ಸಾರಾಂಶ
ಆತ್ಮಭೂಷಣ್
ಕನ್ನಡಪ್ರಭ ವಾರ್ತೆ ಮಂಗಳೂರುಇಂದಿನ ಇ ಕಾಮರ್ಸ್ ಮಾರುಕಟ್ಟೆಯಲ್ಲಿ ಸಹಕಾರಿ ಕ್ಷೇತ್ರವೂ ಪ್ರಬಲ ಪೈಪೋಟಿಗೆ ಇಳಿಯುತ್ತಿದೆ. ಈ ಮೂಲಕ ಸಹಕಾರಿ ರಂಗವೂ ಇ ಟ್ರೇಡಿಂಗ್‌ನಲ್ಲಿ ಹೊಸ ಟ್ರೆಂಡಿಂಗ್ ಸೃಷ್ಟಿಗೆ ಕಾರಣವಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಇ ಟ್ರೇಡಿಂಗ್ ಪ್ರವೇಶಿಸಿರುವ ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ, ತನ್ನ ಉತ್ಪನ್ನಗಳ ಅಮೆಜಾನ್ ಬಳಿಕ ಪ್ಲಿಪ್‌ಕರ್ಟ್ ಸೇರಿದಂತೆ ಐದರಷ್ಟು ಇ ಕಾರ್ಮಸ್‌ಗಳಲ್ಲಿ ತನ್ನ ಬ್ರ್ಯಾಂಡ್‌ನ ಉತ್ಪನ್ನಗಳನ್ನು ಮಾರಾಟ ಮಾಡಲು ಹೊರಟಿದೆ.
ಪ್ರಸಕ್ತ ಅಮೆಜಾನ್‌ನಲ್ಲಿ ಮಾತ್ರ ಕ್ಯಾಂಪ್ಕೋದ ಆಯ್ದ ಉತ್ಪನ್ನಗಳು ಲಭ್ಯವಿದೆ. ಪ್ರೀಮಿಯರ್ ಚಾಕಲೇಟ್, ಮಿಲ್ಕ್ ಮಾರ್ವೆಲ್, ಡಯಾಬಿಟಿಕ್ ಕ್ರಂಚ್ ಬಾರ್ ಚಾಕಲೇಟ್‌ಗಳು ಅಮೆಜಾನ್‌ನಲ್ಲಿ ಮಾರಾಟವಾಗುತ್ತಿವೆ. ಅದರಲ್ಲೂ ಕ್ಯಾಂಪ್ಕೋ ವಿನ್ನರ್ ಶೇ.80 ರಷ್ಟು ಬೇಡಿಕೆ ಕುದುರಿಸಿದೆ. ಅಮೆಜಾನ್‌ನಲ್ಲಿ ಈ ಉತ್ಪನ್ನಗಳು ಮಾಸಿಕ 1.50 ಲಕ್ಷ ರು. ವರೆಗೆ ಮಾರಾಟವಾಗುತ್ತಿವೆ ಎಂದು ಕ್ಯಾಂಪ್ಕೋ ಚಾಕಲೇಟ್ ಮಾರುಕಟ್ಟೆ ವಿಭಾಗದ ಎಜಿಎಂ ಉದಯ ಕುಮಾರ್ ತಿಳಿಸಿದ್ದಾರೆ.ಜನವರಿಯಲ್ಲಿ ‘ಕಲ್ಪ’ ಕೂಡ ಇ ಟ್ರೇಡಿಂಗ್‌ಗೆ:
ಕಳೆದ ಎರಡು ವರ್ಷಗಳಿಂದ ಸಾಮಾನ್ಯ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿರುವ ಕ್ಯಾಂಪ್ಕೋ ಬ್ರ್ಯಾಂಡ್ ‘ಕಲ್ಪ’ ಹೆಸರಿನ ತೆಂಗಿನ ಎಣ್ಣೆ ಜನವರಿಯಲ್ಲಿ ಇ ಮಾರುಕಟ್ಟೆ ಪ್ರವೇಶಿಸಲಿದೆ. 500 ಮತ್ತು 1 ಸಾವಿರ ಲೀಟರ್‌ನ ಬಾಟಲ್‌ಗಳಲ್ಲಿ ಮಾರಾಟವಾಗಲಿದೆ.ಇದಲ್ಲದೆ ಪ್ಲಿಪ್‌ಕರ್ಟ್, ಇನ್‌ಸ್ಟ್ರಾ ಮಾರ್ಕೆಟ್, ಝೆಪ್ಟೊ, ಬ್ಲಿಂಕಿಟ್ ಮತ್ತಿತರ ಆನ್‌ಲೈನ್ ಮಾರುಕಟ್ಟೆಗಳಲ್ಲಿ ಕೂಡ ಕ್ಯಾಂಪ್ಕೋ ಉತ್ಪನ್ನ ಜನವರಿ ವೇಳೆಗೆ ಪ್ರವೇಶಿಸಲಿದೆ. ಮಂಗಳೂರು ನಗರದ ಪಾಂಡೇಶ್ವರದಲ್ಲಿರುವ ಕ್ಯಾಂಪ್ಕೊ ಗೋಡೌನ್‌ನಿಂದ ಈ ಸರಕುಗಳು ರವಾನೆಯಾಗಲಿವೆ. ಜನವರಿಯಲ್ಲಿ ಕ್ಯಾಂಪ್ಕೋದ ಕ್ರಂಚ್ ಮಿಲ್ಕ್ ಚೀಸ್, ಕೋಂಬೋ ಪ್ಯಾಕ್, ಶುಗರ್ ಪ್ರೀ ಡಾರ್ಕ್, ಡೈರಿ ಡ್ರೀಮ್, ಮಾರ್ವೆಲ್ ಸಾಫ್ಟ್ ಮಿಲ್ಕಿ ಮತ್ತಿತರ ಒಟ್ಟು 14 ಚಾಕಲೇಟ್ ಉತ್ಪನ್ನಗಳು ಇ ಟ್ರೇಡಿಂಗ್‌ನಲ್ಲಿ ಸಿಗಲಿದೆ. ................
ಕ್ಯಾಂಪ್ಕೋ ಮುಂದಿನ ದಿನಗಳಲ್ಲಿ ಇ ಟ್ರೇಡಿಂಗ್‌ನಲ್ಲಿ ಹಂತ ಹಂತವಾಗಿ ತನ್ನ ಉತ್ಪನ್ನಗಳನ್ನು ಪ್ರಚುರಪಡಿಸಲಿದೆ. ಅಮೆಜಾನ್‌ನಲ್ಲಿ ಉತ್ತಮ ಬೇಡಿಕೆ ಇದ್ದು, ಮುಂದೆ ಇ ಕಾಮರ್ಸ್‌ನ ಹಲವು ಟ್ರೇಡಿಂಗ್‌ಗಳಲ್ಲಿ ಕ್ಯಾಂಪ್ಕೋ ಉತ್ಪನ್ನ ಮಾರಾಟವಾಗಲಿದೆ.-ಕಿಶೋರ್ ಕುಮಾರ್ ಕೊಡ್ಗಿ, ಅಧ್ಯಕ್ಷರು, ಕ್ಯಾಂಪ್ಕೋ ಮಂಗಳೂರು
.