ಗೋಪಾಲಸ್ವಾಮಿ ಬೆಟ್ಟಕ್ಕೆ ಕ್ಯಾಮೆರಾ ಡ್ರೋನ್ ನಿಷೇಧ

| Published : Feb 10 2024, 01:48 AM IST

ಸಾರಾಂಶ

ಗೋಪಾಲಸ್ವಾಮಿ ಬೆಟ್ಟದ ದೇವಸ್ಥಾನದ ಸುತ್ತಮುತ್ತ ಕಾಡು ಪ್ರಾಣಿಗಳ ಕ್ಯಾಮೆರಾ ಹಾಗೂ ಡ್ರೋನ್ ಚಿತ್ರೀಕರಣಕ್ಕೆ ತಹಸೀಲ್ದಾರ್‌ ಟಿ. ರಮೇಶ್‌ ಬಾಬು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

ತಹಸೀಲ್ದಾರ್‌ ರಮೇಶ್‌ ಬಾಬು ಆದೇಶ । ಕಾಡಾನೆಯೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳುವ ಭಕ್ತರು ।ಎಲ್ಲರ ಅನುಕೂಲಕ್ಕಾಗಿ ಕ್ಯಾಮೆರಾ ನಿಷೇಧ

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಗೋಪಾಲಸ್ವಾಮಿ ಬೆಟ್ಟದ ದೇವಸ್ಥಾನದ ಸುತ್ತಮುತ್ತ ಕಾಡು ಪ್ರಾಣಿಗಳ ಕ್ಯಾಮೆರಾ ಹಾಗೂ ಡ್ರೋನ್ ಚಿತ್ರೀಕರಣಕ್ಕೆ ತಹಸೀಲ್ದಾರ್‌ ಟಿ. ರಮೇಶ್‌ ಬಾಬು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.ಗೋಪಾಲಸ್ವಾಮಿ ಬೆಟ್ಟದ ವಲಯ ಅರಣ್ಯಾಧಿಕಾರಿ ಮಂಜುನಾಥ್‌ ಕೋರಿಕೆ ಮೇರೆಗೆ ತಹಸೀಲ್ದಾರ್‌ ಟಿ. ರಮೇಶ್‌ ಬಾಬು ಫೆ.9 ರಂದು ಅಧಿಕೃತ ಆದೇಶ ಹೊರಡಿಸುವ ಮೂಲಕ ಗೋಪಾಲಸ್ವಾಮಿ ಬೆಟ್ಟದಲ್ಲಿ ಕ್ಯಾಮೆರಾ ಹಾಗೂ ಡ್ರೋನ್ ಚಿತ್ರೀಕರಣಕ್ಕೆ ಬ್ರೇಕ್‌ ಹಾಕಿದ್ದಾರೆ.

ಕಳೆದ ಜ.೩೧ರಂದು ಗೋಪಾಲಸ್ವಾಮಿ ಬೆಟ್ಟದ ವಲಯ ಅರಣ್ಯಾಧಿಕಾರಿ ಮಂಜುನಾಥ್‌ ತಹಸೀಲ್ದಾರ್‌ ಟಿ. ರಮೇಶ್‌ ಬಾಬುಗೆ ಪತ್ರ ಬರೆದು ಗೋಪಾಲಸ್ವಾಮಿ ಬೆಟ್ಟದ ದೇವಸ್ಥಾನದ ಸುತ್ತ ಮುತ್ತ ಡ್ರೋನ್ ಹಾಗೂ ಕ್ಯಾಮೆರಾ ಚಿತ್ರೀಕರಣ ನಿಷೇಧಿಸಬೇಕು ಎಂದು ಮನವಿ ಮಾಡಿದ್ದರು.

