ಹೈಕೋರ್ಟ್‌ ತರಾಟೆ ಮಣಿದು ರಾಜ್ಯ ಸಾರಿಗೆ ಮುಷ್ಕರ ವಾಪಸ್‌

| Published : Aug 06 2025, 01:15 AM IST

ಹೈಕೋರ್ಟ್‌ ತರಾಟೆ ಮಣಿದು ರಾಜ್ಯ ಸಾರಿಗೆ ಮುಷ್ಕರ ವಾಪಸ್‌
Share this Article
  • FB
  • TW
  • Linkdin
  • Email

ಸಾರಾಂಶ

ನ್ಯಾಯಾಲಯ ತಡೆ ವಿಧಿಸಿದ ಹೊರತಾಗಿಯೂ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಮಂಗಳವಾರ ಸಾರಿಗೆ ಮುಷ್ಕರ ನಡೆಸಿದ್ದು, ತನ್ನ ಆದೇಶ ಧಿಕ್ಕರಿಸಿ ಸಾರ್ವಜನಿಕರಿಗೆ ಸಮಸ್ಯೆ ಸೃಷ್ಟಿಸಿದಕ್ಕಾಗಿ ನೌಕರರ ಸಂಘಟನೆಗೆ ಹೈಕೋರ್ಟ್‌ ತೀವ್ರ ತಪರಾಕಿ ಹಾಕಿದೆ.

- ತಡೆ ಉಲ್ಲಂಘಿಸಿ ಮುಷ್ಕರ ಮಾಡಿದ್ದಕ್ಕೆ ಹೈಕೋರ್ಟ್‌ ಗರಂ । ನೌಕರರ ಸಂಘಟನೆಗೆ ಚಾಟಿ

- ಪದಾಧಿಕಾರಿಗಳ ಬಂಧಿಸುವ ಎಚ್ಚರಿಕೆ ನೀಡಿದ ಪೀಠ । ನಿನ್ನೆ ಮಧ್ಯಾಹ್ನ ಮುಷ್ಕರ ವಾಪಸ್‌

- ಆ.7ರವರೆಗೆ ಮುಷ್ಕರಕ್ಕೆ ತಡೆ । ತೆರವಾದರೆ 8ರಿಂದ ಮತ್ತೆ ಮುಷ್ಕರ: ಸಾರಿಗೆ ನೌಕರರು

---

ಕನ್ನಡಪ್ರಭ ವಾರ್ತ ಬೆಂಗಳೂರು

ನ್ಯಾಯಾಲಯ ತಡೆ ವಿಧಿಸಿದ ಹೊರತಾಗಿಯೂ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಮಂಗಳವಾರ ಸಾರಿಗೆ ಮುಷ್ಕರ ನಡೆಸಿದ್ದು, ತನ್ನ ಆದೇಶ ಧಿಕ್ಕರಿಸಿ ಸಾರ್ವಜನಿಕರಿಗೆ ಸಮಸ್ಯೆ ಸೃಷ್ಟಿಸಿದಕ್ಕಾಗಿ ನೌಕರರ ಸಂಘಟನೆಗೆ ಹೈಕೋರ್ಟ್‌ ತೀವ್ರ ತಪರಾಕಿ ಹಾಕಿದೆ. ಈ ಎಚ್ಚರಿಕೆಗೆ ಮಣಿದು ಮುಷ್ಕರವನ್ನು ವಾಪಸು ತೆಗೆದುಕೊಳ್ಳಲಾಗಿದ್ದು, ಮಂಗಳವಾರ ಸಂಜೆಯಿಂದಲೇ ಬಸ್‌ ಸಂಚಾರ ಯಥಾರೀತಿ ಆರಂಭವಾಗಿದೆ. ಇದರಿಂದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಮುಷ್ಕರ ನಿಲ್ಲಿಸದಿದ್ದರೆ ಪದಾಧಿಕಾರಿಗಳನ್ನು ಬಂಧಿಸುವುದಾಗಿಯೂ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಮಧ್ಯಾಹ್ನ 3.40ರ ಗಂಟೆಗೆ ಅನಿವಾರ್ಯವಾಗಿ ಮುಷ್ಕರ ಹಿಂಪಡೆಯಲಾಯಿತು. ಅಲ್ಲಿಯವರೆಗೆ ಅಂದರೆ ಸುಮಾರು 10 ತಾಸು ಸಾರಿಗೆ ಸೇವೆಯಲ್ಲಿ ವ್ಯತ್ಯಯ ಉಂಟಾಗಿ, ರಾಜ್ಯಾದ್ಯಂತ ಸಾರ್ವಜನಿಕರು ತೀವ್ರ ಸಮಸ್ಯೆ ಅನುಭವಿಸಬೇಕಾಯಿತು.

