ನರಗುಂದ: ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಮಧ್ಯೆದ ಡಿವೈಡರ್‌ನಲ್ಲಿನ ವಿದ್ಯುತ್ ಕಂಬಗಳಲ್ಲಿ ಕಳೆದ ಮೂರು ವರ್ಷಗಳಿಂದ ಬೀದಿದೀಪಗಳೇ ಉರಿಯುತ್ತಿಲ್ಲ. ಕೂಡಲೇ ಪಟ್ಟಣಕ್ಕೆ ಬೆಳಕನ್ನು ನೀಡಬೇಕೆಂದು ಲೋಕಾಯುಕ್ತ ಸಿಪಿಐ ಪರಮೇಶ್ವರ ಕವಟಿಗಿ ಅವರಲ್ಲಿ ಸಾರ್ವಜನಿಕರು ಮನವಿ ಸಲ್ಲಿಸಿದರು.
ಬುಧವಾರ ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಕರ್ನಾಟಕ ಲೋಕಾಯುಕ್ತ ಜಿಲ್ಲಾ ಘಟಕದಿಂದ ಸಾರ್ವಜನಿಕರ ಕುಂದುಕೊರತೆಗಳ ಹಾಗೂ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಸಾರ್ವಜನಿಕರು ವಿವಿಧ ಸಮಸ್ಯೆಗಳ ಬಗ್ಗೆ ಲೋಕಾಯುಕ್ತ ಅಧಿಕಾರಿಗಳ ಗಮನಕ್ಕೆ ತಂದರು.ಪಟ್ಟಣದ ಗುಡ್ಡದ ಹಿಂಭಾಗದಲ್ಲಿ ಬಡಜನತೆಗಾಗಿ 500 ಆಶ್ರಯ ಮನೆಗಳ ನಿರ್ಮಾಣ ಆಗಬೇಕಾಗಿತ್ತು. ಅವುಗಳಲ್ಲಿ ಈಗಾಗಲೇ 298 ಮನೆಗಳು ಸಂಪೂರ್ಣ ನಿರ್ಮಾಣಗೊಂಡು ಶಾಸಕರಿಂದ ಉದ್ಘಾಟನೆಗೊಂಡಿವೆ. ಫಲಾನುಭವಿಗಳು ಮೂರು ವರ್ಷದ ಹಿಂದೆ ₹1 ಲಕ್ಷ ಡಿಡಿ ಕಟ್ಟಿದ್ದಾರೆ. ಫಲಾನುಭವಿಗಳು ಮನೆಯಿಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ಆಶ್ರಯ ಮನೆಗಳನ್ನು ಹಂಚಿಕೆ ಮಾಡಬೇಕೆಂದು ಕರವೇ ಸಂಘಟನೆಯವರು ಮನವಿ ಮಾಡಿದರು.
ಬಸವ್ವ ಬಸಲಿಂಗಪ್ಪ ಎಂಬವರು, ಜಮೀನಿನ ಪೋಡಿಗಾಗಿ ಒಂದು ವರ್ಷದಿಂದ ತಹಸೀಲ್ದಾರ್ ಕಚೇರಿಗೆ ಅಲೆದಾಡುತ್ತಿದ್ದಾರೆ. ಆದರೆ ಇಲ್ಲಿಯವರೆಗೂ ಪೋಡಿ ಮಾಡಿಲ್ಲವೆಂದು ಅಳಲು ತೋಡಿಕೊಂಡರು.ಸಾರ್ವಜನಿಕರ ಕುಂದುಕೊರತೆಗಳ ಅರ್ಜಿ ಸ್ವೀಕಾರದ ಸಭೆ ಇರುವ ಬಗ್ಗೆ ತಾಲೂಕಿನ ಜನರಿಗೆ ಮಾಹಿತಿ ಇಲ್ಲದ ಕಾರಣ ಕೇವಲ ಮೂರು ಅರ್ಜಿಗಳು ಮಾತ್ರ ಬಂದಿದ್ದವು.
ಲೋಕಾಯುಕ್ತ ಸಿಪಿಐ ಪರಮೇಶರ ಕವಟಿಗಿ ಮಾತನಾಡಿ, 3 ಅರ್ಜಿಗಳು ಬಂದಿವೆ. ಅವುಗಳಿಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸಮಸ್ಯೆ ಬಗೆಹರಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಸಿಬ್ಬಂದಿ ಮಂಜುನಾಥ, ಮುತ್ತುರಡ್ಡಿ, ನೈನಾಪೂರ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.ಸಹಾಯಧನ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ಗದಗ: 2026- 27ನೇ ಸಾಲಿನ ಶೇ. 24.10 ಹಾಗೂ ಶೇ. 5 ಯೋಜನೆಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಹಾಗೂ ಅಂಗವಿಕಲ ಫಲಾನುಭವಿಗಳಿಗೆ ನಗರಸಭೆ ಅನುದಾನದಡಿ ಸಹಾಯಧನ ಸೌಲಭ್ಯಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜು. 24 ಕೊನೆಯ ದಿನ.ಬಿಇ ಎಂಜಿನಿಯರಿಂಗ್ ಮತ್ತು ಎಂಬಿಬಿಎಸ್ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ 2026- 27ನೇ ಸಾಲಿನ ಶೇ. 24.10 ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಲ್ಯಾಪಟಾಪ್ ಖರೀದಿಸಲು ಸಹಾಯಧನ ಸೌಲಭ್ಯ ಪಡೆಯಬಹುದು.ಶೇ. 24.10 ಯೋಜನೆಯ ಪರಿಶಿಷ್ಟ ಪಂಗಡದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಶಿಕ್ಷಣಕ್ಕೆ ಸಹಾಯಧನ ಸೌಲಭ್ಯ ಪಡೆಯಬಹುದು. ಶೇ. 5ರ ಯೋಜನೆಯಡಿ ವಿಶೇಷಚೇತನರಿಗೆ ಅಂಗವೈಕಲ್ಯ ಅಥವಾ ಪೋಲಿಯೋ ರೋಗಕ್ಕೆ ಒಳಪಟ್ಟವರಿಗೆ ಕೃತಕ ಪಾದ ಇತರೆ ಛೇದಿತ ಅವಯವಗಳ ಜೋಡಣೆಗೆ ವಾಸ್ತವಿಕ ಮೊತ್ತದ ಸಹಾಯಧನ ಸೌಲಭ್ಯ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಗದಗ- ಬೆಟಗೇರಿ ನಗರಸಭೆ ಪೌರಯುಕ್ತರ ಕಚೇರಿ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.