ಒಂದು ವಾರದೊಳಗಾಗಿ ಒರಿಯಂಟಲ್ ವಿಮಾ ಕಂಪನಿಗೆ ಬೆಳೆವಿಮೆ ಹಣ ರೈತರ ಖಾತೆಗೆ ಜಮೆಗೆ ಆದೇಶ ಮಾಡದಿದ್ದರೆ ರೈತರು ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂದೆ ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ರೈತರು ಎಚ್ಚರಿಸಿದರು.
ಗದಗ: 2025- 26ನೇ ಸಾಲಿನ ಪ್ರಧಾನಮಂತ್ರಿ ಫಸಲ ಬಿಮಾ ಯೋಜನೆಯ ಬೆಳೆವಿಮಾ ಪರಿಹಾರ ನೀಡುವಂತೆ ಆಗ್ರಹಿಸಿ ರಾಜ್ಯ ಬೆಳೆವಿಮಾ ಹೋರಾಟ ಸಮಿತಿ ಹಾಗೂ ವಿವಿಧ ರೈತಪರ ಸಂಘಟನೆಗಳ ನೇತೃತ್ವದಲ್ಲಿ ಗುರುವಾರ ರೈತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ರೈತರು ನಗರದ ಟಿಪ್ಪು ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಸಿದರು.ಈ ವೇಳೆ ರಾಜ್ಯ ಬೆಳೆವಿಮಾ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಪರಮೇಶ್ವರಪ್ಪ ಜಂತ್ಲಿ ಮಾತನಾಡಿ, ಜಿಲ್ಲೆಯಲ್ಲಿ ಕೆಂಪು ಮೆಣಸಿನಕಾಯಿ, ಈರುಳ್ಳಿ, ಹೆಸರು, ಶೇಂಗಾ, ಗೋವಿನಜೋಳ ಸೇರಿದಂತೆ ಮುಂತಾದ ಮುಂಗಾರು ಬೆಳೆಗಳಲ್ಲಿ ಪ್ರಧಾನಮಂತ್ರಿ ಫಸಲ ಬಿಮಾ ಯೋಜನೆಯಡಿ ಲಕ್ಷಾಂತರ ರೈತರು ಬೆಳೆ ವಿಮಾ ಪಾವತಿಸಿದ್ದಾರೆ.
ಇಲ್ಲಿಯವರೆಗೂ ವಿಮಾ ಕಂಪನಿಯ ಮಧ್ಯಂತರ ಪರಿಹಾರ ಮರೀಚಿಕೆಯಾಗಿದ್ದು, ಒರಿಯಂಟಲ್ ವಿಮಾ ಕಂಪನಿ ಜಿಲ್ಲೆಯ ರೈತರಿಗೆ ಮತ್ತು ಸರ್ಕಾರಕ್ಕೂ ಮೋಸ ಮಾಡುತ್ತಿದ್ದು, ಮಧ್ಯಂತರ ಸ್ಥಳೀಯ ಗಂಡಾಂತರ ಪರಿಹಾರ ರೈತರ ಖಾತೆಗೆ ಹಾಕದೇ ಕುಂಟುನೆಪ ಹೇಳುತ್ತ ದಿನ ದೂಡುತ್ತಿದೆ ಎಂದು ಆರೋಪಿಸಿದರು.ಈ ಬಗ್ಗೆ ಜಿಲ್ಲಾಧಿಕಾರಿಗಳು ತಕ್ಷಣ ಬೆಳೆವಿಮಾ ಕಂಪನಿಗೆ ಆದೇಶ ಮಾಡಿ ಬೆಳೆವಿಮಾ ತುಂಬಿದ ಎಲ್ಲ ರೈತರಿಗೂ ಸ್ಥಳೀಯ ಗಂಡಾಂತರ ಬೆಳೆವಿಮಾ ಪರಿಹಾರ ಮತ್ತು ಬೆಳೆವಿಮಾ ಪಾವತಿಸುವಂತೆ ಆದೇಶ ಮಾಡಬೇಕು. ಒಂದು ವಾರದೊಳಗಾಗಿ ಒರಿಯಂಟಲ್ ವಿಮಾ ಕಂಪನಿಗೆ ಬೆಳೆವಿಮೆ ಹಣ ರೈತರ ಖಾತೆಗೆ ಜಮೆ ಮಾಡುವಂತೆ ಆದೇಶ ಮಾಡದಿದ್ದರೆ ರೈತರು ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂದೆ ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ರಾಜ್ಯ ಉಪಾಧ್ಯಕ್ಷ ಹನುಮರಡ್ಡಿ ಮೊರಬರಡ್ಡಿ, ರಾಜ್ಯ ಕಾರ್ಯದರ್ಶಿ ಎಫ್.ಎಸ್. ಪಾಟೀಲ, ಉಮೇಶ ಲಿಂಗರಡ್ಡಿ, ಬೂದೇಶ ಮೈಲಾರ, ಜಿಲ್ಲಾಧ್ಯಕ್ಷ ರುದ್ರಯ್ಯ ಹಿರೇಮಠ, ಅಶೋಕ ಬಶೆಟ್ಟಿ, ಸತೀಶ ಗಿಡ್ಡಹನುಮಣ್ಣವರ, ಸೋಮನಗೌಡ್ರ ಪಾಟೀಲ, ಗೋವಿಂದರಡ್ಡಿ ಕೊಣ್ಣೂರ, ಕಿರಣ ಪವಾರ, ಜಗದೀಶ ಕೊಣ್ಣೂರ, ಈರಣ್ಣ ಬಂಡಿಹಾಳ, ಈರಪ್ಪ ಹಳ್ಳಿ, ಸಿದ್ದು ಯಾಳವಾಡ, ಮಲ್ಲನಗೌಡ ಪಾಟೀಲ, ಪ್ರಕಾಶ ರೆಡಿಯಪ್ಪನವರ, ಕೊಟ್ರಯ್ಯ ಕಟ್ಟಿಮನಿ, ಸತೀಶಕುಮಾರ ಸಲಗಾರ, ಹುಚ್ಚಪ್ಪ ಗುರಿಕಾರ, ಮಂಜು ಸಿದ್ದನಗೌಡ, ಅಶೋಕಕುಮಾರ, ಶೇಖರ, ರಾಜು, ಬಸವರಾಜ ಮಲ್ಲಿಕಾರ್ಜುನ, ವೀರಪ್ಪ ಚೆನ್ನಪ್ಪನವರ, ಆರ್.ಜಿ. ಪೊಲೀಸಪಾಟೀಲ, ಬಸವರಾಜ ಗುಡ್ಡಪ್ಪನವರ, ಭರಮಪ್ಪ ಹುಲಗೂರ, ಪ್ರವೀಣ, ಮಹೇಂದ್ರಗೌಡ ಚಿಕ್ಕನಗೌಡ್ರ, ಶರಣಪ್ಪ ಹುಲಗೂರ, ಮಂಜು ಕುರಡಗಿ, ಕೆ.ಸಿ. ಅಮ್ಮಿನಬಾವಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.