ಸಾರಿಗೆ ನೌಕರರ ನಡೆಯನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್‌, ಸಾರಿಗೆ ಮುಷ್ಕರದ ಮೇಲೆ ಸೋಮವಾರ ವಿಧಿಸಿದ್ದ ನಿರ್ಬಂಧವನ್ನು ಮುಂದುವರೆಸಿದೆ. ಆ.7ರವರೆಗೆ ಯಾವುದೇ ಮುಷ್ಕರ ನಡೆಸದಂತೆ ಸ್ಪಷ್ಟ ನಿರ್ದೇಶನ ನೀಡಿದೆ. ಒಂದು ವೇಳೆ ಮುಷ್ಕರ ಮುಂದುವರೆಸಿದರೆ ಎಸ್ಮಾ ಕಾಯ್ದೆಯಡಿ ಸರ್ಕಾರ ಕ್ರಮ ಕೈಗೊಳ್ಳಬಹುದು ಎಂದೂ ಸೂಚಿಸಿದೆ. ಹೀಗಾಗಿ ಸಾರ್ವಜನಿಕರ ಸಾರಿಗೆ ನೆಚ್ಚಿಕೊಂಡಿರುವ ನಾಗರಿಕರಿಗೆ ತಾತ್ಕಾಲಿಕ ರಿಲೀಫ್‌ ಸಿಕ್ಕಂತಾಗಿದೆ.

ತಡೆ ತೆರವಾದರೆ 8ರಿಂದ ಮುಷ್ಕರ:

ಇನ್ನು ಮುಷ್ಕರಕ್ಕೆ ಆ.7ರವರೆಗೆ ಹೈಕೋರ್ಟ್ ನೀಡಿರುವ ತಡೆ ತೆರವುಗೊಳಿಸಿದರೆ ಆ.8 ರಿಂದ ಮತ್ತೆ ಮುಷ್ಕರ ಹೂಡುವುದಾಗಿ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಸ್ಪಷ್ಟಪಡಿಸಿದೆ. ಹೀಗಾಗಿ ಮುಷ್ಕರದ ಭವಿಷ್ಯ ಮುಂದಿನ ಹೈಕೋರ್ಟ್‌ ಆದೇಶದ ಮೇಲೆ ನಿಂತಿದೆ. ಹೀಗಾಗಿ ಹಲವು ತಿರುವುಗಳನ್ನು ಪಡೆದುಕೊಂಡ ಸಾರಿಗೆ ಮುಷ್ಕರದ ಭವಿಷ್ಯ ತೀವ್ರ ಕುತೂಹಲ ಕೆರಳಿಸಿದೆ.

ಹೈಕೋರ್ಟ್‌ ಆದೇಶ ಧಿಕ್ಕರಿಸಿ ಮುಷ್ಕರ:

ವೇತನ ಹೆಚ್ಚಳ ಹಾಗೂ 38 ತಿಂಗಳ ವೇತನ ಹಿಂಬಾಕಿ ಪಾವತಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಆ.5 ರಂದು ಮಂಗಳವಾರದಿಂದ ಮುಷ್ಕರ ಹೂಡುವುದಾಗಿ ಹೇಳಿತ್ತು. ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಂಧಾನ ಸಭೆ ವಿಫಲವಾಗಿದ್ದರಿಂದ ಮುಷ್ಕರವನ್ನು ಖಚಿತಪಡಿಸಿತ್ತು. ಆದರೆ, ಸೋಮವಾರ ಸಂಜೆ ಹೈಕೋರ್ಟ್‌ ಒಂದು ದಿನದ ಮಟ್ಟಿಗೆ ಮುಷ್ಕರಕ್ಕೆ ತಡೆ ಹಿಡಿದಿತ್ತು. ಆದರೆ, ಸೋಮವಾರ ಸಂಜೆ ಸಭೆ ನಡೆಸಿದ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಮುಷ್ಕರ ನಡೆಸಲು ತೀರ್ಮಾನಿಸಿತು.

