎಸ್‌ ಬಿಟ್ಟು ಉಳಿದ ಬಸ್‌, ಖಾಸಗಿ ಬಸ್‌ಗಳ ಪ್ರಯಾಣಿಕರು ಮಳೆ- ಬಿಸಿಲು ಎನ್ನದೇ ರಸ್ತೆಯಲ್ಲೇ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ.

ಹುಬ್ಬಳ್ಳಿ-ಧಾರವಾಡ ಮಧ್ಯೆ ಸಂಚರಿಸುವ ಪ್ರಯಾಣಿಕರಿಗೆ ಹವಾನಿಯಂತ್ರಿತ ಬಸ್‌ಗಳ ಸೌಲಭ್ಯ ಸಿಗಲಿ. ತ್ವರಿತ ಗತಿಯಲ್ಲಿ ಎರಡು ನಗರಗಳ ಮಧ್ಯೆ ಓಡಾಡುವಂತಾಗಲಿ ಎಂಬ ಉದ್ದೇಶದಿಂದ 2018ರಲ್ಲಿ ಬಿಆರ್‌ಟಿಎಸ್‌ ಪ್ರಾರಂಭಿಸಲಾಗಿದೆ.

ಬಿಆರ್‌ಟಿಎಸ್‌ ಪ್ರಾರಂಭವಾದ ಬಳಿಕ ಬೇಂದ್ರೆ ಹಾಗೂ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಗರ ಘಟಕದ ಬಸ್‌ಗಳ ಓಡಾಡ ನಿಲ್ಲುತ್ತದೆ ಎಂದು ಜನತೆ ಭಾವಿಸಲಾಗಿತ್ತು. ಆದರೆ, ಬೇಂದ್ರೆ ಅವರು ಕೋರ್ಟ್‌ಗೆ ಹೋಗಿ ಪರವಾನಗಿ ತಂದು ಬಸ್‌ ಓಡಿಸುತ್ತಿದ್ದರೆ, ಸಾಮಾನ್ಯ ಬಸ್‌ಗಳು ಓಡಾಡಲಿ ಎಂದು ನಗರ ಸಾರಿಗೆ ಘಟಕದ ಬಿಆರ್‌ಟಿಎಸ್‌ ಹೊರತುಪಡಿಸಿ 100ಕ್ಕೂ ಅಧಿಕ ಸಾದಾ ಬಸ್‌, ಬೇಂದ್ರೆ ಸಾರಿಗೆಯ 40 ಬಸ್‌ ಹುಬ್ಬಳ್ಳಿ-ಧಾರವಾಡ ಬಸ್‌ ಮಧ್ಯೆ ಸಂಚರಿಸುತ್ತಿವೆ.


ಜತೆಗೆ ನವನಗರ, ಗಾಮನಗಟ್ಟಿ, ಕೆಎಂಸಿ, ಎಪಿಎಂಸಿ, ಪ್ರಜಾನಗರ ಹೀಗೆ ಮಿಶ್ರಪಥದಲ್ಲಿ ಹತ್ತಾರು ಮಾರ್ಗಗಳ ಬಸ್‌ಗಳು ಓಡಾಡುತ್ತಿವೆ. ನಿತ್ಯ ಲಕ್ಷಾಂತರ ಜನ ಪ್ರಯಾಣಿಸುತ್ತಿದ್ದು ಮೊದಲು ಇವರಿಗೆ ರಸ್ತೆ ಪಕ್ಕದಲ್ಲಿ ಬಸ್‌ ಶೆಲ್ಟರ್‌ಗಳು ಇರುತ್ತಿದ್ದವು. ಆದರೆ, ಬಿಆರ್‌ಟಿಎಸ್‌ ಬಸ್‌ ಪ್ರಾರಂಭವಾದ ಬಳಿಕ ಮಿಶ್ರಪಥದ ಬಗ್ಗೆ ಸಾರಿಗೆ ಸಂಸ್ಥೆಗೆ ನಿರ್ಲಕ್ಷ್ಯವೋ ಏನೂ ಒಂದೇ ಒಂದು ಬಸ್‌ ಶೆಲ್ಟರ್‌ ಇಲ್ಲದಂತಾಗಿದೆ. ಇದ್ದ ಕೆಲವು ಉಪಯೋಗಕ್ಕೆ ಬಾರದಂತಾಗಿವೆ.

