ವಚನಗಳಿಂದ ಸಮೃದ್ಧಿ ಹೊಂದಿದ ಕನ್ನಡ ಸಾಹಿತ್ಯ: ಲೇಖಕಿ ಸುಶೀಲಾ ಸೋಮಶೇಖರ್

| Published : Jan 20 2025, 01:32 AM IST

ವಚನಗಳಿಂದ ಸಮೃದ್ಧಿ ಹೊಂದಿದ ಕನ್ನಡ ಸಾಹಿತ್ಯ: ಲೇಖಕಿ ಸುಶೀಲಾ ಸೋಮಶೇಖರ್
Share this Article
  • FB
  • TW
  • Linkdin
  • Email

ಸಾರಾಂಶ

ಲೇಖಕಿಯರ ಬಳಗದ ಅಧ್ಯಕ್ಷರಾದ ರಾಜೇಶ್ವರಿ ಹುಲ್ಲೇನಹಳ್ಳಿ ಎಲ್ಲರ ಬರಹಗಳ ಕುರಿತು ಅನಿಸಿಕೆಗಳನ್ನು ಹೇಳುತ್ತಾ, ಇಂದಿನ ಸಾಹಿತ್ಯದ ಹಲವಾರು ಪ್ರಕಾರಗಳ ಬರಹಗಳ ಪ್ರಸ್ತುತಿಯು ಬರವಣಿಗೆಯಲ್ಲಿ ಆಸಕ್ತಿಯನ್ನು ಹೆಚ್ಚಿಸುತ್ತಿರುವುದರ ಪ್ರತೀಕವಾಗಿದ್ದು, ಇದು ಹರ್ಷದಾಯಕವೆನ್ನುತ್ತಾ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಹೆಚ್ಚು ಸಾಹಿತ್ಯ ಸೃಷ್ಟಿಯಾಗಲಿ ಎಂಬ ಆಶಯ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ವಚನ ಸಾಹಿತ್ಯದಿಂದ ಕನ್ನಡ ಸಾಹಿತ್ಯವು ಸಮೃದ್ಧ, ಸಿರಿವಂತಿಕೆ ಹೊಂದಿರುವುದು ಹಾಗೂ ಸ್ತ್ರೀಪರವಾದ ನೂತನ ಚಿಂತನೆಗಳನ್ನು ಎತ್ತಿ ಹಿಡಿದಿರುವುದು ವಚನ ಸಾಹಿತ್ಯದ ಮೌಲ್ಯವೇ ಎಂದು ಲೇಖಕಿ ಸುಶೀಲಾ ಸೋಮಶೇಖರ್ ತಿಳಿಸಿದರು.

ನಗರದ ಹಾಸನಾಂಬ ಥಿಯೋಸಾಫಿಕಲ್ ಸೊಸೈಟಿಯಲ್ಲಿ ಜಿಲ್ಲಾ ಲೇಖಕಿಯರ ಬಳಗದಿಂದ ಭಾನುವಾರ ಆಯೋಜಿಸಲಾಗಿದ್ದ ಜನವರಿ ತಿಂಗಳ ‘ಸಾಹಿತ್ಯದ ನಡಿಗೆ ಸಮುದಾಯದೆಡೆಗೆ’ ತಿಂಗಳ ತಿರುಳು ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸ ನೀಡಿದ ಅವರು, ನಮ್ಮ ಮುಂದೆ ಇರುವ ವಚನ ಸಾಹಿತ್ಯದಿಂದ ಕನ್ನಡ ಸಾಹಿತ್ಯವು ಸಮೃದ್ಧಿ ಹೊಂದಿದೆ. ವಚನಕಾರರು ಚಿತ್ತಶುದ್ಧಿ ಹಾಗೂ ಸಾಮಾಜಿಕ ಶುದ್ಧಿಗಾಗಿ ನೂತನ ಚಿಂತನೆಗಳನ್ನು ರೂಢಿಗೆ ತಂದರು. ಅಸಹಾಯಕರ, ದುಃಖತಪ್ತರ, ಅನಾಥರ ಪರಕಾಯ ಪ್ರವೇಶಿಸಿದ ಮೌಲ್ಯವನ್ನು ವಚನ ಸಾಹಿತ್ಯದಲ್ಲಿ ಕಾಣುತ್ತೇವೆ. ಸಾಮಾನ್ಯ ಜನ ಮಾನಸವನ್ನು ಪ್ರಫುಲ್ಲಗೊಳಿಸುವಲ್ಲಿ ಹಾಗು ಅವರ ಬದುಕನ್ನು ಹಸನಗೊಳಿಸಲು ಯತ್ನಿಸಿದ ಸಾಹಿತ್ಯ ಪ್ರಕಾರ ಇದಾಗಿದೆ. ಇಲ್ಲಿ ಹೆಣ್ಣು- ಗಂಡೆಂಬ ಭೇದವಿಲ್ಲದೆ ಉಭಯ ಪ್ರಧಾನತೆ ಇದೆ. ಸ್ತ್ರೀಪರ ನೂತನ ಚಿಂತನೆಗಳನ್ನು ಎತ್ತಿ ಹಿಡಿದದ್ದು, ಅನುಭಾವದ ಸೆಲೆಯಾಗಿ ಅನುಭಾವ ಸಾಹಿತ್ಯ ಎಂದೇ ಕರೆಯಲ್ಪಟ್ಟಿದೆ. ಇಲ್ಲಿ ನಡೆ, ನುಡಿ ಒಂದೇ ಎಂಬ ಖಚಿತತೆಯಿದೆ. ಅನುಭವ ಮಂಟಪದಲ್ಲಿ ನಡೆಯುತ್ತಿದ್ದ ಸಂವಾದಗಳು, ವಚನಾನುಸಂಧಾನಗಳು ಸಕಲರಿಗೂ ಬೇಕಾಗಿರುವ ಸಂವಿಧಾನಗಳೇ ಆಗಿವೆ ಎಂದು ಹೇಳಿದರು. ಮತಕ್ಕಿಂತ ಮತಿಗೆ ಮಾನ್ಯತೆ ನೀಡಿರುವುದು ವಚನ ಸಾಹಿತ್ಯದ ವಿಶಿಷ್ಟತೆ. ಜಾತ್ಯತೀತ ಶರಣ ಸಂಕುಲದ ಕಾಲವಾದ ೧೨ನೇ ಶತಮಾನದ ಶರಣರ ಮುಖ್ಯ ಉದ್ದೇಶ ಅಸ್ಪೃಶ್ಯತಾ ನಿವಾರಣೆ. ಆತ್ಮಾವಲೋಕನ. ಸಿದ್ಧಿಗಿಂತ ಸಾಧನೆಯ ಸಾಧ್ಯತೆಗೆ ಬೇಕಾದ ಅರಿವು, ಆಚಾರಗಳಾಗಿವೆ. ಆಧ್ಯಾತ್ಮಿಕ, ಆರ್ಥಿಕ, ಸಾಮಾಜಿಕ, ಸಮಾನತೆಯನ್ನು ತರುವುದಾಗಿತ್ತು ಎಂದು ಕಿವಿಮಾತು ಹೇಳಿದರು.