ಗೊಂದಲ ಮುಷ್ಕರ, ಸಾರ್ವಜನಿಕರ ಪರದಾಟ:

ಸಂಘಟನೆ ನಿರ್ಧಾರದಿಂದಾಗಿ ಮಂಗಳವಾರ ಬೆಳ್ಳಂಬೆಳಗ್ಗೆ 6 ಗಂಟೆಗೆ ಮುಷ್ಕರ ಶುರುವಾಯಿತು. ಸಾರ್ವಜನಿಕ ಬಸ್ಸುಗಳು ಡಿಪೋ, ಬಸ್ಸು ನಿಲ್ದಾಣಗಳಿಂದ ರಸ್ತೆಗಿಳಿಯದೆ ಸಾರ್ವಜನಿಕರು ಪರದಾಡುವಂತಾಯಿತು. ಮುಷ್ಕರ ಇದೆಯೋ, ಇಲ್ಲವೋ ಎಂಬ ಗೊಂದಲದಿಂದಾಗಿ ಶಾಲಾ-ಕಾಲೇಜುಗಳು ಸೇರಿ ಯಾರಿಗೂ ಜಿಲ್ಲಾಡಳಿತಗಳು ರಜೆ ಘೋಷಿಸಿರಲಿಲ್ಲ. ಏಕಾಏಕಿ ಬೆಳಗ್ಗೆ 6 ರಿಂದ ಆರಂಭವಾದ ಮುಷ್ಕರದಿಂದ ಸಾರಿಗೆ ಸೇವೆ ವ್ಯತ್ಯಯವಾಗಿ ಜನ ಪರದಾಡಬೇಕಾಯಿತು.

ಬೆಂಗಳೂರಿನಲ್ಲಿ ಬೆಳಗ್ಗೆ ಸ್ವಲ್ಪ ಸಮಯ ಬಿಎಂಟಿಸಿ ಬಸ್‌ಗಳ ಕೊರತೆ ಕಾಣಿಸಿಕೊಂಡಿತಾದರೂ, 9 ಗಂಟೆ ನಂತರದಿಂದ ನಿಧಾನವಾಗಿ ನೌಕರರ ಹಾಜರಾತಿ ಹೆಚ್ಚಾಗಿ ಬಹುತೇಕ ಬಸ್‌ಗಳು ಸೇವೆ ನೀಡಿದವು. ಕೆಎಸ್ಸಾರ್ಟಿಸಿ, ಕೆಕೆಆರ್‌ಟಿಸಿ ಮತ್ತು ಎನ್‌ಡಬ್ಲ್ಯೂಕೆಆರ್‌ಟಿಸಿ ಬಸ್‌ ಸಂಚಾರ ಭಾರೀ ಪ್ರಮಾಣದಲ್ಲಿ ಕುಸಿದಿತ್ತು. ಮಧ್ಯಾಹ್ನ 3.30 ಗಂಟೆ ವೇಳೆ ಹೈಕೋರ್ಟ್‌ಗೂ ಮುಷ್ಕರವನ್ನು ಅಮಾನತ್ತಿನಲ್ಲಿ ಇಟ್ಟಿಲ್ಲ, ಮುಷ್ಕರ ಮುಂದವರೆಸಿದ್ದೇವೆ ಎಂದು ನೌಕರರ ಸಂಘಟನೆ ಸ್ಪಷ್ಟಪಡಿಸಿತ್ತು. ಇದರಿಂದ ಕೆರಳಿದ ಹೈಕೋರ್ಟ್‌ ನ್ಯಾಯಾಧೀಶರು ಮುಷ್ಕರ ನಿಲ್ಲಿಸದಿದ್ದರೆ ಪದಾಧಿಕಾರಿಗಳನ್ನು ಬಂಧಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರಿಂದ ಮುಷ್ಕರ ಹಿಂಪಡೆಯಲಾಯಿತು.

