ಉದ್ಯಮಿಗಳ ಸಾಲಮನ್ನಾ ಮಾಡೊರೊ, ರೈತರ ಸಾಲಮನ್ನಾ ಮಾಡಲ್ಲ

| Published : Mar 13 2024, 02:04 AM IST

ಸಾರಾಂಶ

ಮೋದಿ ಅವರು ತೆರಿಗೆ ಹೆಚ್ಚಳದ ಜೊತೆಗೆ ಬೃಹತ್ ಉದ್ಯಮಿಗಳ ಸಾಲಮನ್ನಾ ಮಾಡಿದರೇ ಹೊರತು, ರೈತರ ಸಾಲ ಮನ್ನಾ ಮಾಡಲಿಲ್ಲ ಎಂದು ಪ್ರಧಾನಿ ಮೋದಿ ವಿರುದ್ಧ ಸಚಿವ ಮಧು ಬಂಗಾರಪ್ಪ ಕಿಡಿಕಾರಿದರು.

ಆನವಟ್ಟಿ: ಧರ್ಮ, ಜಾತಿ ಆಧಾರದ ಮೇಲೆ ಜನರನ್ನು ಭಾವನಾತ್ಮಕವಾಗಿ ಮೋದಿ ಅವರು ಮತ ಬ್ಯಾಂಕ್ ಮಾಡಿಕೊಳ್ಳುತಿದ್ದಾರೆ. ಹೊರತು ಜನರ ಕಷ್ಟ, ಬಡತನ, ನಿವಾರಿಸುವ ಬಗ್ಗೆ ಯೋಜನೆಗಳು ಇಲ್ಲ. ಬಿಜೆಪಿಯ ಸುಳ್ಳಿನ ಭರವಸೆಗಳ ಮಂತ್ರ ಬರುವ ಚುನಾವಣೆಯಲ್ಲಿ ನಡೆಯವುದಿಲ್ಲ. ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಕೇಂದ್ರದ ಚುಕ್ಕಾಣಿ ಹಿಡಿಯುತ್ತದೆ ಎಂದು ಸಚಿವ ಮಧು ಬಂಗಾರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಆನವಟ್ಟಿಯಲ್ಲಿ ಹಮ್ಮಿಕೊಂಡಿದ್ದ ತಾಲೂಕು ಭೋವಿ(ವಡ್ಡರ) ಕ್ಷೇಮಾಭಿವೃಧಿ ಸಂಘದಿಂದ ಸಚಿವರ ಅಭಿನಂದನಾ ಹಾಗೂ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತಾಡಿದರು.

ವಿಧಾನಸಭೆ ಚುನಾವಣೆಯಲ್ಲಿ ಜನರಿಗೆ ನೀಡಿದ್ದ ಐದು ಗ್ಯಾರಂಟಿಯನ್ನು ಈಡೇರಿಸಿದ್ದೇವೆ. ಜನರ ಆರ್ಥಿಕ ಬದುಕು ಚೇತರಿಸಿಕೊಳ್ಳುವಂತ ಯೋಜನೆಗಳನ್ನು ಕಾಂಗ್ರೆಸ್ ಪಕ್ಷ ಮಾತ್ರವೇ ನೀಡಿದೆ ಹಾಗಾಗಿ ಜನರಿಗೆ ಮತ ಕೇಳುವ ಹಕ್ಕು ಕಾಂಗ್ರೆಸ್ ಪಕ್ಷಕ್ಕೆ ಮಾತ್ರವೇ ಇದೆ. ಮೋದಿ ಅವರು ತೆರಿಗೆ ಹೆಚ್ಚಳದ ಜೊತೆಗೆ ಬೃಹತ್ ಉದ್ಯಮಿಗಳ ಸಾಲಮನ್ನಾ ಮಾಡಿದರೇ ಹೊರತು, ರೈತರ ಸಾಲ ಮನ್ನಾ ಮಾಡಲಿಲ್ಲ ಎಂದು ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದರು.

