ಜ್ಞಾನವಾಪಿ ಮಸೀದಿಲೀ ಪೂಜೆ: ಗುಂಡ್ಲುಪೇಟೇಲೂ ಪ್ರತಿಭಟನೆ

| Published : Feb 10 2024, 01:48 AM IST

ಸಾರಾಂಶ

ಜ್ಞಾನವಾಪಿ ಮಸೀದಿಯಲ್ಲಿ ಪೂಜೆಗೆ ಅವಕಾಶ ಮಾಡಿಕೊಡಬಾರದೆಂದು ಆಗ್ರಹಿಸಿ ಪಟ್ಟಣದ ಟಿಪ್ಪು ವೃತ್ತದಲ್ಲಿ ಎಸ್‌ಡಿಪಿಐ ಹಾಗೂ ಮುಸ್ಲಿಮರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಜ್ಞಾನವಾಪಿ ಮಸೀದಿಯಲ್ಲಿ ಪೂಜೆಗೆ ಅವಕಾಶ ಮಾಡಿಕೊಡಬಾರದೆಂದು ಆಗ್ರಹಿಸಿ ಪಟ್ಟಣದ ಟಿಪ್ಪು ವೃತ್ತದಲ್ಲಿ ಎಸ್‌ಡಿಪಿಐ ಹಾಗೂ ಮುಸ್ಲಿಮರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.ಪಟ್ಟಣದ ಟಿಪ್ಪು ಸರ್ಕಲ್‌ನಲ್ಲಿ ಜಮಾಯಿಸಿದ ಎಸ್‌ಡಿಪಿಐ ಕಾರ್ಯಕರ್ತರು, ಮುಸ್ಲಿಂ ಸಮಾಜದ ಮುಖಂಡರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಜ್ಞಾನ ವಾಪಿ ಮಸೀದಿಯಲ್ಲಿ ಅತಿಕ್ರಮ ಮಾಡಿರುವುದು ಅಕ್ಷಮ್ಯ ಎಂದು ಆರೋಪಿಸಿದರು.ಎಸ್‌ಡಿಪಿಐ ಮುಖಂಡ ಸರ್ಪರಾಜ್‌ ಮಾತನಾಡಿ, ಉತ್ತರ ಪ್ರದೇಶದ ಜ್ಞಾನ ವಾಪಿ ಮಸೀದಿಯ ನೆಲ ಅಂತಸ್ತಿನಲ್ಲಿ ಪೂಜೆಗೆ ಅವಕಾಶ ಮಾಡಿಕೊಟ್ಟಿರುವ ಕ್ರಮ ಅತ್ಯಂತ ಆಘಾತಕಾರಿ ಎಂದರು.೧೯೯೧ ರ ಪ್ರಾರ್ಥನಾ ಸ್ಥಳದ ಕಾಯ್ದೆ ಪ್ರಕಾರ ದೇಶಾದ್ಯಂತ ಈಗಾಗಲೇ ಅಸ್ತಿತ್ವದಲ್ಲಿರುವ ಯಾವುದೇ ಧಾರ್ಮಿಕ ಸ್ಥಳವನ್ನು (ಬಾಬರಿ ಮಸೀದಿ ಹೊರತುಪಡಿಸಿ) ಯಥಾ ಸ್ಥಿತಿಯಲ್ಲಿ ಮುಂದುವರಿಸಬೇಕೆಂದು ಹಾಗೂ ಯಾವುದೇ ರೀತಿಯ ವಿವಾದಗಳಿಗಾಗಲಿ ಮಧ್ಯ ಪ್ರವೇಶಕ್ಕೆ ಅವಕಾಶವಿಲ್ಲ ಎಂದು ಕಾಯ್ದೆಯಲ್ಲಿ ಸ್ಪಷ್ಟವಾಗಿ ಉಲ್ಲೇಖವಿದೆ ಎಂದರು.ಕಾನೂನಿನ ಹೊರತಾಗಿಯೂ ಮಸೀದಿ ಮೇಲೆ ದುರುದ್ದೇಶ ಪೂರಿತ ವಿವಾದವನ್ನು ಸೃಷ್ಟಿಸಿ ಸಮುದಾಯಗಳ ನಡುವೆ ದ್ವೇಷ ಸಂಘರ್ಷವನ್ನು ನಡೆಸುವ ಹುನ್ನಾರ ಮಾಡಿರುವುದು ಅತ್ಯಂತ ಖಂಡನೀಯ ಎಂದರು.ಪ್ರಾರ್ಥನಾ ಸ್ಥಳದ ಕಾಯ್ದೆ ಪ್ರಕಾರ ದೇಶಾದ್ಯಂತ ಎಲ್ಲಾ ಪ್ರಾರ್ಥನಾ ಮಂದಿರಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಹಾಗೂ ಯಥಾಸ್ಥಿತಿ ಕಾಪಾಡಬೇಕು. ಜ್ಞಾನವಾಪಿ ಮಸೀದಿಯಲ್ಲಿ ಯಾವುದೇ ಕಾರಣಕ್ಕೂ ವಿವಾದ ಹುಟ್ಟು ಹಾಕಲು ಬಿಡದೆ ಮಸೀದಿಯನ್ನು ಮಂಡಳಿಗೆ ಬಿಟ್ಟು ಕೊಡಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಎಸ್‌ಡಿಪಿಐ ಉಪಾಧ್ಯಕ್ಷ ಸರ್ದಾರ್, ಜಾಮಿಯಾ ಮಸೀದಿ ಉಪಾಧ್ಯಕ್ಷ ಸೈಯದ್ ಅಕ್ರಂ,ಕಾವಲು ಪಡೆಯ ಅಬ್ದುಲ್ ಮಾಲಿಕ್, ಕರವೇ ರಿಯಾಜ್ ಪಾಷಾ, ಲಬಾಬಿನ್ ಮಸೀದಿ ಕಾರ್ಯದರ್ಶಿ ಮನ್ಸೂರ್‌ ಆಲಿ, ಬಿಲಾಲ್ ಮಸೀದಿ ಸಿರಾಜ್ ಸಾಬ್, ಜಾಮಿಯಾ ಮಸೀದಿಯ ಜಾಬೀರ್ ಸಾಬ್, ಮದೀನಾ ಮಸೀದಿಯ ಸಲೀಂ ಸಾಬ್,ಜಾಮಿಯಾ ಮಸೀದಿ ಕಾರ್ಯಕಾರಿಣಿ ಸಮಿತಿ ಸದಸ್ಯ ಇಮ್ರಾನ್ ಖಾನ್ ಸೇರಿದಂತೆ ಮತ್ತಿತರರಿದ್ದರು.