ಶೇ.50 ರಷ್ಟು ನೌಕರರು ಗೈರು:

ಮೂರೂ ನಿಗಮಗಳಲ್ಲಿ ಶೇ.50ರಷ್ಟು ನೌಕರರು ಗೈರಾದ ಕಾರಣ ಸಂಜೆ 4 ಗಂಟೆಯವರೆಗೆ ಒಟ್ಟು ಶೇ. 63ರಷ್ಟು ಬಸ್‌ಗಳು ಮಾತ್ರ ಸೇವೆ ನೀಡಿದ್ದವು. ಇದರಿಂದಾಗಿ ನಿಗಮಗಳು ಖಾಸಗಿ ಬಸ್‌ ಸೇರಿ ಇನ್ನಿತರ ವಾಹನಗಳ ಮೂಲಕ ಸೇವೆ ನೀಡಲು ಪ್ರಯತ್ನಿಸಲಾಯಿತಾದರೂ ಪರಿಣಾಮಕಾರಿ ಸೇವೆ ಸಿಗದ ಕಾರಣ ಜನ ಸಮಸ್ಯೆ ಎದುರಿಸುವಂತಾಯಿತು. ಸಂಜೆ 5 ಗಂಟೆ ನಂತರದಿಂದ ನೌಕರರು ಕರ್ತವ್ಯಕ್ಕೆ ಹಾಜರಾಗುವ ಪ್ರಮಾಣ ಹೆಚ್ಚಾದ ಕಾರಣದಿಂದಾಗಿ ಬಸ್‌ ಸೇವೆ ಯಥಾಸ್ಥಿತಿಗೆ ಮರಳಿತು.

====ನ್ಯಾಯಾಂಗ ನಿಂದನೆ ಮಾಡಿದ್ದೀರಿ: ಸಾರಿಗೆ ನೌಕರರಿಗೆ ಕೋರ್ಟ್‌ ಚಾಟಿ

- ಎಸ್ಮಾ ಜಾರಿಯಲ್ಲಿದ್ರೂ ಮುಷ್ಕರ ನಡೆಸಿದ್ದಕ್ಕೆ ತರಾಟೆ- ಮುಷ್ಕರಕ್ಕೆ ತಡೆ ಮತ್ತೆರಡು ದಿನ ವಿಸ್ತರಿಸಿದ ಕೋರ್ಟ್‌

=---- ಕಾರ್ಮಿಕ ಸಂಘಟನೆಗಳಿಗೆ ಹೈಕೋರ್ಟ್‌ ಛೀಮಾರಿ

- ನೀವು ಆದೇಶ ಪಾಲಿಸಿಲ್ಲ, ಇದು ನ್ಯಾಯಾಂಗ ನಿಂದನೆ- ಸಮಸ್ಯೆಗಳಿದ್ರೆ ಸರ್ಕಾರ ಜತೆ ಚರ್ಚಿಸಿ ಬಗೆಹರಿಸಿಕೊಳ್ಳಿ

- ಜನಸಾಮಾನ್ಯರಿಗೆ ತೊಂದರೆ ಕೊಟ್ಟರೆ ಸಹಿಸಿಕೊಳ್ಳಲ್ಲ- ಸಾರಿಗೆ ಸಂಘಟನೆಗಳಿಗೆ ನ್ಯಾಯಾಲಯ ತೀವ್ರ ತರಾಟೆ

--ಕನ್ನಡಪ್ರಭ ವಾರ್ತೆ ಬೆಂಗಳೂರುನ್ಯಾಯಾಲಯದ ಆದೇಶ ಮತ್ತು ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ (ಎಸ್ಮಾ) ಜಾರಿಯಲ್ಲಿದ್ದ ಹೊರತಾಗಿಯೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಂಗಳವಾರ ಬಸ್‌ ಸೇವೆ ನಿಲ್ಲಿಸಿ ಮುಷ್ಕರ ನಡೆಸಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಗೆ ಹೈಕೋರ್ಟ್‌ ಛೀಮಾರಿ ಹಾಕಿದೆ.