ಸರಳ ಜೀವನ, ಉನ್ನತ ಆಲೋಚನೆಗೆ ಆದ್ಯತೆ ಕೊಟ್ಟಿದ್ದ ಶರಣರು ಈ ಮೂಲಕ ಸರ್ವರಿಗೂ ಸಮ ಪಾಲು, ಸರ್ವರಿಗೂ ಸಮ ಬಾಳು ಎಂಬ ಧ್ಯೇಯ ವಾಕ್ಯ ಅವರದಾಗಿತ್ತು ಎಂದು ಹೇಳಿದರು.

ಲೇಖಕಿಯರ ಬಳಗದ ಅಧ್ಯಕ್ಷರಾದ ರಾಜೇಶ್ವರಿ ಹುಲ್ಲೇನಹಳ್ಳಿ ಎಲ್ಲರ ಬರಹಗಳ ಕುರಿತು ಅನಿಸಿಕೆಗಳನ್ನು ಹೇಳುತ್ತಾ, ಇಂದಿನ ಸಾಹಿತ್ಯದ ಹಲವಾರು ಪ್ರಕಾರಗಳ ಬರಹಗಳ ಪ್ರಸ್ತುತಿಯು ಬರವಣಿಗೆಯಲ್ಲಿ ಆಸಕ್ತಿಯನ್ನು ಹೆಚ್ಚಿಸುತ್ತಿರುವುದರ ಪ್ರತೀಕವಾಗಿದ್ದು, ಇದು ಹರ್ಷದಾಯಕವೆನ್ನುತ್ತಾ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಹೆಚ್ಚು ಸಾಹಿತ್ಯ ಸೃಷ್ಟಿಯಾಗಲಿ ಎಂಬ ಆಶಯ ವ್ಯಕ್ತಪಡಿಸಿದರು.

ಲಕ್ಷ್ಮೀದೇವಿ ದಾಸಪ್ಪ ಪ್ರಾರ್ಥಿಸಿದರು, ಗಿರಿಜಾ ಸ್ವಾಗತಿಸಿದರೆ, ರೇಖಾ ಪ್ರಕಾಶ್ ವಂದಿಸಿದರು, ಪ್ರಮೀಳಾ ನಿರೂಪಿಸಿದರು. ಗಿರಿಜಾಂಬ ಪ್ರಾಯೋಜಕತ್ವ ವಹಿಸಿ ಆತಿಥ್ಯ ನೀಡಿದರು.

ಬಳಗದ ಸದಸ್ಯರಾದ ರೇಖಾ ಪ್ರಕಾಶ್, ಲಕ್ಷ್ಮೀದೇವಿ ದಾಸಪ್ಪ, ಜಯಂತಿ ಚಂದ್ರಶೇಖರ್, ಪ್ರೇಮ ಪ್ರಶಾಂತ್, ಪಲ್ಲವಿ ಬೇಲೂರು, ವನಜ ಸುರೇಶ್, ಜಯ ರಮೇಶ್, ಉಷಾ, ಗಿರಿಜಾ ನಿರ್ವಾಣಿ ಪ್ರಮೀಳಾ, ಪೂರ್ಣಿಮ ಸೇರಿ ಎಲ್ಲರೂ ಸಾಹಿತ್ಯದ ವಿವಿಧ ಪ್ರಕಾರಗಳ ತಮ್ಮ ಬರಹಗಳನ್ನು ಪ್ರಸ್ತುತ ಪಡಿಸಿದರು. ಬಳಗದ ಸದಸ್ಯರಾದ ಮಂಜುಳಾ ಕುಮಾರಸ್ವಾಮಿ, ಜಯಶೀಲ, ಶಾಂತ ಅತ್ನಿ ಉಪಸ್ಥಿತರಿದ್ದರು.