ಬ್ರಾಹ್ಮಣರು ಮನುವಾದಿಗಳು ಎನ್ನುವುದು ಕೆಲವರಿಗೆ ಚಾಳಿ: ವಿ.ನಾರಾಯಣ ಭಟ್

| Published : Jan 20 2025, 01:32 AM IST

ಸಾರಾಂಶ

ನಾವು ಒಂದಾಗಿ ನಮ್ಮ ಸಮಾಜದ ಮೂಲಕ ಧರ್ಮರಕ್ಷಣೆಯ ಪಣ ತೊಟ್ಟು, ನಾಡು ದೇಶ ಕಟ್ಟುವ ಕೆಲಸಕ್ಕೆ ಮುಂದಾಗಬೇಕಿದೆ ಎಂದು ವಿದ್ವಾನ್ ನಾರಾಯಣ ಭಟ್ ಬೆಣ್ಣೆಗದ್ದೆ ಹೇಳಿದರು.

ಕಾರವಾರ: ಸಮಾಜದ ಸರ್ವತೋಮುಖ ಅಭಿವೃದ್ಧಿ ಬಯಸುತ್ತ, ಸಮಸ್ತರಿಗೂ ಸನ್ಮಂಗಲವಾಗಲಿ, ಸತ್ಯ, ಧರ್ಮ ನಿಷ್ಠೆ, ಸ್ವಾಭಿಮಾನದ ಭದ್ರ ಬುನಾದಿಯ ನಾಡು ನಮ್ಮದಾಗಲಿ ಎಂದು ಪಾಠ ಪ್ರವಚನ ಮಾಡುವ ಜನರನ್ನು ಹೀಯಾಳಿಸುವ ಪ್ರಯತ್ನ ನಿತ್ಯವೂ ನಡೆಯುತ್ತಿದೆ. ವೇದಿಕೆಗಳು ಸಿಕ್ಕಾಗಲೆಲ್ಲ ಮನುವಾದಿಗಳು, ಪುರೋಹಿತಶಾಹಿಗಳು ಎಂದು ಹೇಳುವುದು ಕೆಲವರಿಗೆ ಚಾಳಿಯಾಗಿ ಬಿಟ್ಟಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ತಿನ ಉತ್ತರ ಕನ್ನಡ‌ ಜಿಲ್ಲಾಧ್ಯಕ್ಷ ವಿದ್ವಾನ್ ನಾರಾಯಣ ಭಟ್ ಬೆಣ್ಣೆಗದ್ದೆ ಹೇಳಿದರು.

ಕಾರವಾರದ ಕೋಡಿಬಾಗದಲ್ಲಿರುವ ಶ್ರೀ ಸ್ವಾಮಿ ಶಿವಾನಂದ ಮಹಾರಾಜ ಮಠದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ತಿನ ಕಾರವಾರ ತಾಲೂಕು ಘಟಕದವರು ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯದ ಅಧ್ವೈರ್ಯ ಸ್ಥಾನ ಅಲಂಕರಿಸಿ ಮಾತನಾಡಿದರು.

ನಮ್ಮಲ್ಲಿ ಸಂಘಟನೆ ಕೊರತೆ ಇದೆ ಎನ್ನುವುದು ಕೆಲವರು ಮನಗಂಡಿದ್ದಾರೆ. ಬ್ರಾಹ್ಮಣರಿಗೆ ಏನೇ ಮಾತನಾಡಿದರೂ ದಕ್ಕಿಸಿಕೊಳ್ಳಬಹುದು ಎನ್ನುವ ತೀರ್ಮಾನಕ್ಕೆ ಅಂಥವರು ಬಂದ ಪರಿಣಾಮವೇ ಇಂಥ ಲಘು ಮಾತುಗಳು ಆಡುವುದಕ್ಕೆ ಕಾರಣವಾಗಿದೆ. ಆದ್ದರಿಂದ ನಾವು ಒಂದಾಗಿ ನಮ್ಮ ಸಮಾಜದ ಮೂಲಕ ಧರ್ಮರಕ್ಷಣೆಯ ಪಣ ತೊಟ್ಟು, ನಾಡು ದೇಶ ಕಟ್ಟುವ ಕೆಲಸಕ್ಕೆ ಮುಂದಾಗಬೇಕಿದೆ. ಆಗಲೇ ''''''''ವಸುಧೈವ ಕುಟುಂಬಕಂ'''''''' ಎನ್ನುವ ಮಾತಿಗೆ ಅರ್ಥ ಬರುವುದು ಎಂದು ಹೇಳಿದರು.