ಮುಷ್ಕರ ತಡೆಹಿಡಿಯಲು ಹೈಕೋರ್ಟ್‌ ಆದೇಶಿಸಿದೆ. ಸರ್ಕಾರ ಜು.17ರಂದು ಎಸ್ಮಾ ಜಾರಿ ಮಾಡಿದೆ. ಹೀಗಿದ್ದರೂ ಮುಷ್ಕರ ನಡೆಸಿರುವುದು ಅಕ್ರಮ. ಇದು ನ್ಯಾಯಾಂಗ ನಿಂದನೆ. ಹೈಕೋರ್ಟ್‌ ಹಾಗೂ ರಾಜ್ಯ ಸರ್ಕಾರದ ಆದೇಶವನ್ನು ಇಲ್ಲಿ ಪಾಲಿಸಿಲ್ಲ. ನಿಮ್ಮ ಸಮಸ್ಯೆ ಏನೇ ಇದ್ದರೂ ಸರ್ಕಾರದೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳಿ. ಅದನ್ನು ಬಿಟ್ಟು ಜನಸಾಮಾನ್ಯರಿಗೆ ತೊಂದರೆ ಉಂಟು ಮಾಡುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಚಾಟಿ ಬೀಸಿದೆ.ಕೂಡಲೇ ಮುಷ್ಕರ ನಿಲ್ಲಿಸುವ ಜೊತೆಗೆ ಮುಷ್ಕರ ನಿಲ್ಲಿಸಲಾಗಿದೆ ಎಂದು ಬುಧವಾರ ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು. ಒಂದು ವೇಳೆ ಮುಷ್ಕರ ಮುಂದುವರಿಸಿದರೆ ಕೆಎಸ್‌ಆರ್‌ಟಿಸಿ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳನ್ನು ಬಂಧಿಸಲು ಆದೇಶಿಸಲಾಗುವುದು. ರಾಜ್ಯ ಸರ್ಕಾರ ಮುಷ್ಕರದಲ್ಲಿ ಪಾಲ್ಗೊಳ್ಳುವ ನೌಕರರ ವಿರುದ್ಧ ಎಸ್ಮಾ ಕಾಯ್ದೆಯಡಿ ಸೂಕ್ತ ಕ್ರಮ ಸಹ ಜರುಗಿಸಬೇಕು ಎಂದು ಸೂಚಿಸಿರುವ ನ್ಯಾಯಪೀಠ, ಇದೇ ವೇಳೆ ಮುಷ್ಕರ ತಡೆಹಿಡಿದು ಸೋಮವಾರ (ಆ.4) ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಎರಡು ದಿನಗಳ ಕಾಲ ವಿಸ್ತರಿಸಿದೆ.

ಜನಸಾಮಾನ್ಯರಿಗೆ ತೊಂದರೆ ಉಂಟಾಗುವುದರಿಂದ ಮುಷ್ಕರ ನಡೆಸದಿರಲು ಕೆಎಸ್ಆರ್‌ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಗೆ ಆದೇಶಿಸುವಂತೆ ಕೋರಿ ಬೆಂಗಳೂರಿನ ಜೆ.ಸುನಿಲ್‌ ಮತ್ತು ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿತು.ಇದಕ್ಕೂ ಮುನ್ನ ಅರ್ಜಿ ವಿಚಾರಣೆ ವೇಳೆ ಸರ್ಕಾರದ ಪರ ಹಾಜರಾದ ಅಡ್ವೋಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ, ರಸ್ತೆ ಸಾರಿಗೆ ನಿಗಮದ ಬಸ್‌ಗಳ ಸೇವೆ ಸ್ಥಗಿತಗೊಳಿಸಿ ಕಾರ್ಮಿಕ ಸಂಘಟನೆಗಳು ಮಷ್ಕರ ನಡೆಸಿರುವುದರಿಂದ ಜನಸಾಮಾನ್ಯರಿಗೆ ತೊಂದರೆ ಉಂಟಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳ ಜೊತೆಗೆ ನಡೆಸಿದ ರಾಜಿ ಸಂಧಾನದ ಸಭೆ ಫಲಿತಾಂಶವೇನಾಯಿತು? ಎಂದು ಕೇಳಿತು.

