ಹುಬ್ಬಳ್ಳಿಯ ಕೆಎಂಸಿಆರ್‌ಐನಲ್ಲಿ ಅಲಿಮ್ಕೋ ಸಂಸ್ಥೆಯ ಶಾಖೆ ಪ್ರಾರಂಭ

| Published : Jan 20 2025, 01:32 AM IST

ಹುಬ್ಬಳ್ಳಿಯ ಕೆಎಂಸಿಆರ್‌ಐನಲ್ಲಿ ಅಲಿಮ್ಕೋ ಸಂಸ್ಥೆಯ ಶಾಖೆ ಪ್ರಾರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಅಲಿಮ್ಕೋ ಸಂಸ್ಥೆಯು ಅನುದಾನದ ಕೊರತೆಯಿಂದ ಬಂದಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಬಂದ ಬಳಿಕ ಈ ಸಂಸ್ಥೆಗೆ ಅನುದಾನದ ಬಲ ತುಂಬಿದ್ದು, ಅಂಗವಿಕಲರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಈ ಸಂಸ್ಥೆಯ ಮೂಲಕ ದೇಶಾದ್ಯಂತ ಅಂಗವಿಕಲರಿಗೆ ಅಗತ್ಯ ಸಲಕರಣೆ ವಿತರಿಸಲಾಗುತ್ತಿದೆ.

ಧಾರವಾಡ:

ಅಂಗವಿಕಲರ ಏಳ್ಗೆಗಾಗಿ ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಲಿಮ್ಕೋ ಸಂಸ್ಥೆಯ ಶಾಖೆಯನ್ನು ಹುಬ್ಬಳ್ಳಿಯ ಕೆಎಂಸಿಆರ್‌ಐನಲ್ಲಿ (ಕಿಮ್ಸ್‌) ಆರಂಭಿಸಿದ್ದು, ಅರ್ಹ ಅಂಗವಿಕಲರು ಈ ಸಂಸ್ಥೆಯ ಲಾಭ ಪಡೆಯಲು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮನವಿ ಮಾಡಿದರು.

ನಗರದ ಜೆಎಸ್​ಎಸ್​ ಕಾಲೇಜಿನ ಸನ್ನಿಧಿ ಕಲಾಕ್ಷೇತ್ರದಲ್ಲಿ ಭಾನುವಾರ ಏರ್ಪಡಿಸಿದ್ದ ಕೇಂದ್ರ ಸರ್ಕಾರದ ಅಡಿಪ್​ ಯೋಜನೆ ಅಡಿ ದಿವ್ಯಾಂಗ ಜನರಿಗೆ ರಾಷ್ಟ್ರೀಯ ವಯೋಶ್ರಿ ಯೋಜನೆ ಅಡಿ ಹಿರಿಯ ನಾಗರಿಕರಿಗೆ ಉಚಿತವಾಗಿ ಸಾಧನ-ಸಲಕರಣೆ ವಿತರಿಸಿದ ಅವರು, ಈ ಸಂಸ್ಥೆಯು ಅನುದಾನದ ಕೊರತೆಯಿಂದ ಬಂದಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಬಂದ ಬಳಿಕ ಈ ಸಂಸ್ಥೆಗೆ ಅನುದಾನದ ಬಲ ತುಂಬಿದ್ದು, ಅಂಗವಿಕಲರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಈ ಸಂಸ್ಥೆಯ ಮೂಲಕ ದೇಶಾದ್ಯಂತ ಅಂಗವಿಕಲರಿಗೆ ಅಗತ್ಯ ಸಲಕರಣೆ ವಿತರಿಸಲಾಗುತ್ತಿದೆ. ಇದೀಗ ಈ ಸಂಸ್ಥೆಯ ಶಾಖೆಯನ್ನು ಕೆಎಂಸಿಆರ್‌ಐನಲ್ಲಿಯೇ ಶುರು ಮಾಡಿದ್ದು, ಯೋಜನೆಯಿಂದ ಕೈ ತಪ್ಪಿ ಹೋಗಿರುವ ಅರ್ಹ ಅಂಗವಿಕಲರು ಈ ಸಂಸ್ಥೆಯನ್ನು ಸಂಪರ್ಕಿಸಿ ತಮಗೆ ಅನುಕೂಲ ಸಾಧನ ಪಡೆದುಕೊಳ್ಳಬಹುದು ಎಂದರು.

