ಸಾರಾಂಶ
- ಮೊದಲ ಹಂತದಲ್ಲಿ 200 ಮದರಸಾ ಬೋಧಕರಿಗೆ ಕಲಿಕೆ
- ಮುಂದೆ ಮೌಲ್ವಿಗಳಿಗೂ ಕನ್ನಡ ಕಲಿಕೆ: ಸಚಿವ ಜಮೀರ್--ಬೋಧನೆ ಹೇಗಿರುತ್ತೆ?- ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಮದರಸಾ ಶಿಕ್ಷಕರಿಗೆ ಕನ್ನಡ ಕಲಿಕೆ ಪಠ್ಯ
- 36 ಗಂಟೆ ಕಾಲಾವಧಿಯ ಕನ್ನಡ ಕಲಿಕಾ ತರಬೇತಿ ಕಾರ್ಯಕ್ರಮ ಆಯೋಜನೆ- ಬೋಧಕರಿಗೆ ವಾರಾಂತ್ಯದಲ್ಲಿ ದಿನಕ್ಕೆ 2 ತಾಸುಗಳ ಕಾಲ ಕನ್ನಡ ಭಾಷೆ ಕಲಿಕೆ
- ಬೆಂಗಳೂರಿನ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಹಾಲ್‌ನಲ್ಲಿ ತರಗತಿಗಳು- ರಾಜ್ಯದಲ್ಲಿ 2000 ಮದರಸಾಗಳಿದ್ದು, ಎಲ್ಲ ಕಡೆ ಮುಂದೆ ಕಲಿಕಾ ಶಿಬಿರಗಳು
- ಮೊದಲ ಹಂತದಲ್ಲಿ ಮದರಸಾ ಶಿಕ್ಷಕರಿಗೆ, ನಂತರ ಮೌಲ್ವಿಗಳಿಗೆ ಕಲಿಕೆ----ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದ ಅರೇಬಿಕ್ ಮದರಸಾಗಳ ಗುರುಗಳಿಗೆ ಕನ್ನಡ ಕಲಿಸುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಮೊದಲ ಹಂತದಲ್ಲಿ 200 ಮದರಸಾ ಬೋಧಕರಿಗೆ ಕನ್ನಡ ಕಲಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮಸೀದಿಗಳ ಮೌಲ್ವಿಗಳಿಗೂ ಕನ್ನಡ ಕಲಿಸಲಾಗುವುದು ಎಂದು ಅಲ್ಪಸಂಖ್ಯಾತರ ಇಲಾಖೆ ಸಚಿವ ಜಮೀರ್ ಅಹ್ಮದ್ ತಿಳಿಸಿದರು.ಮಂಗಳವಾರ ನಗರದ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಹಯೋಗದಲ್ಲಿ ರಾಜ್ಯದ ಅರೇಬಿಕ್ ಮದರಸಾಗಳ 200 ಬೋಧಕರಿಗೆ ಕನ್ನಡ ಕಲಿಸುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ದೈನಂದಿನ ಸಂವಹನಕ್ಕೆ ಅಗತ್ಯವಿರುವ ಸರಳ ಕನ್ನಡವನ್ನು ಅವರಿಗೆ ಹೇಳಿಕೊಡಲಾಗುತ್ತದೆ. ಬೋಧಕರು ಕನ್ನಡ ಕಲಿತರೆ ವಿದ್ಯಾರ್ಥಿಗಳಿಗೂ ಕನ್ನಡ ಕಲಿಸಲು ಸಾಧ್ಯವಾಗುತ್ತದೆ ಎಂದರು.
