ಹುಬ್ಬಳ್ಳಿ:

ಹೆಸ್ಕಾಂನ ಅವೈಜ್ಞಾನಿಕ ನಿಯಮಗಳಿಂದ ರೈತರು ಕಂಗಾಲಾಗಿದ್ದಾರೆ. ಬೆಳಗ್ಗೆ 6ರಿಂದ ಮಧ್ಯಾಹ್ನ 1ರ ವರೆಗೆ ವಿದ್ಯುತ್‌ ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮೊದಲೇ ಮಳೆಯಾಗದೆ ಅನ್ನದಾತರು ಕಂಗಾಲಾಗಿದ್ದಾರೆ. ಹೆಸ್ಕಾಂ ಜಾರಿಗೆ ತಂದಿರುವ ಸೋಲಾರ್ ನಿಯಮಗಳು ರೈತರನ್ನು ಇನ್ನಿಲ್ಲದ ಸಂಕಷ್ಟಕ್ಕೆ ದೂಡುತ್ತಿವೆ ಎಂದಿದ್ದಾರೆ. ಸದ್ಯ ಹೆಸ್ಕಾಂ ಸೋಲಾರ್ ನಿಯಮದನ್ವಯ ರೈತರ ಪಂಪ್‌ಸೆಟ್‌ಗಳಿಗೆ ಬೆಳಗ್ಗೆ 9ರಿಂದ ಮಧ್ಯಾಹ್ನ 4ರ ವರೆಗೆ ವಿದ್ಯುತ್ ಪೂರೈಕೆ ಮಾಡುತ್ತಿದೆ. ಆದರೆ, ಹವಾಮಾನ ಇಲಾಖೆಯ ವರದಿಗಳ ಪ್ರಕಾರ ಈ ಅವಧಿಯಲ್ಲಿ ಗಾಳಿಯ ವೇಗ ಅತ್ಯಂತ ಹೆಚ್ಚಾಗಿರುತ್ತದೆ. ಗಾಳಿಯ ತೀವ್ರತೆಯಿಂದಾಗಿ ವಿದ್ಯುತ್ ತಂತಿಗಳು ಪರಸ್ಪರ ಸ್ಪರ್ಶಿಸಿ ಕರೆಂಟ್ ಪಸರಿಸುವ ಸಾಧ್ಯತೆ ಹೆಚ್ಚಿರುತ್ತದೆ. ​ಇದರಿಂದ ಹೊಲ-ಗದ್ದೆಗಳಲ್ಲಿ ಭಾರಿ ಅವಘಡಗಳು ಸಂಭವಿಸುತ್ತಿದ್ದು, ರೈತರ ಜೀವ ಮತ್ತು ಬೆಳೆಗೆ ಕುತ್ತು ಬಂದೊದಗಿದೆ ಎಂದಿದ್ದಾರೆ.ಹೆಸ್ಕಾಂ ಕೂಡಲೇ ಈ ಗಂಭೀರ ಸಮಸ್ಯೆ ಅರಿತು ಈಗಿರುವ ವೇಳಾಪಟ್ಟಿ ಬದಲಾಯಿಸಿ, ಬೆಳಗ್ಗೆ 6ರಿಂದ ಮಧ್ಯಾಹ್ನ 1ರ ವರೆಗೆ ವಿದ್ಯುತ್ ನೀಡಬೇಕು. ಇದರಿಂದ ರೈತರು ನಿರಾತಂಕವಾಗಿ ನೀರು ಹರಿಸಲು ಅನುಕೂಲವಾಗುತ್ತದೆ. ರೈತರಿಗೆ ತೊಂದರೆ ಕೊಡುವುದನ್ನು ಹೆಸ್ಕಾಂ ತಕ್ಷಣ ನಿಲ್ಲಿಸಬೇಕು. ಒಂದು ವೇಳೆ ವಿದ್ಯುತ್ ವೇಳಾಪಟ್ಟಿ ಬದಲಾಯಿಸದಿದ್ದರೆ, ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.