ಪತ್ರದ ಸಾರಾಂಶ

ಗೋಪಾಲಸ್ವಾಮಿ ವಲಯ ಅರಣ್ಯಾಧಿಕಾರಿ ಮಂಜುನಾಥ್‌ ತಹಸೀಲ್ದಾರ್‌ಗೆ ಪತ್ರದಲ್ಲಿ ಹಿಮವದ್‌ ಗೋಪಾಲಸ್ವಾಮಿ ಬೆಟ್ಟದ ದೇವಸ್ಥಾನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕೋರ್‌ ಜೋನ್‌ನಲ್ಲಿದೆ.ಗೋಪಾಲಸ್ವಾಮಿ ದೇವಸ್ಥಾನಕ್ಕೆ ಅತಿ ಹೆಚ್ಚು ಭಕ್ತರು, ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರು, ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಸಂಜೆಯ ವೇಳೆ ಕಾಡಾನೆಯೊಂದು ದೇವಸ್ಥಾನದ ಬಳಿ ಬರುವುದು ಮಾಮೂಲಿಯಾಗಿದೆ. ದೇವಸ್ಥಾನಕ್ಕೆ ಬರುವ ಆನೆ ಕಾಡಾನೆ ಎಂದು ತಿಳಿದಿದ್ದರೂ ಸಹ ಪ್ರವಾಸಿಗರು, ಭಕ್ತರು ಕಾಡಾನೆಯ ಸನಿಹಕ್ಕೆ ತೆರಳಿ ಛಾಯಚಿತ್ರ ತೆಗೆಯುವುದರಿಂದ ಕಾಡಾನೆಯಿಂದ ಜನರಿಗೆ ಅಥವಾ ಜನರಿಂದ ಕಾಡಾನೆಗೆ ತೊಂದರೆಯಾಗುತ್ತದೆ. ಪ್ರವಾಸಿಗರು, ಭಕ್ತರು ಹಾಗೂ ಕಾಡಾನೆಗಳ ಹಿತ ಕಾಪಾಡುವುದು ಕೂಡ ಎಲ್ಲರ ಜವಬ್ದಾರಿಯಾಗಿದೆ. ಮುಂದಿನ ದಿನಗಳಲ್ಲಿ ಇಂತ ಘಟನೆಗಳು ನಡೆಯದಂತೆ ಕ್ರಮ ಜರುಗಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ದೇವಸ್ಥಾನಕ್ಕೆ ಬರುವ ಕಾಡಾನೆಗೆ ದೇವಸ್ಥಾನದ ಅರ್ಚಕರು ಯಾವುದೇ ರೀತಿಯ ಪಾಯಸ ಸೇರಿದಂತೆ ಇನ್ನಿತರ ತಿನ್ನುವ ಆಹಾರ ನೀಡದಂತೆಯೂ ತಾಲೂಕು ಆಡಳಿತ ಸೂಚನೆ ನೀಡಬೇಕು ಎಂದು ಪ್ರವಾಸಿಗ ಬೆಂಗಳೂರಿನ ಗುರು ಆಗ್ರಹಿಸಿದ್ದಾರೆ.ಸಂಜೆಯ ಬಳಿಕ ಕಾಡಾನೆ ದೇವಸ್ಥಾನಕ್ಕೆ ಬರುವುದು ಅರ್ಚಕರು ನೀಡುವ ಆಹಾರ ರುಚಿಯ ನೋಡಿ ಹಾಗಾಗಿ ಅರಣ್ಯ ಇಲಾಖೆ ಹಾಗೂ ತಹಸೀಲ್ದಾರ್‌ ಈ ಬಗ್ಗೆಯೂ ಚಿಂತಿಸಿ ಆಹಾರ ನೀಡದಂತೆ ಖಡಕ್ಕಾಗಿ ಹೇಳಬೇಕು ಎಂದು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ. ದೇವಸ್ಥಾನದ ಅರ್ಚಕರು ನೀಡುವ ರುಚಿಕರ ಆಹಾರ ಸೇವನೆಯಿಂದಾಗಿಯೇ ಕಾಡಾನೆ ದೇವಸ್ಥಾನಕ್ಕೆ ಬರುತ್ತಿದೆ, ಆಹಾರ ನೀಡದಂತೆ ಅರ್ಚಕರಿಗೆ ತಹಸೀಲ್ದಾರ್‌ ಕೂಡ ಮತ್ತೊಂದು ಆದೇಶ ನೀಡಲಿ ಎಂಬುದು ಜನರ ಒತ್ತಾಯವಾಗಿದೆ.

ಗೋಪಾಲಸ್ವಾಮಿ ಬೆಟ್ಟದ ದೇವಸ್ಥಾನದ ಅರ್ಚಕರು ಇನ್ನು ಮುಂದೆ ಪಾಯಸ ಸೇರಿದಂತೆ ಇನ್ನಿತರ ಆಹಾರ ಕಾಡಾನೆಗೆ ನೀಡದಂತೆ ಹೇಳಲಾಗುವುದು. ಆಹಾರ ನೀಡುವುದು ನಿಲ್ಲಿಸಿದರೆ ಕಾಡಾನೆ ಬರೋದಿಲ್ಲ.

ಟಿ. ರಮೇಶ್‌ ಬಾಬು ತಹಸೀಲ್ದಾರ್‌