ಶಿವಾನಂದ ಗೊಂಬಿ

ಹುಬ್ಬಳ್ಳಿ:

ಜಿಪಂ ಸದಸ್ಯ ಯೋಗೇಶಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ವಿನಯ್‌ ಕುಲಕರ್ಣಿ ಸೇರಿದಂತೆ 17 ಜನ ಅಪರಾಧಿಗಳಾಗಿದ್ದು ಶಿಕ್ಷೆ ಪ್ರಮಾಣ ಪ್ರಕಟವಾಗಿಲ್ಲ. ಆದರೆ ಈಗಲೇ ಧಾರವಾಡ ಗ್ರಾಮೀಣ ಕ್ಷೇತ್ರದ ಉಪಚುನಾವಣೆ ಯಾವಾಗ? ಯಾರಾಗ್ತಾರೆ ಮುಂದಿನ ಎಂಎಲ್‌ಎ? ಎಂಬ ಚರ್ಚೆಗಳು ಶುರುವಾಗಿವೆ.

ಇಂತಹ ಹತ್ತಾರು ಚರ್ಚೆಗಳಿಗೆ ಸೋಷಿಯಲ್‌ ಮಿಡಿಯಾ ವೇದಿಕೆಯಾಗಿದೆ. ಯೋಗೇಶಗೌಡ ಹತ್ಯೆಯಲ್ಲಿ ಶಾಸಕ, ಮಾಜಿ ಸಚಿವ ವಿನಯ್‌ ಕುಲಕರ್ಣಿ ದೋಷಿಯಾಗಿ ಪರಪ್ಪನ ಅಗ್ರಹಾರ ಸೇರಿದ್ದಾರೆ. ಈ ವರೆಗೂ ಎಷ್ಟು ಪ್ರಮಾಣದ ಶಿಕ್ಷೆ ಎಂಬುದನ್ನು ನ್ಯಾಯಾಲಯ ತಿಳಿಸಿಲ್ಲ. ಇದರ ನಡುವೆಯೇ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಕ್ಷೇತ್ರಕ್ಕೆ ಉಪಚುನಾವಣೆ ತಕ್ಷಣವೇ ಘೋಷಿಸಲಿ. ಯಾರಿಗೆ ಟಿಕೆಟ್‌ ಸಿಗುತ್ತೆ ಎಂಬೆಲ್ಲ ವಿಷಯಗಳ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.

ಪರ- ವಿರೋಧ:


ಚುನಾವಣಾ ಆಯೋಗ ತಕ್ಷಣವೇ ಉಪಚುನಾವಣೆ ಘೋಷಿಸಲಿ ಎಂದು ಒಬ್ಬರು ಪೋಸ್ಟ್‌ ಮಾಡಿದರೆ ಕೆಲವರು ಶಾಸಕ ಸ್ಥಾನದಿಂದ ಅನರ್ಹತೆಯಾದ ಬಳಿಕ ಮತ್ತೆ ಅದೇ ಕುಟುಂಬಕ್ಕೆ ಟಿಕೆಟ್‌ ಕೊಟ್ಟರೆ ಎಂದು ಕೇಳಿದ್ದಾರೆ. ಅದಕ್ಕೆ ಮತ್ತೊಬ್ಬರು ಅವರೇ ಜಾತಿ, ಹಣ ಬಲ ಇರೋರು. ಹೀಗಾಗಿ ಅವರಿಗೆ ಟಿಕೆಟ್‌ ಸಿಗುತ್ತದೆ ಎಂದು ಹೇಳಿದ್ದಾರೆ. ಜತೆಗೆ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಆಗುತ್ತದೆಯೇ ಎಂಬ ಗೋಡೆಬರಹಗಳನ್ನು ಫೋಸ್ಟ್‌ ಮಾಡಿದ್ದು ಚರ್ಚೆಗೆ ಮತ್ತಷ್ಟು ವೇಗ ನೀಡಿದೆ.

ವಿನಯ್‌ಗೆ ಬೆಂ-ಬಲ:

ಅತ್ತ ವಿರೋಧಿಗಳು ವಿನಯ ವಿರುದ್ಧ ಫೋಸ್ಟ್‌ ಮಾಡಿದರೆ ಮತ್ತೊಂದೆಡೆ ಅವರ ಅಭಿಮಾನಿಗಳುಫೋಸ್ಟ್‌ಗಳಿಗೆ ತಿರುಗೇಟು ನೀಡುತ್ತಿದ್ದಾರೆ. ಜತೆಗೆ ನಾವು ವಿಕೆ ಬಾಸ್‌ ಪರವಾಗಿಯೇ ಇರುತ್ತೇವೆ ಎಂದು ಹೇಳಿದ್ದಾರೆ. "ಅಣ್ಣಾ ಕಾನೂನಿನಲ್ಲಿ ನಿಮಗೆ ಅನ್ಯಾಯವಾಗಿದೆ. ನಾವು ಯಾವಾಗಲೂ ನಿಮ್ಮ ಜತೆಗೆ ಇರ್ತೇವಿ. ಯಾರು ಏನೇ ಹೇಳಿದರೂ ನೀವು ಏನು ಅಂತ ನಮಗೆ ಗೊತ್ತು. ಏನೇ ಆಪಾದನೆ ಬಂದರೂ ನಿಮ್ಮನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎಂದೆಲ್ಲ ಹಾಕಿ I Stand with vinay kulkarni boss ಎಂದು ಪೋಸ್ಟ್‌ ಹಾಕಿದ್ದಾರೆ.

ವಿನಯ ಕುಲಕರ್ಣಿ ಅವರಿಗೆ ನ್ಯಾಯಾಲಯವು ಯಾವ ಶಿಕ್ಷೆ ಪ್ರಕಟಿಸುತ್ತದೆ, ಅದರಿಂದ ಶಾಸಕ ಸ್ಥಾನ ಉಳಿಯುತ್ತಯೋ ಅಥವಾ ಅನರ್ಹವಾಗುತ್ತದೆಯೋ ಎಂಬುದನ್ನು ನ್ಯಾಯಾಲಯ ನಿರ್ಧರಿಸಲಿದೆ. ಆದರೆ, ಬುಧವಾರದಿಂದಲೇ ಶಾಸಕನ ಪರ-ವಿರೋಧ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದ್ದು ಯಾವ ಮಟ್ಟಕ್ಕೆ ತಲುಪುತ್ತದೆ ಎಂಬುದನ್ನು ಕಾದು ನೋಡಬೇಕಿದೆ.