ಅದಕ್ಕೆ ಪ್ರತಿಕ್ರಿಯಿಸಿದ ಅಡ್ವೋಕೇಟ್‌ ಜನರಲ್‌, ಕೈಗಾರಿಕಾ ವಿವಾದಗಳ ಕಾಯ್ದೆಯಂತೆ ಕಾರ್ಮಿಕ ಸಂಘಟನೆಗಳ ಮುಖಂಡರ ಜೊತೆಗೆ ಸಂಧಾನ ಸಭೆ ನಡಸಲಾಗಿದೆ ಎಂದು ಮಾತುಕತೆಯ ವಿವರಗಳನ್ನು ನ್ಯಾಯಪೀಠಕ್ಕೆ ತಿಳಿಸಿದರು.ಅರ್ಜಿದಾರರ ಪರ ವಕೀಲೆ ದೀಕ್ಷಾ ಎನ್‌.ಅಮೃತೇಶ್‌, ಮಂಗಳವಾರ (ಆ.5) ನಡೆಸಬೇಕಿದ್ದ ಉದ್ದೇಶಿತ ಮುಷ್ಕರವನ್ನು ಒಂದು ದಿನದ ಮಟ್ಟಿಗೆ ಸ್ಥಗಿತಗೊಳಿಸಬೇಕು ಎಂದು ಹೈಕೋರ್ಟ್‌ ಮಂಗಳವಾರ ಮುಷ್ಕರ ನಿರತ ಸಂಘಟನೆಗೆ ನಿರ್ದೇಶನ ನೀಡಿದ್ದರೂ ಈ ಆದೇಶ ಬದಿಗೊತ್ತಿ ಮುಷ್ಕರ ಮುಂದುವರೆಸಲಾಗಿದೆ ಎಂದರು.

ಇದಕ್ಕೆ ನ್ಯಾಯಪೀಠ ಮುಷ್ಕರ ನಿಲ್ಲಿಸಲಾಗಿದೆಯೇ? ಎಂದು ಕೇಳಿದಾಗ ಕೆಎಸ್‌ಆರ್‌ಸಿ ಸಿಬ್ಬಂದಿ ಮತ್ತು ನೌಕರರ ಫೆಡರೇಷನ್‌ ಪರ ವಕೀಲರು, ಮುಷ್ಕರ ಅಮಾನತು ಮಾಡಿಲ್ಲ ಎಂದು ತಿಳಿಸಿದರು.ಇದರಿಂದ ಕೆರಳಿದ ನ್ಯಾಯಪೀಠ, ಅಕ್ರಮವಾಗಿ ಮುಷ್ಕರ ನಡೆಸುತ್ತಿರುವವರನ್ನು ಪೊಲೀಸರು ಬಂಧಿಸಬಹುದು. ನ್ಯಾಯಾಲಯ ಸಹ ನ್ಯಾಯಾಂಗ ನಿಂದನೆ ಅಪರಾಧದಡಿ ನಿಮ್ಮ ವಿರುದ್ಧ ಕ್ರಮ ಜರುಗಿಸಬಹುದು. ಮುಷ್ಕರ ನಿಲ್ಲಿಸಲಾಗಿದೆಯೇ ಎಂಬ ಬಗ್ಗೆ ಬುಧವಾರ ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು. ಇಲ್ಲವಾದರೆ ನಾಳೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗುವುದು. ಸಾರಿಗೆ ನಿಗಮದ ನೌಕರರ ಸಂಟನೆಗಳ ಕ್ರಿಯಾ ಸಮಿತಿ ಪದಾಧಿಕಾರಿಗಳ ಬಂಧನಕ್ಕೆ ಆದೇಶಿಸಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿಗಳು ಎಚ್ಚರಿಕೆ ನೀಡಿದರು. ಇದರಿಂದ ತಬ್ಬಿಬ್ಬಾದ ಕಾರ್ಮಿಕ ಸಂಘಟನೆಗಳ ಪರ ವಕೀಲರು, ನಾಳೆ ಮುಷ್ಕರ ನಡೆಸುವುದಿಲ್ಲ ಎಂದರು.

ಈ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ, ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ ಕೆಎಸ್‌ಆರ್‌ಸಿಟಿಯ ನಾಲ್ಕು ಸಾರಿಗೆ ನಿಗಮಗಳ ನೌಕರರ ಸಂಘಟನೆಗಳಿಗೆ ನೋಟಿಸ್ ಜಾರಿ ಮಾಡಿತು. ಸಾರಿಗೆ ನೌಕರರು ಮುಷ್ಕರ ಮುಂದುವರಿಸಿದರೆ ಅವರ ವಿರುದ್ಧ ಎಸ್ಮಾ ಅಡಿ ಸರ್ಕಾರ ಕ್ರಮ ಕೈಗೊಳ್ಳಬಹುದು ಎಂದು ತಿಳಿಸಿತು.