ಹಕ್ಕು-ಬಾಧ್ಯತೆಗಳನ್ನು ತಿಳಿದಾಗ ಸಂವಿಧಾನ ಓದು ಸಾರ್ಥಕ: ಪ್ರೊ.ಕರಿಯಣ್ಣ

| Published : Jan 20 2025, 01:32 AM IST

ಸಾರಾಂಶ

ಯುವ ಸಮೂಹ ಸಂವಿಧಾನದ ಬಗ್ಗೆ ಜಾಗೃತಿ ವಹಿಸುವುದರಿಂದ ಸಾರ್ಥಕತೆಯ ಮನೋಭಾವ ಮೂಡುತ್ತದೆ. ಈ ದೇಶದಲ್ಲಿ ೧೪೫ ಕೋಟಿಗೂ ಹೆಚ್ಚು ಜನಸಂಖ್ಯೆಯಿದ್ದು, ನಾವೆಲ್ಲರೂ ಸಂವಿಧಾನದ ಆಶಯಗಳನ್ನು ಅನುಭವಿಸುತ್ತಿದ್ದೇವೆ, ದೇಶದ ಒಕ್ಕೂಟ ವ್ಯವಸ್ಥೆಯ ಮೂಲಕ ಸಂವಿಧಾನದಡಿ ಜೀವಿಸುತ್ತಿದ್ದರೂ ಬಿಕ್ಕಟ್ಟು ಹಾಗೂ ಸವಾಲುಗಳು ಎದುರಾಗುತ್ತಲೇ ಇವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಸಂವಿಧಾನದಲ್ಲಿರುವ ಹಕ್ಕುಗಳು, ಕರ್ತವ್ಯಗಳು, ಭಾದ್ಯತೆಗಳು ಹಾಗೂ ಆದ್ಯತೆಗಳನ್ನು ತಿಳಿದುಕೊಂಡು ಅವುಗಳನ್ನು ಅನುಸರಿಸಿದಾಗ ಸಂವಿಧಾನದ ಓದು ಅರ್ಥಪೂರ್ಣಗೊಳ್ಳುತ್ತದೆ ಎಂದು ಬೆಂಗಳೂರು ವಿವಿ ಪ್ರಾಧ್ಯಾಪಕ ಪ್ರೊ.ಕರಿಯಣ್ಣ ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಕಾವೇರಿ ಸಭಾಂಗಣದಲ್ಲಿ ಸಂವಿಧಾನ ಓದು ಅಭಿಯಾನ-ಕರ್ನಾಟಕದ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಂವಿಧಾನ ಓದು ಅಧ್ಯಯನ ಶಿಬಿರದ ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆ ಕುರಿತ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಯುವ ಸಮೂಹ ಸಂವಿಧಾನದ ಬಗ್ಗೆ ಜಾಗೃತಿ ವಹಿಸುವುದರಿಂದ ಸಾರ್ಥಕತೆಯ ಮನೋಭಾವ ಮೂಡುತ್ತದೆ. ಈ ದೇಶದಲ್ಲಿ ೧೪೫ ಕೋಟಿಗೂ ಹೆಚ್ಚು ಜನಸಂಖ್ಯೆಯಿದ್ದು, ನಾವೆಲ್ಲರೂ ಸಂವಿಧಾನದ ಆಶಯಗಳನ್ನು ಅನುಭವಿಸುತ್ತಿದ್ದೇವೆ, ದೇಶದ ಒಕ್ಕೂಟ ವ್ಯವಸ್ಥೆಯ ಮೂಲಕ ಸಂವಿಧಾನದಡಿ ಜೀವಿಸುತ್ತಿದ್ದರೂ ಬಿಕ್ಕಟ್ಟು ಹಾಗೂ ಸವಾಲುಗಳು ಎದುರಾಗುತ್ತಲೇ ಇವೆ ಎಂದು ವಿಷಾದಿಸಿದರು.

ಒಂದು ದೇಶ ಒಂದು ತೆರಿಗೆಯಡಿ ಜಿಎಸ್‌ಟಿಯನ್ನು ಜಾರಿಗೆ ತರಲಾಯಿತು, ಇದರಿಂದ ರೈತರ ಬೆಳೆಗಳಿಗೆ ಉತ್ತಮ ಬೆಲೆ ಸಿಗಲಿಲ್ಲ, ಮಧ್ಯಮವರ್ಗದವರ ಮೇಲೆ ಆರ್ಥಿಕ ಹೊರೆ ಹೆಚ್ಚಾಯಿತೇ ವಿನಃ ಬೇರಾವುದೇ ಪ್ರಯೋಜನವಾಗಲಿಲ್ಲ. ಜಿಎಸ್‌ಟಿ ಹಣ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ನೇರವಾಗಿ ಹರಿದು ಹೋಗುತ್ತಿದೆ. ಆದರೆ, ರಾಜ್ಯದಿಂದ ಹೋದ ಜಿಎಸ್‌ಟಿ ಹಣವನ್ನು ನ್ಯಾಯಾಲಯಕ್ಕೆ ಹೋಗಿ ಪಡೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ನಮಗೆ ಸಂವಿಧಾನ ನೀಡಿರುವ ಹಕ್ಕು ಎಂದರು.

