ರಿಯಲ್‌ ಎಸ್ಟೇಟ್‌ ಉದ್ಯಮಿಯನ್ನು ಅಪಹರಿಸಿ ಬೆದರಿಸಿ 2.96 ಲಕ್ಷ ರು. ಸುಲಿಗೆ ಮಾಡಿದ ಪ್ರಕರಣ ಸಂಬಂಧ ಕೇಂದ್ರ ಅಪರಾಧ ವಿಭಾಗದ(ಸಿಸಿಬಿ) ಪೊಲೀಸರು ರೌಡಿ ಶೀಟರ್‌ಗಳು ಸೇರಿ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

 ಬೆಂಗಳೂರು: ರಿಯಲ್‌ ಎಸ್ಟೇಟ್‌ ಉದ್ಯಮಿಯನ್ನು ಅಪಹರಿಸಿ ಬೆದರಿಸಿ 2.96 ಲಕ್ಷ ರು. ಸುಲಿಗೆ ಮಾಡಿದ ಪ್ರಕರಣ ಸಂಬಂಧ ಕೇಂದ್ರ ಅಪರಾಧ ವಿಭಾಗದ(ಸಿಸಿಬಿ) ಪೊಲೀಸರು ರೌಡಿ ಶೀಟರ್‌ಗಳು ಸೇರಿ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳಾದ ಮೈಕೋ ಲೇಔಟ್‌ನ ರಾಜೇಶ್ ಅಲಿಯಾಸ್ ಅಪ್ಪಿ, ಸೀನಾ ಅಲಿಯಾಸ್ ಬಾಂಬೆ ಸೀನಾ, ಲೋಕೇಶ್ ಕುಮಾರ್, ನವೀನ್ ಕುಮಾರ್, ಸೋಮಯ್ಯ ಮತ್ತು ಯುಕೇಶ್ ಬಂಧಿತರು. ಆರೋಪಿಗಳು ಆ.26ರಂದು ರಿಯಲ್‌ ಎಸ್ಟೇಟ್‌ ಉದ್ಯಮಿ ಎಚ್‌.ವಿ.ಮನೋಜ್‌ ಕುಮಾರ್‌(25) ಅವರನ್ನು ರಾಜಾಜಿನಗರದ ಮೋದಿ ಸರ್ಕಲ್‌ನಿಂದ ಅಪಹರಿಸಿ ಸುಲಿಗೆ ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ಕೈಗೊಂಡು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಏನಿದು ಪ್ರಕರಣ?

ದೂರುದಾರ ಮನೋಜ್ ಕುಮಾರ್‌ಗೆ ಆರೋಪಿ ರಾಜೇಶ್‌ ಪರಿಚಿತನಾಗಿದ್ದ. ಒಂದು ವರ್ಷದ ಹಿಂದೆ ಈ ರಾಜೇಶ್‌, ನಂದ ಕಿಶೋರ್‌ ಎಂಬಾತನಿಗೆ ಮನೋಜ್‌ ಕುಮಾರ್‌ ಅವರಿಂದ 1.20 ಲಕ್ಷ ರು. ಸಾಲ ಕೊಡಿಸಿದ್ದ. ಕೆಲ ದಿನಗಳ ಬಳಿಕ ಸಾಲ ವಾಪಸ್‌ ಕೇಳಿದಾಗ ದೊಡ್ಡವರಿಂದ ಕೊಡಿಸುವುದಾಗಿ ರಾಜೇಶ್‌ ಹೇಳಿದ್ದ. ಅದರಂತೆ ಆ.26ರಂದು ಸಂಜೆ 6.30ಕ್ಕೆ ರಾಜಾಜಿನಗರದ ಮೋದಿ ಆಸ್ಪತ್ರೆ ಸರ್ಕಲ್‌ಗೆ ಮನೋಜ್‌ ಕುಮಾರ್ ಅವರನ್ನು ಕರೆಸಿಕೊಂಡಿದ್ದಾನೆ. ಬಳಿಕ ದೊಡ್ಡವರು ಹಣ ಕೊಡುತ್ತಾರೆ ಎಂದು ಐ10 ಕಾರಿಗೆ ಕೂರಿಸಿಕೊಂಡಿದ್ದಾರೆ. ಈ ವೇಳೆ ಕಾರಿನಲ್ಲಿ ರಾಜೇಶ್‌ನ ನಾಲ್ವರು ಸಹಚರರು ಇದ್ದರು. ಬಳಿಕ ಮನೋಜ್‌ ಅವರನ್ನು ಆ ಕಾರಿನಲ್ಲಿ ಸ್ವಲ್ಪ ದೂರು ಕರೆದುಕೊಂಡು ಹೋಗಿದ್ದಾರೆ.

ಮಾರ್ಗ ಮಧ್ಯೆ ಕಾರು ಬದಲಿಸಿ ಸುಲಿಗೆ:

ಮಾರ್ಗ ಮಧ್ಯೆ ಮಹೀಂದ್ರ ಎಕ್ಸ್‌ಯುವಿ 500 ಕಾರು ತರಿಸಿಕೊಂಡು ಮನೋಜ್‌ ಅವರನ್ನು ಆ ಕಾರಿನಲ್ಲಿ ಕೂರಿಸಿಕೊಂಡು ಅಪಹರಿಸಿದ್ದಾರೆ. ರಾಜೇಶ್‌ ಹಾಗೂ ಆತನ ಆರು ಮಂದಿ ಸಹಚರರು ಮನೋಜ್‌ ಅವರನ್ನು ನಗರದ ವಿವಿಧೆ ಕಡೆ ಸುತ್ತಾಡಿಸಿದ್ದಾರೆ. ಬಳಿಕ ಡ್ರಾಗರ್‌ ತೋರಿಸಿ ಬೆದರಿಸಿ ಮನೋಜ್‌ ಅವರ ಎರಡು ಅಕೌಂಟ್‌ಗಳಿಂದ ಒಟ್ಟು 2.96 ಲಕ್ಷ ರು. ವರ್ಗಾಯಿಸಿಕೊಂಡಿದ್ದಾರೆ. ನಂತರವೂ 10 ಲಕ್ಷ ರು. ಕೊಡುವಂತೆ ಬೇಡಿಕೆ ಇರಿಸಿದ್ದಾರೆ. ಇದರಿಂದ ಹೆದರಿದ ಮನೋಜ್‌, 10 ಲಕ್ಷ ರು. ತಂದು ಕೊಡುವುದಾಗಿ ಒಪ್ಪಿಕೊಂಡಿದ್ದಾರೆ.

10 ಲಕ್ಷ ರು. ನೀಡುವಂತೆ ಬೆದರಿಕೆ

ಬಳಿಕ ಆರೋಪಿಗಳು ಮಾರನೇ ದಿನ ಮಧ್ಯಾಹ್ನ 3.30ಕ್ಕೆ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಮನೋಜ್‌ ಅವರನ್ನು ಕಾರಿನಿಂದ ಇಳಿಸಿ ಹೊರಟು ಹೋಗಿದ್ದಾರೆ. ಬಳಿಕ ಮತ್ತೆ ಮನೋಜ್‌ಗೆ ಕರೆ ಮಾಡಿ 10 ಲಕ್ಷ ರು. ಹಣ ನೀಡುವಂತೆ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಮನೋಜ್‌ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.