ಮಳೆಯೇ ಬರಲಿ, ಬಿಸಿಲೇ ಇರಲಿ ಮಿಶ್ರಪಥದದಲ್ಲಿ ಸಂಚರಿಸುವ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರು ರಸ್ತೆ ಮೇಲೆ ನಿಲ್ಲಬೇಕಾದ ಪರಿಸ್ಥಿತಿ ಇದೆ. ಹೀಗೇ ರಸ್ತೆ ಮೇಲೆ ನಿಂತಿದ್ದ ಮಹಿಳೆಗೆ ಕಾರೊಂದು ಡಿಕ್ಕಿ ಹೊಡೆದು ಪರಾರಿಯಾಗಿದೆ. ಇಂಥ ಘಟನೆಗಳು ನಿತ್ಯ ನಡೆಯುತ್ತಿದ್ದರೂ ಅಧಿಕಾರಿಗಳು ಮಾತ್ರ ಪ್ರಯಾಣಿಕರ ಸುರಕ್ಷತೆಗೆ ಶೆಲ್ಟರ್‌ ನಿರ್ಮಿಸದೆ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಕಾರಿಡಾರ್‌ ತೆರವುಗೊಳಿಸಿ:

ಬಿಆರ್‌ಟಿಎಸ್‌ ಕಾರಿಡಾರ್‌ಗೆ ಅಳವಡಿಸಿರುವ ಬ್ಯಾರಿಕೇಡ್‌ ತೆರವುಗೊಳಿಸಬೇಕು. ಕಾರಿಡಾರ್‌ ಮಧ್ಯೆ ಒಂದೇ ಒಂದು ಬ್ಯಾರಿಕೇಡ್‌ ಅಳವಡಿಸಿ ಪ್ರತ್ಯೇಕ ಪಥ ರದ್ದುಗೊಳಿಸಿ ಮಿಶ್ರಪಥವನ್ನಾಗಿಸಬೇಕು. ಇದರಿಂದ ಚಿಗರಿ ಓಡಾಟಕ್ಕೆ ಟ್ರಾಫಿಕ್‌ ಸಮಸ್ಯೆಯೂ ಎದುರಾಗುವುದಿಲ್ಲ. ಬಿಆರ್‌ಟಿಎಸ್‌ ನಿಲ್ದಾಣಗಳಲ್ಲೇ ಸಾದಾ ಬಸ್‌, ನಗರ ಸಾರಿಗೆಯ ವಿವಿಧ ರೂಟ್‌, ಬೇಂದ್ರೆ ಬಸ್‌ಗಳ ಪ್ರಯಾಣಿಕರು ನಿಲ್ಲುವುದರಿಂದ ಬಸ್‌ ಶೆಲ್ಟರ್‌ಗಳ ಸಮಸ್ಯೆಯೂ ಇರುವುದಿಲ್ಲ. ಈ ನಿಟ್ಟಿನಲ್ಲಿ ಸ್ಥಳೀಯ ಶಾಸಕರು, ಜಿಲ್ಲಾಡಳಿತ, ಸಾರಿಗೆ ಸಂಸ್ಥೆ ಕ್ರಮಕೈಗೊಳ್ಳುವ ಮೂಲಕ ಪ್ರಯಾಣಿಕರಿಗೆ ಆಗುತ್ತಿರುವ ಅನಾಹುತ ತಡೆಯಬೇಕು ಎಂಬುದು ಸಾರ್ವಜನಿಕರ ಒಕ್ಕೊರಲಿನ ಆಗ್ರಹ.

ಬಿಆರ್‌ಟಿಎಸ್‌ ಬಸ್ ಬಂದ ಮೇಲೆ ಮಿಶ್ರಪಥದಲ್ಲಿನ ಬಸ್‌ ನಿಲ್ದಾಣಗಳೇ ಇಲ್ಲದಂತಾಗಿವೆ. ನಿಲ್ದಾಣಗಳು ಇಲ್ಲದ ಕಾರಣ ರಸ್ತೆಯಲ್ಲೇ ನಿಲ್ಲಬೇಕು. ಮಳೆ, ಬಿಸಿಲಿನಿಂದ ರಕ್ಷಣೆಯೇ ಇಲ್ಲದಂತಾಗಿದೆ.

ನಾಗೇಶ ಪಾಟೀಲ, ವಿದ್ಯಾರ್ಥಿ

ಹೇಗಿದ್ದರೂ ಈಗ ಸಿಬಿಟಿ, ರೈಲ್ವೆ ನಿಲ್ದಾಣದಿಂದ ಬಿಆರ್‌ಟಿಎಸ್‌ ಬಸ್‌ಗಳು ಮಿಶ್ರಪಥದಲ್ಲೇ ಓಡಾಡುತ್ತಿವೆ. ಮಹಿಳಾ ವಿದ್ಯಾಪೀಠದಿಂದಲೂ ಧಾರವಾಡ ವರೆಗಿನ ಕಾರಿಡಾರ್‌ನ್ನು ತೆರವುಗೊಳಿಸಿದರೆ ಮಿಶ್ರಪಥದಲ್ಲಿ ಬಸ್‌ ಶೆಲ್ಟರ್‌ ಮಾಡುವ ಅಗತ್ಯವೂ ಬರಲ್ಲ. ಟ್ರಾಫಿಕ್‌ ಕಿರಿಕಿರಿಯೂ ಇರಲ್ಲ.

ರಶ್ಮಿ ಹಿರೇಮಠ, ಖಾಸಗಿ ನೌಕರಸ್ಥೆ