ಶೇ. 40ಕ್ಕೆ ಪ್ರಮಾಣ ಇಳಿಕೆ:

ಈ ಶಿಬಿರದ ಮೂಲಕ ₹ 1.36 ಕೋಟಿ ಮೌಲ್ಯದ ವಿವಿಧ ಸಕಲಕರಣೆಗಳನ್ನು 1627 ಜನರಿಗೆ ವಿತರಿಸಲಾಗುತ್ತಿದೆ. ಈ ಮೊದಲು ಶೇ. 70ರಷ್ಟು ಅಂಗವಿಕಲತೆ ಹೊಂದಿರುವವರಿಗೆ ಪರಿಕರ ನೀಡಲಾಗುತ್ತಿತ್ತು. ಇದೀಗ ಮೋದಿ ಅವರು ಆ ಪ್ರಮಾಣವನ್ನು ಶೇ. 40ಕ್ಕೆ ಇಳಿಸಿದ್ದಾರೆ. ಇದರಿಂದ ಸಾವಿರಾರು ಜನರಿಗೆ ಅನುಕೂಲವಾಗಿದೆ. ಅಂಗವಿಕಲರು ಕೇಂದ್ರದಲ್ಲಿ ತಪಾಸಣೆ ಮಾಡಿಸಿಕೊಂಡು ಅಗತ್ಯ ಸಹಾಯಕ ಉಪಕರಣವನ್ನು ಉಚಿತವಾಗಿ ಇಲ್ಲೇ ಪಡೆಯಬಹುದು ಎಂದರು.

ಮೀಸಲಾತಿ ಸಹ ಹೆಚ್ಚಿಗೆ:

ಕೇಂದ್ರ ಗ್ರಾಹಕ ವ್ಯವಹಾರಗಳ ಮತ್ತು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವಾಲಯದ ರಾಜ್ಯ ಸಚಿವ ಬನವಾರಿ ಲಾಲ್​ ವರ್ಮಾ ಮಾತನಾಡಿ, ಅಂಗವಿಕಲರ ಜೀವನಕ್ಕೆ ಅಗತ್ಯವಿರುವ ಎಲ್ಲ ಸಹಕಾರ, ಸೌಲಭ್ಯಗಳನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಉದ್ಯೋಗದಲ್ಲಿ ಶೇ. 3ರ ಬದಲಾಗಿ ಶೇ. 4ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಸರ್ಕಾರದ ಅನುದಾನಿತ ಉನ್ನತ ಶಿಕ್ಷಣ ಸಂಸ್ಥೆಗಳಲ್ಲೂ ಶೇ.5 ಹೆಚ್ಚಿಸಲಾಗಿದೆ ಎಂದರು.

ಶೈಕ್ಷಣಿಕ ಸಬಲೀಕರಣದ ದಿಸೆಯಲ್ಲಿ ನಮ್ಮ ಸರ್ಕಾರವು ಸ್ಕಾಲರ್​ ಶಿಪ್​ ಯೋಜನೆಯಡಿ 2.69 ಲಕ್ಷ ಅಂಗವಿಕಲ ವಿದ್ಯಾರ್ಥಿಗಳಿಗೆ ₹ 884.85 ಕೋಟಿ ವಿದ್ಯಾಥಿ ವೇತನವನ್ನು ಫಲಾನುಭವಿಗಳ ಬ್ಯಾಂಕ್​ ಖಾತೆಗಳಿಗೆ ನೇರವಾಗಿ ಪಾವತಿಸುತ್ತಿದೆ. ಕರ್ನಾಟಕದಲ್ಲಿ 1805 ಅಂಗವಿಕಲರಿಗೆ ₹83.41 ಕೋಟಿ ವಿದ್ಯಾರ್ಥಿವೇತನ ನೀಡಲಾಗಿದೆ. ಡಿಡಿಆರ್​ಎಸ್​ ಯೋಜನೆಯಡಿ 3.73 ಲಕ್ಷ ಫಲಾನುಭವಿಗಳು ₹ 870.89 ಕೋಟಿಗಿಂತ ಹೆಚ್ಚಿನ ಮೊತ್ತದ ಲಾಭ ಪಡೆದಿದ್ದಾರೆ. ಕರ್ನಾಟಕದಲ್ಲಿ 5,472 ಅಂಗವಿಕಲರು ₹ 9.92 ಕೋಟಿ ಮೊತ್ತದ ಲಾಭ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.

ಶಾಸಕ ಅರವಿಂದ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ ಆಯುಕ್ತ ದಾಸ ಸೂರ್ಯವಂಶಿ, ಹುಡಾ ಅಧ್ಯಕ್ಷ ಶಾಕೀರ ಸನದಿ, ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ಮುಗದ, ಪಾಲಿಕೆ ಸದಸ್ಯರಾದ ಜ್ಯೋತಿ ಪಾಟೀಲ, ಚಂದ್ರಶೇಖರ ಮನಗುಂಡಿ, ಆನಂದ ಯಾವಗಲ್​, ಮುಖಂಡರಾದ ಪ್ರಕಾಶ ಕ್ಯಾರಕಟ್ಟಿ ಇದ್ದರು. ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಸ್ವಾಗತಿಸಿದರು. ಅಲಿಮ್ಕೋ ಸಂಸ್ಥೆ ಪ್ರಧಾನ ವ್ಯವಸ್ಥಾಪಕ ಅಜೇಯ ಚೌಧರಿ ಪ್ರಾಸ್ತಾವಿಕ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಡಾ. ಎಚ್​.ಎಚ್​. ಕುಕನೂರ ವಂದಿಸಿದರು.