ಎಕೆಬಿಎಪಿ ಪರಿಷತ್ತಿನ ಕಾರವಾರ ತಾಲೂಕು ಅಧ್ಯಕ್ಷ ಶ್ರೀನಾಥ ಜೋಶಿ, ಸಮುದಾಯವನ್ನು ಸಂಘಟನೆ‌ ಮಾಡುವ ಮೂಲಕ ಅಭಿವೃದ್ಧಿಯೊಂದಿಗೆ ಸ್ವಾವಲಂಬನೆಯ ದಾರಿ ತುಳಿಯಬೇಕಿದೆ ಎಂದು ಹೇಳಿದರು.

ಪರಿಷತ್ತಿನ ಕಾರ್ಯದರ್ಶಿ ಗಣೇಶ ಶುಕ್ಲ, ಪುರೋಹಿತ ವೃತ್ತಿಯಲ್ಲಿ ತಮ್ಮ ಜೀವನ ಕಳೆಯುವುದು ಎಂದರೆ ಒಂದು ತಪಸ್ಸು ಇದ್ದಂತೆ. ಅದನ್ನು ಅರ್ಥಪೂರ್ಣವಾಗಿ ನಡೆಸಿದ ತಾಲೂಕಿನ ಹಿರಿಯರಿಗೆ ಸನ್ಮಾಸಿದ್ದು ಎಲ್ಲರಿಗೂ ದಕ್ಕಿದ ಗೌರವ ಎನ್ನುವಂತಾಗಿದೆ ಎಂದರು.

ಲೋಕಕಲ್ಯಾಣಾರ್ಥವಾಗಿ ತಾಲೂಕಿನ ಅರ್ಚಕರು, ಪುರೋಹಿತರು ಸೇರಿ ನೂರಾ ಒಂದು ಗಣಪತಿ ಅಥರ್ವಶಿರ್ಷ ಪಾರಾಯಣ, ಹವನ, ರುದ್ರಪಾಠ ಹಾಗೂ ಸಮಂಗಲೆಯರಿಂದ ಭಗ್ವತ್ ಗೀತೆಯ ಭಕ್ತಿಯೋಗ ಮತ್ತು ವಿಷ್ಣು ಸಹಸ್ರನಾಮ ಪಾರಾಯಣ ಹಮ್ಮಿಕೊಂಡಿದ್ದರು.

ತಾಲೂಕಿನಲ್ಲಿ ಅರ್ಚಕ ಮತ್ತು ಪುರೋಹಿತ ವೃತ್ತಿಯಲ್ಲಿರುವ ಹಿರಿಯ ಋತ್ವಿಜರಾದ ವಿಜಯ ಕರ್ವೆ ಸದಾಶಿವಗಡ, ಪ್ರಭಾಕರ ಜೋಶಿ ಹಣಕೋಣ, ಪಾಂಡುರಂಗ ಜೋಶಿ ಅಮದಳ್ಳಿ, ರಾಜಾರಾಮ ಭಟ್ ಮಾಜಾಳಿ, ವಿಠ್ಠಲ್ ಜಿ. ಜೋಶಿ ಸಿದ್ದರ, ಅನಂತ ಚಿಂ. ಜ್ಯೋತಿಷಿ ಬಿಣಗಾ, ಜಗನ್ನಾಥ್ ಜೋಶಿ ಬಾಡ, ಗಜಾನನ ಭಟ್ ವೈಲವಾಡಾ ಹಾಗೂ ಸಂಗೀತ ಕ್ಷೇತ್ರದಲ್ಲಿ ಅಪಾರ ಸಾಧನೆ‌ಗೈದ ಸಂಕೇತ ಸಪ್ರೆ ಶೇಜವಾಡ್ ಅವರನ್ನು ಸನ್ಮಾನಿಸಲಾಯಿತು.

ಸಂಪೂರ್ಣ ಧಾರ್ಮಿಕ ಕಾರ್ಯಕ್ರಮದ ನಿರ್ದೇಶನವನ್ನು ವಿದ್ವಾನ್ ತ್ರಿಗುಣ ಗಾಯತ್ರಿ ವಹಿಸಿಕೊಂಡಿದ್ದರು. ಪರಿಷತ್ತಿನ ಜಿಲ್ಲಾ ಘಟಕಕ್ಕೆ ಕಾರವಾರ ತಾಲೂಕಿನ ಪ್ರತಿನಿಧಿಯಾಗಿ ಸಚ್ಚಿದಾನಂದ ನಾಗೇಶ್ ಭಟ್ ಅವರನ್ನು ಸರ್ವಾನುಮತದಿಂದ ನಿಯೋಜಿಸಲಾಯಿತು. ಪರಿಷತ್ತಿನ ಉಪಾಧ್ಯಕ್ಷ ಪ್ರಸನ್ನ ಜೋಶಿ ಹಣಕೊಣ ಸೇರಿದಂತೆ ಎಲ್ಲ ಪದಾಧಿಕಾರಿಗಳು, ಸದಸ್ಯರು ಇದ್ದರು. ಬಾಳಕೃಷ್ಣ ಭಟ್ ಬೇಳೂರ ವಂದಿಸಿದರು.