ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಮನುಷ್ಯನಿಗೆ ಶತ್ರುವಿನ ರೀತಿ ಕಾಡುವ ಕ್ಯಾನ್ಸರ್ ರೋಗದ ಬಗ್ಗೆ ಜನರಲ್ಲಿ ಸರಿಯಾಗಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಫೆಬ್ರುವರಿ 4ರಂದು ವಿಶ್ವ ಕ್ಯಾನ್ಸರ್ ದಿನವನ್ನಾಗಿ ಆಚರಿಸಲಾಗುತ್ತದೆ. ಸರ್ಕಾರ ಮತ್ತು ಇತರೆ ಸಂಘ ಸಂಸ್ಥೆಗಳು ಅನೇಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ಕ್ಯಾನ್ಸರ್ ಬಗ್ಗೆ ಮುನ್ನೆಚ್ಚರಿಕೆ ನೀಡುವ ಕೆಲಸ ಮಾಡಲಾಗುತ್ತದೆ ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಕುಸುಮಾ ಮಾಗಿ ಹೇಳಿದರು.ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಎನ್ಸಿಡಿ, ಸಮೀಕ್ಷಣೆ ಘಟಕ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಬವಿವ ಸಂಘದ ಹಾನಗಲ್ ಕುಮಾರೇಶ್ವರ ಔಷಧ ವಿಜ್ಞಾನ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಕ್ಯಾನ್ಸರ್ ದಿನಾಚರಣೆಯ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
2025ರ ವಿಶ್ವ ಕ್ಯಾನ್ಸರ್ ದಿನದ ಘೋಷವಾಕ್ಯ ಯುನೈಟೆಡ್ ಬೈ ಯುನಿಕ್. ವಿಶಿಷ್ಟತೆಯಿಂದ ಏಕತೆಯ ಮಹತ್ವ ತಿಳಿಸುವುದಾಗಿದೆ. ಕ್ಯಾನ್ಸರ್ ನ್ನು ಪರಿಣಾಮಕಾರಿಯಾಗಿ ಎದುರಿಸಲು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚುವುದು ಮುಖ್ಯ. ಕ್ಯಾನ್ಸರ್ ನಲ್ಲಿ ಸುಮಾರು ನೂರಕ್ಕಿಂತ ಅಧಿಕ ವಿಧಗಳಿದ್ದು, ಅವುಗಳಲ್ಲಿ ಚರ್ಮದ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್, ಮೆಲನೋಮ, ಕೊಲೊರೆಕ್ಟಲ್ ಕ್ಯಾನ್ಸರ್, ಲಿಂಫೋಮ ಕ್ಯಾನ್ಸರ್, ಮೂತ್ರಪಿಂಡದ ಕ್ಯಾನ್ಸರ್ ಸಾಮಾನ್ಯವಾದವು ಎಂದು ವರದಿಗಳಿಂದ ತಿಳಿದು ಬಂದಿದೆ. ಆದರೆ ಭಾರತದಲ್ಲಿ ಬಾಯಿ, ಗರ್ಭಾಶಯ ಮತ್ತು ಸ್ತನ ಕ್ಯಾನ್ಸರ್ ಹೆಚ್ಚಾಗಿ ಕಂಡು ಬರುತ್ತವೆ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ ಎಂದರು.ಕ್ಯಾನ್ಸರ್ ಗೆ ಪ್ರಮುಖ ಕಾರಣಗಳಲ್ಲಿ ತಂಬಾಕು ಸೇವನೆಯೂ ಒಂದು. ತಂಬಾಕು ಸೇವನೆ ಬಿಟ್ಟು ಹಣ್ಣುಗಳು, ತರಕಾರಿ, ಧಾನ್ಯಗಳು ಮತ್ತು ಕಡಿಮೆ ಕೊಬ್ಬಿನ ಪ್ರೋಟೀನ್ ಗಳು ಸಮೃದ್ಧವಾಗಿರುವ ಆಹಾರ ಸೇವಿಸುವತ್ತ ಗಮನಹರಿಸಬೇಕು. ಗರ್ಭಕಂಠ ಮತ್ತು ಇತರ ಕ್ಯಾನ್ಸರ್‌ಗಳ ಅಪಾಯ ಕಡಿಮೆ ಮಾಡುವ ಎಚ್ ಪಿವಿ ಲಸಿಕೆ ಮತ್ತು ಯಕೃತ್ತಿನ ಕ್ಯಾನ್ಸನಿಂದ ರಕ್ಷಿಸುವ ಹೆಪಟೈಟಿಸ್ ಬಿ ಲಸಿಕೆಯಂತಹ ಕೆಲವು ರೀತಿಯ ಕ್ಯಾನ್ಸರ್‌ಗಳನ್ನು ತಡೆಗಟ್ಟಲು ಲಸಿಕೆಗಳು ಸಹಾಯಕವಾಗಿದೆ ಎಂದು ತಿಳಿಸಿದರು.ಜಾಗೃತಿ ಜಾಥಾ:
ನಂತರ ನಡೆದ ವಿಶ್ವ ಕ್ಯಾನ್ಸರ್ ದಿನಾಚರಣೆ ಜಾಗೃತಿ ಜಾಥಾ ಬಾಗಲಕೋಟೆ ಬವಿವ ಸಂಘದ ಹಾನಗಲ್ ಕುಮಾರೇಶ್ವರ ಔಷಧ ವಿಜ್ಞಾನ ಮಹಾವಿದ್ಯಾಲಯದಿಂದ ಆರಂಭಗೊಂಡು ನಗರದ ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯದವರೆಗೆ ನಡೆಯಿತು.ವೃತ್ತದಲ್ಲಿ ವಿದ್ಯಾರ್ಥಿಗಳು ತಂಬಾಕು, ಮಾವಾ, ಗಾಂಜಾ ಸೇವೆನೆಯಿಂದಾಗುವ ಕ್ಯಾನ್ಸರ್ ಬಗ್ಗೆ ಬೀದಿನಾಟಕ ಮೂಲಕ ಜಾಗೃತಿ ಮೂಡಿಸಿದರು. ಜಾಗೃತಿ ಜಾಥಾದಲ್ಲಿ ಹಾನಗಲ್ ಕುಮಾರೇಶ್ವರ ಔಷಧ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಶ್ರೀನಿವಾಸ್, ಎನ್ ಸಿಡಿ ವಿಭಾಗದ ಜಿಲ್ಲಾ ಸಂಯೋಜಕ ಡಾ.ಅಂದಾನಗೌಡ ಪಾಟೀಲ, ಎನ್ಸಿಡಿ ಎಫ್.ಎಲ್.ಸಿ ಎಂ.ಬಿ. ಪಾಟೀಲ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಚ್.ಪಿ. ನಾಯ್ಕರ, ಜಿಲ್ಲಾ ತಂಬಾಕು ಸಲಹೆಗಾರ ಶಶಿಕಾಂತ ಕುಮಟಳ್ಳಿ, ಜಿಲ್ಲಾ ಸಾಮಾಜಿಕ ಕಾರ್ಯಕರ್ತ ಶಿವಲಿಂಗ ಕರಗಣ್ಣಿ ಮತ್ತು ವಿದ್ಯಾರ್ಥಿಗಳು ಇದ್ದರು.