ಕೇಂದ್ರ ಸರ್ಕಾರದ ಆದೇಶದಂತೆ ಶಿಕ್ಷಕರಿಗೆ ಅರ್ಹತಾ ಪರೀಕ್ಷೆ ನಡೆಸಿದರೆ ದೇಶದ 30 ಲಕ್ಷ ಶಿಕ್ಷಕರು ಸೇವೆಯಿಂದ ವಜಾ ಆಗುವ ಸಾಧ್ಯತೆ ಇದೆ. ಸೇವಾನಿರತ ಶಿಕ್ಷಕರು ಗುಣಾತ್ಮಕ ಶಿಕ್ಷಣ ನೀಡಿದ್ದರಿಂದ ಲಕ್ಷಾಂತರ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಿ ಸರ್ಕಾರಿ ಹಾಗೂ ಖಾಸಗಿ ಉದ್ಯೋಗದಲ್ಲಿದ್ದಾರೆ.

ಧಾರವಾಡ:

ಸೇವಾನಿರತ ಶಿಕ್ಷಕರ ಅರ್ಹತಾ ಪರೀಕ್ಷೆ ನಿಗದಿಗೊಳಿಸಿರುವುದನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಬಿಡಬೇಕೆಂದು ಅಖಿಲ ಭಾರತ ಶಿಕ್ಷಕರ ಫೆಡರೇಶನ್ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಗುರಿಕಾರ ಆಗ್ರಹಿಸಿದ್ದಾರೆ.

ಶಿಕ್ಷಕರ ಅರ್ಹತಾ ಪರೀಕ್ಷೆ ರದ್ದುಗೊಳಿಸುವಂತೆ ಒತ್ತಾಯಿಸಿ ಫೆಡರೇಷನ್‌ ವತಿಯಿಂದ ನವದೆಹಲಿಯ ಜಂತರ ಮಂತರದಲ್ಲಿ ನಡೆಯುತ್ತಿರುವ ಬೃಹತ್‌ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಆದೇಶದಂತೆ ಶಿಕ್ಷಕರಿಗೆ ಅರ್ಹತಾ ಪರೀಕ್ಷೆ ನಡೆಸಿದರೆ ದೇಶದ 30 ಲಕ್ಷ ಶಿಕ್ಷಕರು ಸೇವೆಯಿಂದ ವಜಾ ಆಗುವ ಸಾಧ್ಯತೆ ಇದೆ. ಸೇವಾನಿರತ ಶಿಕ್ಷಕರು ಗುಣಾತ್ಮಕ ಶಿಕ್ಷಣ ನೀಡಿದ್ದರಿಂದ ಲಕ್ಷಾಂತರ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಿ ಸರ್ಕಾರಿ ಹಾಗೂ ಖಾಸಗಿ ಉದ್ಯೋಗದಲ್ಲಿದ್ದಾರೆ. ಇಂತಹ ವಿದ್ಯಾರ್ಥಿಗಳ ವಿದ್ಯಾರ್ಹತೆ ಮತ್ತು ಅವರು ಮಾಡುವ ಉದ್ಯೋಗದಿಂದ ವಜಾ ಮಾಡಲು ಸಾಧ್ಯವೆ? ಎ೦ದು ಗುರಿಕಾರ ಪ್ರಶ್ನಿಸಿದರು.

ತಕ್ಷಣ ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಬೇಕೆಂದು ಒತ್ತಾಯಿಸಿದ ಅವರು, ಮುಂದಿನ ಹಂತದ ಹೋರಾಟದ ನಿರ್ಧಾರವನ್ನು ತಕ್ಷಣ ಪ್ರಕಟಿಸುವುದಾಗಿ ತಿಳಿಸಿದರು. ಉತ್ತರಪ್ರದೇಶ ವಿಧಾನ ಪರಿಷತ್ ಸದಸ್ಯ ದೇವೇಂದ್ರ ಪ್ರತಾಪಸಿಂಗ್, ಅಖಿಲ ಭಾರತ ಶಿಕ್ಷಕರ ಫೆಡರೇಷನ್‌ ಮಹಾ ಪ್ರಧಾನ ಕಾರ್ಯದರ್ಶಿ ಕಮಲ ಕಾಂತ ತ್ರಿಪಾಠಿ, ಉಮಾಶಂಕರ ಸಿಂಗ್‌, ಚಂದ್ರಶೇಖರ ನುಗ್ಗಲಿ, ಹರಿ ಗೋವಿಂದನ್ ಮಾತನಾಡಿದರು. ದೇಶದ ವಿವಿಧ ರಾಜ್ಯಗಳಿಂದ 20 ಸಾವಿರಕ್ಕೂ ಹೆಚ್ಚು ಶಿಕ್ಷಕರು ಭಾಗವಹಿಸಿದ್ದರು.