ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ವಚನ ಸಾಹಿತ್ಯ

| Published : Sep 01 2025, 01:03 AM IST

ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ವಚನ ಸಾಹಿತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಸಾಹಿತ್ಯಕ್ಕೆ ಜೈನ ಸಾಹಿತ್ಯ ಹೊರತುಪಡಿಸಿದರೆ, 12ನೇ ಶತಮಾನದ ಬಸವಾದಿ ಶರಣರ ಕೊಡುಗೆಯೂ ಅಪಾರ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಹೇಳಿದ್ದಾರೆ.

- ಲಿಂ.ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿ ಜಯಂತ್ಯುತ್ಸವದಲ್ಲಿ ಬಿ.ವಾಮದೇವಪ್ಪ । ಕೃತಿ ಲೋಕಾರ್ಪಣೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕನ್ನಡ ಸಾಹಿತ್ಯಕ್ಕೆ ಜೈನ ಸಾಹಿತ್ಯ ಹೊರತುಪಡಿಸಿದರೆ, 12ನೇ ಶತಮಾನದ ಬಸವಾದಿ ಶರಣರ ಕೊಡುಗೆಯೂ ಅಪಾರ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಹೇಳಿದರು.

ನಗರದ ಎಂಸಿಸಿ ಬಿ ಬ್ಲಾಕ್‌ನ ಬಸವ ಮಂಟಪದಲ್ಲಿ ಭಾನುವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆಯಿಂದ ಹಮ್ಮಿಕೊಂಡಿದ್ದ ಸುತ್ತೂರು ಜಗದ್ಗುರು ಲಿಂಗೈಕ್ಯ ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 110ನೇ ಜಯಂತ್ಯುತ್ಸವ, ಪರಿಷತ್ ಸಂಸ್ಥಾಪಕರ ದಿನಾಚರಣೆ, ಕೃತಿ ಲೋಕಾರ್ಪಣೆ ಹಾಗೂ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಸವಾದಿ ಶರಣ-ಶರಣೆಯರು ಸರಳ ಭಾಷೆಯಲ್ಲಿ ವಚನ ಸಾಹಿತ್ಯ ನೀಡಿದ್ದಾರೆ. ಸಾಮಾನ್ಯರಿಗೂ ಅರ್ಥವಾಗುವಂತೆ ಆಡುಭಾಷೆಯಲ್ಲಿ ವಚನಗಳನ್ನು ರಚಿಸಿ, ಕನ್ನಡ ಸಾಹಿತ್ಯ ಪರಂಪರೆಯನ್ನು 12ನೇ ಶತಮಾನದ ಶರಣ-ಶರಣೆಯು ಶ್ರೀಮಂತ ಗೊಳಿಸಿದ್ದಾರೆ. ಇಂತಹ ವಚನ ಸಾಹಿತ್ಯವನ್ನು ಜನಮಾನಸಕ್ಕೆ ತಲುಪಿಸಲು ಸುತ್ತೂರು ಮಠದ 23ನೇ ಜಗದ್ಗುರು ಲಿಂಗೈಕ್ಯ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ವಚನ ಸಾಹಿತ್ಯ ಪರಿಷತ್ತು ಹುಟ್ಟುಹಾಕಿದರು. ಬಸವಣ್ಣ ಲಿಂಗಾಯತ ಧರ್ಮದ ಸ್ಥಾಪಕರಾಗಿದ್ದು, ವಚನ ಸಾಹಿತ್ಯವೇ ಧರ್ಮಗ್ರಂಥವಾಗಿದೆ. ರಾಜ್ಯದಲ್ಲಿ ಲಿಂಗಾಯತ ಮಠಗಳು ಇಲ್ಲವಾಗಿದ್ದರೆ ಸಾಕಷ್ಟು ಜನ ಶಿಕ್ಷಣ ವಂಚಿತರಾಗುತ್ತಿದ್ದರು. ಇಂತಹ ಸುಸಂಸ್ಕೃತ ವ್ಯವಸ್ಥೆ ಬೇರಾವುದೇ ರಾಜ್ಯಗಳಲ್ಲಿ ಇಲ್ಲ. ಈ ಹಿನ್ನೆಲೆ ವಚನ ಸಾಹಿತ್ಯ ಪರಿಷತ್ತಿನೊಂದಿಗೆ ಕಸಾಪ ಜೊತೆಯಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಭುವನದ ಭಾಗ್ಯ ಕೃತಿಯ ಲೇಖಕ, ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಎಚ್.ಕೆ. ಲಿಂಗರಾಜು ಗುರುವಿನ ಸ್ಮರಣೆ ಎಂಬ ವಿಷಯವಾಗಿ ಮಾತನಾಡಿ, ಇಂದು ಶರಣ ಸಾಹಿತ್ಯ ಪರಿಷತ್ತು ಹೆಮ್ಮರವಾಗಿ ಬೆಳೆದಿದೆ. ಇದಕ್ಕೆ ಸುತ್ತೂರು ಮಠದ ಲಿಂಗೈಕ್ಯ ಜಗದ್ಗುರುಗಳೇ ಕಾರಣ. ರಾಜೇಂದ್ರ ಮಹಾಸ್ವಾಮೀಜಿ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ. 1954ರಲ್ಲಿ ಜೆ.ಎಸ್.ಎಸ್. ಮಹಾವಿದ್ಯಾಪೀಠ ಸ್ಥಾಪಿಸಿ, ನೂರಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆ ಕಟ್ಟಿದರು. ಕೃಷಿ, ವೈದ್ಯಕೀಯ ಕ್ಷೇತ್ರಗಳಲ್ಲೂ ಸೇವೆ ಸಲ್ಲಿಸಿ, ಹಸಿದವರಿಗೆ ಅನ್ನ, ಬಡವರಿಗೆ ಅಕ್ಷರ ನೀಡಿದ ತ್ರಿವಿಧ ದಾಸೋಹಿ ಸಂತರಾಗಿದ್ದರು ಎಂದರು. ಶಿಕ್ಷಣದ ಮೂಲಕ ಸಮಾಜ ಉನ್ನತೀಕರಿಸಲು ಪ್ರಯತ್ನಿಸಿದ ಕೀರ್ತಿ ಸುತ್ತೂರು ಜಗದ್ಗುರು ಅವರಿಗೆ ಸಲ್ಲುತ್ತದೆ. ಜಾತಿ, ಸಮುದಾಯಗಳನ್ನೆಲ್ಲಾ ಮೀರಿ ಎಲ್ಲರಿಗೂ ಶಿಕ್ಷಣ ದೊರಕುವಂತೆ ಮಾಡಿದರು. ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸೇವೆಗಳಿಗೆ ಬದುಕನ್ನು ಮುಡಿಪಾಗಿಟ್ಟಿದ್ದರು. ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರಿಂದ ರಾಜಗುರು ತಿಲಕ ಬಿರುದನ್ನೂ ಪಡೆದಿದ್ದರು ಎಂದು ತಿಳಿಸಿದರು.