ರಾಜ್ಯದಲ್ಲಿ ಒಟ್ಟು 2 ಸಾವಿರ ಮದರಸಾಗಳಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ರಾಜ್ಯದ ಎಲ್ಲಾ ಭಾಗಗಳಲ್ಲಿ ಮದರಸಾಗಳು ಹಾಗೂ ಮಸೀದಿಗಳ ಮೌಲ್ವಿ, ಧರ್ಮಗುರುಗಳಿಗೆ ಕನ್ನಡ ಹೇಳಿಕೊಡಲಾಗುತ್ತದೆ. ಅವರು ಕನ್ನಡ ಕಲಿಸಿದರೆ ಅವರು ವಿದ್ಯಾರ್ಥಿಗಳಿಗೂ ಕೂಡ ಕನ್ನಡ ಕಲಿಸಬಹುದು. ಕಲ್ಯಾಣ ಕರ್ನಾಟಕ ಭಾಗದಲ್ಲಿ ನಿಜಾಮರ ಆಡಳಿತ ಇದ್ದ ಕಾರಣ ಅಲ್ಲಿನ ಅಲ್ಪಸಂಖ್ಯಾತರು ಪರಿಸ್ಥಿತಿಯ ಕಾರಣದಿಂದ ಕನ್ನಡ ಕಲಿತಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಎಲ್ಲಾ ಅಲ್ಪಸಂಖ್ಯಾತರು ಕನ್ನಡ ಕಲಿಯುವಂತೆ ಮಾಡುತ್ತೇವೆ ಎಂದು ಜಮೀರ್ ಅಹ್ಮದ್ ತಿಳಿಸಿದರು.ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಮಾತನಾಡಿ, ಅಲ್ಪಸಂಖ್ಯಾತರು ಕನ್ನಡವನ್ನು ನಿರೀಕ್ಷಿತ ಮಟ್ಟದಲ್ಲಿ ಕಲಿಯದಿರುವುದು ಕೂಡ ವಿಭಜಕ ರಾಜಕಾರಣಕ್ಕೆ ಕಾರಣ. ಹೀಗಾಗಿ, ಭಾಷೆ ಮೂಲಕ ಸಂಬಂಧಗಟ್ಟಿಗೊಳಿಸಲು ಅಲ್ಪಸಂಖ್ಯಾತ ಸಮುದಾಯಕ್ಕೆ ಕನ್ನಡ ಕಲಿಸುವ ಪ್ರಯತ್ನ ಆರಂಭಿಸಲಾಗಿದೆ.
ಪ್ರಾಧಿಕಾರದಿಂದ ಪಠ್ಯ:ಪ್ರಾಧಿಕಾರದಿಂದ ಪಠ್ಯ ಸಿದ್ಧಪಡಿಸಲಾಗಿದೆ. ಒಟ್ಟು 36 ಗಂಟೆಗಳ ತರಬೇತಿ ಕಾರ್ಯಕ್ರಮವನ್ನು ವಾರಾಂತ್ಯದಲ್ಲಿ ದಿನಕ್ಕೆ 2 ತಾಸು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಹಾಲ್‌ನಲ್ಲಿ ತೆಗೆದುಕೊಳ್ಳಲಾಗುತ್ತದೆ ಎಂದರು.
ಭಾಷೆ ಮೂಲತಃ ಧಾರ್ಮಿಕವಲ್ಲ. ಅದು ಯಾವತ್ತಿಗೂ ಜಾತ್ಯತೀತ. ಅಕ್ಬರನ ತಾಯಿ ಹಮೀದ್ ಅವರು ರಾಮಾಯಣವನ್ನು ಪರ್ಷಿಯನ್ ಭಾಷೆಗೆ ಅನುವಾದಿಸಿದ್ದರು. ಸಾಮರಸ್ಯದ ದೃಷ್ಟಿಯಿಂದ ಎಲ್ಲವನ್ನೂ ಮರೆತು ಅಲ್ಪಸಂಖ್ಯಾತರು ರಾಜ್ಯ ಭಾಷೆ ಕಲಿಯಲು ಮುಂದಾಗಬೇಕು. ಮುಂದಿನ ದಿನಗಳಲ್ಲಿ ಕ್ರೈಸ್ತ ಸಮುದಾಯ ಸೇರಿ ಎಲ್ಲ ಅಲ್ಪಸಂಖ್ಯಾತ ಸಮುದಾಯಗಳಿಗೆ ಕನ್ನಡ ಕಲಿಸುವ ಪ್ರಯತ್ನ ಪ್ರಾಧಿಕಾರ ಮಾಡಲಿದೆ ಎಂದು ಬಿಳಿಮಲೆ ತಿಳಿಸಿದರು.ಉರ್ದು ಅಕಾಡೆಮಿ ಕನ್ನಡ ಸಂಸ್ಕೃತಿ ಇಲಾಖೆಯಡಿ ತನ್ನಿ:
ಉರ್ದು ಅಕಾಡೆಮಿಯನ್ನು ಮುಖ್ಯವಾಹಿನಿಯಲ್ಲಿ ಉಳಿಸುವ ಉದ್ದೇಶದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ತರಬೇಕೆಂದು ಬಿಳಿಮಲೆ ಅವರು ಸಚಿವ ಜಮೀರ್ ಅಹ್ಮದ್ ಅವರಲ್ಲಿ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವರು. ಇದಕ್ಕೆ ಕ್ರಮ ವಹಿಸುತ್ತೇನೆ ಎನ್ನುವ ಭರವಸೆ ನೀಡಿದರು.ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು. ನಿಸಾರ್ ಅಹಮದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.