ಭೋವಿ, ಮಡಿವಾಳ, ಗಂಗಾಮತ ಸಮಾಜಗಳ ಸಮುದಾಯ ಭವನ ನಿರ್ಮಾಣಕ್ಕೆ ತಲಾ 50 ಲಕ್ಷ ರು. ಅನುದಾನ ಮಂಜೂರು ಆಗಿದೆ. ಇನ್ನೂ ಉಳಿದಿರುವ ಸಣ್ಣ-ಸಣ್ಣ ಸಮುದಾಯಗಳನ್ನು ಗುರುತಿಸಿ ಅನುದಾನ ನೀಡಲಾಗುವುದು ಎಂದರು.

2014ರ ಲೋಕಸಭಾ ಚುನಾವಣೆಯಲ್ಲಿ ಗೀತಾ ಅಕ್ಕ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ್ದರು. ಬಹಳಷ್ಟು ಜನರು ಜೆಡಿಎಸ್‌ಗೆ ಮತ ನೀಡುವುದಿಲ್ಲ ಹಾಗಾಗಿ ಸೋಲು ಅನುಭವಿಸಬೇಕಾಯಿತು. ತಂದೆ ಬಂಗಾರಪ್ಪ ಅವರ ಅಡಳಿತ ನೋಡಿರುವ ಅಕ್ಕ, ತಂದೆಯಂತೆ ಕ್ಷೇತ್ರ ಜನರ ಸೇವೆ ಮಾಡುತ್ತಾರೆ. ಚುಣಾವಣೆಯಲ್ಲಿ ಕ್ಷೇತ್ರದ ಜನರು ಹೆಚ್ಚಿನ ಮತ ನೀಡಬೇಕು ಎಂದು ಮನವಿ ಮಾಡಿದರು.

ಭೋವಿ ಸಮಾಜ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಹಿಂದೆ ಉಳಿದಿದೆ. ಸಮಾಜ ಅಭಿವೃದ್ಧಿ ಸಾಧಿಸಬೇಕಾದರೇ ರಾಜಕೀಯ ಕ್ಷೇತ್ರದಲ್ಲಿ ಹೆಚ್ಚು ಅವಕಾಶಗಳನ್ನು ನೀಡುವ ಮೂಲಕ ಸಚಿವ ಮಧು ಬಂಗಾರಪ್ಪ ಅವರು ಸಮಾಜದ ಅಭಿವೃದ್ಧಿಗೆ ಶಕ್ತಿ ನೀಡಬೇಕು ಎಂದು ಸಂಘದ ತಾಲೂಕು ಅಧ್ಯಕ್ಷ ಎಚ್.ಜಯಪ್ಪ ಒತ್ತಾಯಿಸಿದರು.

ಜಿಲ್ಲಾಧ್ಯಕ್ಷ ಎಸ್.ರವಿಕುಮಾರ್, ತಾಲೂಕು ಕಾರ್ಯಾಧ್ಯಕ್ಷ ಸುರೇಶ್ ಹಾವಣ್ಣನವರ್, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಚೌಟಿ, ಮುಖಂಡರಾದ ಮೇಘರಾಜ್ ಎಣ್ಣೆಕೊಪ್ಪ, ಜೈಶೀಲಪ್ಪ, ಎಚ್.ಎಚ್.ಬಸವರಾಜಪ್ಪ, ವಿನಾಯಕ ಬಿಳಗಲಿ, ಅಭಿಷೇಕ್ ತತ್ತೂರು, ನೀಲಕಂಠಪ್ಪ ಕಬ್ಬೂರು, ಗಿರೀಶ್‌ ಕುಮಾರ್, ಚಂದ್ರಶೇಖರ್ ಶಕುನವಳ್ಳಿ, ಯಲ್ಲಪ್ಪ ಕಜ್ಜೇರ್, ಕೃಷ್ಣಪ್ಪ ತಲ್ಲೂರು, ನಾಗರಾಜ ಚಿಕ್ಕಚೌಟಿ, ಬಿ.ಮಂಜಪ್ಪ ಹುರುಳಿ ಇದ್ದರು.