ನಿವೃತ್ತ ಶಿಕ್ಷಣಾಧಿಕಾರಿ ಎಚ್.ಕೆ.ಲಿಂಗರಾಜು ಅವರ ಭುವನದ ಭಾಗ್ಯ ಕಿರುಹೊತ್ತಿಗೆ ಲೋಕಾರ್ಪಣೆ ಮಾಡಲಾಯಿತು. ವಿರಕ್ತ ಮಠದ ಡಾ.ಬಸವಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕದಳಿ ಮಹಿಳಾ ವೇದಿಕೆ ಜಿಲ್ಲಾಧ್ಯಕ್ಷೆ ಮಮತಾ ನಾಗರಾಜ ಅಧ್ಯಕ್ಷತೆ ವಹಿಸಿದ್ದರು. ವಚನ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ, ದತ್ತಿದಾನಿ ಕೆ.ಸಿದ್ದನಗೌಡ, ಡಾ.ಶಿವರಾಜ ಕಬ್ಬೂರು, ಪರಮೇಶ್ವರಪ್ಪ ಎಂ.ಸಿರಿಗೆರೆ, ಎಸ್.ಬಿ.ರುದ್ರಗೌಡ, ನಿರ್ಮಲ ಶಿವಕುಮಾರ ಇತರರು ಇದ್ದರು.

- - -

-31ಕೆಡಿವಿಜಿ5.ಜೆಪಿಜಿ:

ದಾವಣಗೆರೆಯಲ್ಲಿ ಭಾನುವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಹಮ್ಮಿಕೊಂಡಿದ್ದ ಸುತ್ತೂರು ಜಗದ್ಗುರು ಲಿಂಗೈಕ್ಯ ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 110ನೇ ಜಯಂತ್ಯುತ್ಸವ, ಪರಿಷತ್ ಸಂಸ್ಥಾಪಕರ ದಿನಾಚರಣೆ, ಕೃತಿ ಲೋಕಾರ್ಪಣೆ ಸಮಾರಂಭ ನಡೆಯಿತು.