ಗದಗ: ಯಾವುದೇ ಮಾಹಿತಿಯನ್ನು ಬಂದ ತಕ್ಷಣ ನಂಬದೇ ಅಧಿಕೃತ ಮೂಲಗಳಿಂದ ಪರಿಶೀಲಿಸಿ, ಎಐ ರಚಿಸಿದ ಫೋಟೋ ಅಥವಾ ವೀಡಿಯೋ ನಿಜವೇ ಎಂದು ದೃಢಪಡಿಸಿಕೊಳ್ಳಿ ಎಂದು ಸೈಬರ್ ಕ್ರೈಂ ಪೋಲಿಸ್‌ ಠಾಣೆ ಪ್ರಭಾರ ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಮಹೇಶ ಸಜ್ಜನರ ತಿಳಿಸಿದರು.

ನಗರದ ಮರ್ಚಂಟ್ಸ್ ಲಿಬರಲ್ ಕೋ- ಆಪ್ ಬ್ಯಾಂಕ್ ಸಭಾಭವನದಲ್ಲಿ ಎಐ ಟೂಲ್ ಮತ್ತು ಸೈಬರ್‌ ಸೆಕ್ಯುರಿಟಿ ಕುರಿತು ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಐ ಮೂಲಕ ಜನರು ಟ್ರೋಲಿಂಗ್, ನಕಲಿ ಮಾಹಿತಿ, ಫೇಕ್ ಫೋಟೋ, ವೀಡಿಯೋ, ಅವಹೇಳನಕಾರಿ ಪೋಸ್ಟ್‌ಗಳು ಮತ್ತು ವಂಚನೆ ಮಾಡಲು ಪ್ರಯತ್ನಿಸಬಹುದು. ಆದ್ದರಿಂದ ಕೆಲವು ಮುನ್ನೆಚ್ಚರಿಕೆ ಮುಖ್ಯ ಎಂದರು.

ಅಪರಿಚಿತರ ಲಿಂಕ್‌ಗಳು ಅಥವಾ ಫೈಲ್‌ಗಳನ್ನು ತೆರೆಯಬೇಡಿ. ಒಟಿಪಿ ಬ್ಯಾಂಕ್ ವಿವರಗಳು, ಪಾಸ್‌ವರ್ಡ್‌ಗಳು ಅಥವಾ ವೈಯಕ್ತಿಕ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಸೋಶಿಯಲ್ ಮೀಡಿಯಾದಲ್ಲಿ ಪ್ರಚೋದನಕಾರಿ ಪೋಸ್ಟ್‌ಗಳಿಗೆ ತಕ್ಷಣ ಪ್ರತಿಕ್ರಿಯಿಸಬೇಡಿ. ಅಗತ್ಯವಿದ್ದರೆ ಬ್ಲಾಕ್ ಅಥವಾ ರಿಪೋರ್ಟ್ ಮಾಡಿ, ಬಲವಾದ ಪಾಸ್‌ವರ್ಡ್ ಮತ್ತು ಎರಡು ಹಂತದ ದೃಢೀಕರಣ ಬಳಸಿ. ಅಧಿಕೃತ ಎಐ ಸೇವೆಗಳನ್ನ ಮತ್ತು ವಿಶ್ವಾಸಾರ್ಹ ವೆಬ್‌ಸೈಟ್‌ಗಳನ್ನು ಮಾತ್ರ ಬಳಸಿ ಎಂದರು.

