ಸುಳ್ಯ: ಕ್ಯಾನ್ಸರ್ ಬಗ್ಗೆ ಮುಂಚಿತವಾಗಿ ಅರಿವು ಮೂಡಿಸುವುದೇ ಇದನ್ನು ತಡೆಗಟ್ಟುವ ಏಕೈಕ ಮಾರ್ಗ. ಇಂತಹ ಅಭಿಯಾನಗಳು ಪ್ರತಿ ಮನೆಗೂ ತಲುಪಬೇಕು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟರು. ಕ್ಯಾನ್ಸರ್ ಮುಕ್ತ ಸಮಾಜ ನಿರ್ಮಾಣದ ಉದ್ದೇಶದಿಂದ ರೋಟರಿ ಕ್ಲಬ್ ಸುಳ್ಯ ಮತ್ತು ಸುಳ್ಯ ತಾಲೂಕು ಕಾರ‍್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ರೋಟರಿ ಸಮುದಾಯ ಸಭಾಂಗಣದಲ್ಲಿ ಆಯೋಜಿಸಿದ್ದ ‘ಅರಿವೇ ಜೀವ- ಬದುಕು’ ಕ್ಯಾನ್ಸರ್ ಮಹಾ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಎಲ್ಲ ಸಂಘ ಸಂಸ್ಥೆಗಳನ್ನು ಬಳಸಿಕೊಂಡು ಸಾರ್ವಜನಿಕರಿಗೆ ಕ್ಯಾನ್ಸರ್ ಮಾಹಿತಿ ನೀಡಬೇಕಾದ ಅನಿವಾರ‍್ಯತೆ ಇದೆ. ರೋಟರಿ ಮತ್ತು ಪತ್ರಕರ್ತರ ಈ ಕೆಲಸ ಶ್ಲಾಘನೀಯ ಎಂದು ಸಚಿವರು ಹೇಳಿದರು.ಶಾಸಕಿ ಭಾಗೀರಥಿ ಮುರುಳ್ಯ, ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ. ಮುಸ್ತಾಫ, ರಾಜ್ಯ ಕನಿಷ್ಠ ವೇತನ ಮಂಡಳಿ ಅಧ್ಯಕ್ಷ ಟಿ.ಎಂ. ಶಹೀದ್ ಮುಖ್ಯ ಅತಿಥಿಯಾಗಿದ್ದರು. ರೋಟರಿ ಕ್ಲಬ್ ಅಧ್ಯಕ್ಷೆ ಲತಾ ಮಧುಸೂದನ್ ಅಧ್ಯಕ್ಷತೆ ವಹಿಸಿದ್ದರು.ರೋಟರಿ ಶಾಲಾ ಸಂಚಾಲಕ ಪ್ರಭಾಕರ ನಾಯರ್, ರೋಟರಿ ಕ್ಲಬ್ ಸದಸ್ಯ ಮಧುಸೂದನ್ ಕುಂಭಕೋಡು ಇದ್ದರು. ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಲೋಕೇಶ್ ಪೆರ್ಲಂಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮಕ್ಕಳೊಂದಿಗೆ ಪೋಟೋ ಕ್ಲಿಕ್ಕಿಸಿದ ಸಚಿವರು: ಸಭಾ ಕಾರ‍್ಯಕ್ರಮದ ಬಳಿಕ ಸಚಿವ ಖಾದರ್‌ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಜೊತೆ ಫೋಟೊ ಕ್ಲಿಕ್ಕಿಸಿಕೊಂಡರು. ಮಕ್ಕಳೇ ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ. ಜಂಕ್ ಫುಡ್ ತಿನ್ನಲು ತಂದೆ ತಾಯಿಯನ್ನು ಒತ್ತಾಯ ಮಾಡಬೇಡಿ. ಉತ್ತಮ ಆಹಾರ ಸೇವಿಸಿ, ಯೋಗ, ಪ್ರಾಣಾಯಾಮಗಳನ್ನು ಮಾಡಿ ಆರೋಗ್ಯವಂತರಾಗಿ ಬಾಳಿ ಎಂದು ಕಿವಿಮಾತು ಹೇಳಿದರು.