ಕರ್ನಾಟಕವು ತೆರಿಗೆ ಹೆಚ್ಚು ಕಟ್ಟುವ ರಾಜ್ಯಗಳ ಸಾಲಿನಲ್ಲಿ ಪ್ರಥಮ ಸ್ಥಾನದಲ್ಲಿದೆ. ಆದರೆ, ೧೦೦ ರು.ಕೊಟ್ಟರೆ ಕನಿಷ್ಠ ಶೇ.೩೦ ರಷ್ಟು ವಾಪಸ್ ಕೊಡಬೇಕು ಎಂಬುದನ್ನು ಸಂವಿಧಾನ ಹೇಳುತ್ತದೆ. ಆದರೆ, ಇಷ್ಟು ಹಣವನ್ನು ಕೇಂದ್ರ ಸರ್ಕಾರ ನೀಡುತ್ತಿಲ್ಲ. ಕೇವಲ ಶೇ.೧೫ರಷ್ಟು ಹಣವನ್ನು ಕೊಡುತ್ತಿದ್ದಾರೆ. ಉಳಿದ ಹಣವನ್ನು ಯಾವ ರಾಜ್ಯಕ್ಕೆ ಕೊಡುತ್ತಿದ್ದಾರೆ ಎಂಬುದನ್ನು ತಿಳಿಸಬೇಕು. ಈ ರೀತಿ ಪ್ರಶ್ನೆ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಕರ್ನಾಟಕವು ಹೆಚ್ಚು ತೆರಿಗೆ ಕಟ್ಟುವ ರಾಜ್ಯವಾಗಿದ್ದು, ಇದಕ್ಕೆ ಕಡಿಮೆ ಅನುದಾನ ನೀಡುತ್ತಿದ್ದಾರೆ, ಕೇಂದ್ರ ಸರ್ಕಾರದ ಮೂಗಿನ ನೇರಕ್ಕೆ ಕುಣಿಯದ ರಾಜ್ಯಗಳಿಗೆ ಕಡಿಮೆ ಅನುದಾನ ನೀಡುತ್ತಾ, ಆ ರಾಜ್ಯಗಳಲ್ಲಿ ನೌಕರರಿಗ ಸಂಬಳ ನೀಡಲು ಸಾಧ್ಯವಾಗದೇ ಅಭಿವೃದ್ಧಿ ನಡೆಯುವುದೇ ಕಷ್ಟವಾಗಿದೆ ಎಂದು ಆರೋಪಿಸಿದರು.

ರೈತ ಮುಖಂಡ ಟಿ.ಎಲ್.ಕೃಷ್ಣೇಗೌಡ ಮಾತನಾಡಿ, ಆಳುವ ವರ್ಗದ ಅಧಿಕಾರ ಮತ್ತು ಸಂಪತ್ತಿಗೆ ಯಾವೆಲ್ಲ ಅಡ್ಡಿ ಆತಂಕವಿದೆಯೋ ಅದೆಲ್ಲದರ ವಿರುದ್ಧ ನಿಂತ ಕೇರಳ ಬಹುಮತ ಪಡೆದ ಪಕ್ಷವನ್ನು ೧೯೫೯ ನಲ್ಲಿ ನೆಹರೂ ಸರ್ಕಾರವು ದಾಳಿ ನಡೆಸಿ ವಜಾ ಮಾಡಿತು, ಈಗ ಕೇಂದ್ರ ಸರ್ಕಾರವು ಶಿಕ್ಷಣದ ಮೂಲಕವೇ ಮಧ್ಯಪ್ರವೇಶಿಸಿದೆ. ಎಲ್ಲ ವಿವಿಯನ್ನೂ ದೆಹಲಿಯಲ್ಲಿ ರಿಮೋರ್ಟ್ ತರಹ ಆಪರೇಟ್ ಮಾಡಲು ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗುತ್ತಿದೆ. ಸಹಕಾರ ಸಂಘಗಳು ಕೇಂದ್ರ ಸರ್ಕಾರದ ಅಧೀನಕ್ಕೆ ಬರಬೇಕೆನ್ನುವ ಕಾಯಿದೆ ತಂದಿದೆ ಇದೆಲ್ಲವನ್ನೂ ವಿರೋಧಿಸಬೇಕು ಎಂದು ಒತ್ತಾಯಿಸಿದರು.

ಸಂವಿಧಾನ ಮತ್ತು ಸಾಮಾಜಿಕ ನ್ಯಾಯ ಕುರಿತು ಬಿ.ರಾಜಶೇಖರಮೂರ್ತಿ ಹಾಗೂ ಶಿಬಿರಾರ್ಥಿಗಳ ಮುಂದಿನ ಜವಾಬ್ದಾರಿ ಕುರಿತು ಸಂವಿಧಾನ ಓದು ಅಭಿಯಾನದ ರಾಜ್ಯ ಗೊರೂರು ಮಾತನಾಡಿದರು. ನಂತರ ಸಮಾರೋಪ ಮತ್ತು ಪ್ರಶಸ್ತಿ ಪತ್ರ ವಿತರಣೆಯು ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.