ಅನುಮಾನಾಸ್ಪದ ಸಂದೇಶ ಅಥವಾ ವಂಚನೆ ಕಂಡುಬಂದರೆ ಸಂಬಂಧಿತ ವೇದಿಕೆಗೆ ರಿಪೋರ್ಟ್ ಮಾಡಿ. ಅಗತ್ಯವಿದ್ದರೆ ಇಂಡಿಯನ್ ಸೈಬರ್ ಕ್ರೈಂ ಕೋ- ಆರ್ಡಿನೇಶನ್ ಸೆಂಟರ್ ಮೂಲಕ ಸೈಬರ್ ಅಪರಾಧ ಪೋರ್ಟಲ್‌ನಲ್ಲಿ ದೂರು ಸಲ್ಲಿಸಿ, ಎಐ ಉಪಯುಕ್ತ ಸಾಧನವಾಗಿದ್ದರೂ, ಅದನ್ನು ದುರುಪಯೋಗಪಡಿಸಿಕೊಳ್ಳುವದರಿಂದ ಎಚ್ಚರಿಕೆಯಿಂದಿರಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಮರ್ಚಂಟ್ಸ್ ಲಿಬರಲ್ ಕೋ- ಆಪ್ ಬ್ಯಾಂಕ್‌ ಅಧ್ಯಕ್ಷ ಮೂಹನ ಟಿ. ಕೋಟಿ ಮಾತನಾಡಿ, ಸೈಬರ್ ಸೆಕ್ಯುರಿಟಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದರೆ ಮಾಹಿತಿಯನ್ನು(ಡೇಟಾ) ಸಂಗ್ರಹಿಸುತ್ತದೆ. ಆ ಮಾಹಿತಿಯನ್ನು ವಿಶ್ಲೇಷಿಸುತ್ತದೆ. ಮಾದರಿಗಳನ್ನು ಗುರುತಿಸುತ್ತದೆ. ಅದರ ಆಧಾರದ ಮೇಲೆ ಉತ್ತರ ಅಥವಾ ಸಲಹೆ ನೀಡುತ್ತದೆ. ಸೈಬರ್ ಸೆಕ್ಯುರಿಟಿ ಎಂದರೆ ಕಂಪ್ಯೂಟರ್, ಮೊಬೈಲ್, ಇಂಟರ್‌ನೆಟ್, ಜಾಲತಾಣಗಳು ಮತ್ತು ಡೇಟಾವನ್ನು ಹ್ಯಾಕರ್‌ಗಳು, ವೈರಸ್‌ಗಳು ಹಾಗೂ ಆನ್‌ಲೈನ್ ವಂಚನೆಗಳಿಂದ ರಕ್ಷಿಸುವ ತಂತ್ರಜ್ಞಾನ ಮತ್ತು ಕ್ರಮಗಳಾಗಿವೆ. ಇದರ ಬಗ್ಗೆ ಅರಿವು ಪ್ರತಿಯೊಬ್ಬ ಸಿಬ್ಬಂದಿಗೆ ಇರಬೇಕು ಎಂದರು.


ತಾಲೂಕಿನ ಸಹಕಾರ ಅಭಿವೃದ್ಧಿ ಅಧಿಕಾರಿ ಬಿ.ಆರ್. ನಿಡಗುಂದಿ, ಕೆಸಿಸಿ ಬ್ಯಾಂಕಿನ ಮಾಜಿ ನಿರ್ದೇಶಕ ಸಿ.ಕೆ. ಮಾಳಶೆಟ್ಟರ ಹಾಗೂ ಆರೋಗ್ಯ ಅಧಿಕಾರಿ ಡಾ. ಮಹಮ್ಮದ ಮುಸ್ತಫಾ ಬಿ. ಬಗಾನೂರ ಮಾತನಾಡಿದರು. ಜಿಲ್ಲಾ ಸಹಕಾರ ಯುನಿಯನ್ ನಿರ್ದೇಶಕ ಎಸ್.ಕೆ. ಕುರಡಗಿ, ಕುಬೇರಗೌಡ ಎಸ್. ಪರ್ವತಗೌಡ್ರ ಸೇರಿದಂತೆ ಇತರರು ಇದ್ದರು. ವಿನಾಯಕ ಕಮಿತಕರ ಪ್ರಾರ್ಥಿಸಿದರು. ಚಂದ್ರಶೇಖರ ಎಸ್. ಕರಿಯಪ್ಪನವರ ಸ್ವಾಗತಿಸಿ, ನಿರೂಪಿಸಿದರು. ರಾಜು ಕೋಟಿ ವಂದಿಸಿದರು.