ಸಾರಾಂಶ
ಮಸ್ಕತ್‌ನಲ್ಲಿ ನ.28ರಂದು ನಡೆಯಲಿರುವ 3ನೇ ವಿಶ್ವ ಕನ್ನಡ ಹಬ್ಬದ ಭಿತ್ತಿಪತ್ರ ಸೋಮವಾರ ನಗರದಲ್ಲಿ ಲೋಕಾರ್ಪಣೆಗೊಂಡಿತು.
ಬೆಂಗಳೂರು : ಮಸ್ಕತ್‌ನಲ್ಲಿ ನ.28ರಂದು ನಡೆಯಲಿರುವ 3ನೇ ವಿಶ್ವ ಕನ್ನಡ ಹಬ್ಬದ ಭಿತ್ತಿಪತ್ರ ಸೋಮವಾರ ನಗರದಲ್ಲಿ ಲೋಕಾರ್ಪಣೆಗೊಂಡಿತು.
ಇಲ್ಲಿನ ಸಮರ್ಥನಂ ಟ್ರಸ್ಟ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣ್ಯರು ಪಲ್ಲಕ್ಕಿಯಲ್ಲಿ ಭಿತ್ತಿಪತ್ರ ತಂದು ಬಿಡುಗಡೆ ಮಾಡಿದರು. ಇದೇ ವೇಳೆ ಪಿ.ಎಸ್.ರಂಗನಾಥ್ ಸಂಪಾದಿಸಿರುವ ‘ಬಿಯಾಂಡ್ ದಿ ಹಾರಿಜಾನ್’ (ಇಂಡಿಯನ್ ವಾಯ್ಸಸ್ ಫ್ರಮ್ ಒಮನ್) ಪುಸ್ತಕವನ್ನು ಜನಾರ್ಪಣೆಗೊಳಿಸಿದರು.
ಈ ವೇಳೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಮಾತನಾಡಿ, ಕನ್ನಡದ ಕಾರ್ಯ, ಕಾರ್ಯಕ್ರಮಗಳು ನಮ್ಮ ಜೀವಾಳ. ನಾಡಿನ ನೆಲ, ಜಲ, ಸಾಂಸ್ಕೃತಿಗಾಗಿ ಸಾಕಷ್ಟು ಹಿರಿಯರು ಹೋರಾಟ ಮಾಡಿದ್ದಾರೆ. ಧರ್ಮೊ ರಕ್ಷತಿ ರಕ್ಷಿತಃ ಎನ್ನುವ ರೀತಿಯಲ್ಲೇ ನಾವು ಕನ್ನಡವನ್ನು ರಕ್ಷಿಸಿದರೆ ಕನ್ನಡದಿಂದ ನಾವು ರಕ್ಷಿಸಲ್ಪಡುತ್ತೇವೆ. ಹಸಿದವರಿಗೆ ಕೊಟ್ಟು ನಾವು ಉಣ್ಣುವುದು ಕನ್ನಡಿಗರ ಸಂಸ್ಕೃತಿ. ವಿಶ್ವ ಕನ್ನಡ ಹಬ್ಬಕ್ಕೆ ಮಸ್ಕತ್ ನಲ್ಲಿ ಮಾಡಲು ಮುಂದಾಗಿರುವುದು ಸಂತೋಷದ ವಿಚಾರ. ಈ ಹಬ್ಬಕ್ಕೆ ನಮ್ಮ ಸಹಕಾರ ಇರಲಿದೆ’ ಎಂದರು.
ಕನ್ನಡ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರ, ಕರ್ನಾಟಕದಲ್ಲಿ ಕನ್ನಡ ಉಳಿಸಲು ಹೋರಾಟ ಮಾಡುವ ಪರಿಸ್ಥಿತಿ ಇರುವ ಈ ಹೊತ್ತಿನಲ್ಲಿ ಕನ್ನಡ ಭಾಷೆಯನ್ನು, ಕರ್ನಾಟಕದ ಸಂಸ್ಕೃತಿಯನ್ನು ವಿಶ್ವಾದ್ಯಂತ ಪಸರಿಸುತ್ತಿರುವ ಪ್ರಯತ್ನ ಶ್ಲಾಘನೀಯ. ಕನ್ನಡ ಉಳಿಸಿ ಬೆಳೆಸಬೇಕಾದ ಅಗತ್ಯ ಹೆಚ್ಚಿದೆ. ವಿದೇಶದಲ್ಲಿ ನಮ್ಮ ಕನ್ನಡದ ಕಾರ್ಯ ಮಾಡಬೇಕಾದರೆ ಅಲ್ಲಿನ ನೆಲವನ್ನು ಪ್ರೀತಿಸಿ ನಮ್ಮ ಕನ್ನಡ ಬಿತ್ತುವ ಕೆಲಸ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದರು.
ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಮಾತನಾಡಿ, ವಿಶ್ವದಾದ್ಯಂತ ಕನ್ನಡಿಗರು ನೆಲೆಸಿದ್ದಾರೆ. ಯಾವುದೇ ಸಮುದಾಯ ಅತ್ಯುನ್ನತ ಸ್ಥಾನಕ್ಕೆ ಏರಬೇಕಾದರೆ ಅದರ ಸಂಸ್ಕೃತಿ ತಳಪಾಯ ಮಹತ್ವದ ಪಾತ್ರ ವಹಿಸುತ್ತದೆ. ಅಂತಹ ಕನ್ನಡ ಸಂಸ್ಕೃತಿಯನ್ನು ವಿಶ್ವದೆಲ್ಲೆಡೆ ಹರಡೋಣ. ವಿದೇಶದಲ್ಲಿ ಇರುವ ಕನ್ನಡಿಗರಲ್ಲಿ ಕನ್ನಡದ ಮೇಲೆ ವಿಶೇಷ ಪ್ರೀತಿ ಇರುತ್ತದೆ. ಹೆಜ್ಜೆ ಹೆಜ್ಜೆಗೂ ಅಲ್ಲಿ ಕನ್ನಡಿಗರ ಪ್ರೀತಿ, ಸಹಕಾರ ಸಿಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ರಾಷ್ಟ್ರಗಳಲ್ಲಿ ಕನ್ನಡ ಹಬ್ಬ ನಡೆಯಲಿ ಎಂದರು.
ಸಮರ್ಥನಂ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಡಾ.ಮಹಾಂತೇಶ ಕಿವಡಸಣ್ಣವರ್, ದೇಶ ವಿದೇಶದಲ್ಲಿ ನೆಲೆಸಿರುವ ಕನ್ನಡಿಗರು ಸೇರಿ ಮಸ್ಕತ್ ನಲ್ಲಿ ನಡೆಯಲಿರುವ ವಿಶ್ವ ಕನ್ನಡ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕನ್ನಡ ಉಳಿಸಿಕೊಳ್ಳಲು ಬೆಳೆಸಲು ಇಂತ ಹೆಜ್ಜೆ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ.ಸೋಮಶೇಖರ್, ಕಣ್ಣಿಲ್ಲದವರು ಸೇರಿ ಅಂಗವಿಕಲರಿಗೆ ಬೆಳಕಾಗಿರುವ ಸಮರ್ಥನಂ ಸಂಸ್ಥೆಗೆ, ಮಹಾಂತೇಶ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಿಗುವಂತಾಗಲು ಪಕ್ಷಾತೀತವಾಗಿ ರಾಜಕಾರಣಿಗಳು ಪ್ರಯತ್ನ ಮಾಡಬೇಕು ಆಗ್ರಹಿಸಿದರು.
ಕಾರ್ಯಕ್ರಮದ ರೂವಾರಿ, ಟಿ.ಶಿವಕುಮಾರ್ ನಾಗರ ನವಿಲೆ ಮಾತನಾಡಿ, ದುಬೈ, ಸಿಂಗಾಪುರದ ಬಳಿಕ ವಿಶ್ವ ಕನ್ನಡ ಹಬ್ಬ ಮಸ್ಕತ್ ನಲ್ಲಿ ನಡೆಯಲಿದೆ. ಕನ್ನಡದ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತದೆ. ಸಾಕಷ್ಟು ಸವಾಲಿನಿಂದ ಕೂಡಿದ್ದ ಎರಡನೇ ಕನ್ನಡ ಹಬ್ಬ ಯಶಸ್ವಿಗೊಳಿಸಿದಂತೆ ಈ ಬಾರಿಯ ಹಬ್ಬವನ್ನು ಗೆಲ್ಲಿಸಿ ಎಂದರು.
ಮಸ್ಕತ್ ಮೂರನೇ ವಿಶ್ವ ಕನ್ನಡ ಹಬ್ಬ’ದ ಸಮಿತಿ ಅಧ್ಯಕ್ಷ ದಿನೇಶ್ ಜೋಶಿ, ಮಸ್ಕತ್ ಕನ್ನಡ ಸಂಘದ ಮಾಜಿ ಅಧ್ಯಕ್ಷರಾದ ಕರುಣಾಕರ್ ರಾವ್, ಜಾನಕಿನಾಥ್, ಮಸ್ಕತ್ ಬಸವ ಬಳಗದ ಶಿವಕುಮಾರ್ ಕೆಂಚನಗೌಡ್ರ, ಉಷಾ ಶಿವಶಂಕರ್ ಸೇರಿ ಹಲವರಿದ್ದರು.
ವಿಶ್ವಮಟ್ಟದ ಕನ್ನಡ ಹಬ್ಬದ ರಾಯಭಾರಿಯಾಗಿಸಿ ಜವಾಬ್ದಾರಿ ನೀಡಿರುವುದು ನನ್ನ ಪುಣ್ಯ. ವಿದೇಶಕ್ಕೆ ಹೋದ ಕನ್ನಡಿಗರು ನಮ್ಮತನ ಮರೆಯದೆ ಅಲ್ಲಿ ಕನ್ನಡದ ಶಿಕ್ಷಣ ನೀಡುವುದು, ಕನ್ನಡದ ಹಬ್ಬ ನಡೆಸುವುದು ಶ್ಲಾಘನೀಯ. ಬಡ ಕಲಾವಿದರನ್ನು ಗುರುತಿಸಿ ಪ್ರಶಸ್ತಿ ನೀಡುವ ಕೆಲಸವಾಗಲಿ.
- ನಟ ಪ್ರೇಮ್