ಮೈಕ್ರೋ ಫೈನಾನ್ಸ್ ನಿಯಂತ್ರಿಸಲು ರಾಜ್ಯ ಸರ್ಕಾರ ವಿಫಲ

| Published : Feb 05 2025, 12:35 AM IST

ಮೈಕ್ರೋ ಫೈನಾನ್ಸ್ ನಿಯಂತ್ರಿಸಲು ರಾಜ್ಯ ಸರ್ಕಾರ ವಿಫಲ
Share this Article
  • FB
  • TW
  • Linkdin
  • Email

ಸಾರಾಂಶ

ಅನೇಕ ಮೈಕ್ರೋ ಫೈನಾನ್ಸ್ ಕಂಪನಿಗಳು ಆರ್.ಬಿ.ಐ ನಿಯಮಾವಳಿಗಳ ಪ್ರಕಾರ ನಡೆದುಕೊಳ್ಳುವುದಿಲ್ಲ. ಜೊತೆಗೆ ಬೇಕಾಬಿಟ್ಟಿ ಸಾಲಗಳನ್ನು ನೀಡುತ್ತಾರೆ. ಇದರಿಂದ ಸಾಲ ಕಟ್ಟೋಕೂ ಸಮಸ್ಯೆ ಎದುರಿಸುತ್ತಾರೆ. ಇನ್ನೂ ರಾಜ್ಯದಲ್ಲಿ ಸುಮಾರು ದಿನಗಳಿಂದ ಮೈಕ್ರೋ ಫೈನಾನ್ಸ್ ಹಾವಳಿಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ

ಕನ್ನಡಪ್ರಭ ವಾರ್ತೆ ಗುಡಿಬಂಡೆ

ರಾಜ್ಯದಲ್ಲಿ ಕೆಲವು ದಿನಗಳಿಂದ ಮೈಕ್ರೋ ಫೈನಾನ್ಸ್ ಗಳ ಹಾವಳಿಯ ಹಿನ್ನೆಲೆಯಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಕಡೆ ಅನೇಕರು ಆತ್ಮಹತ್ಯೆಗಳು ಮಾಡಿಕೊಳ್ಳುತ್ತಿದ್ದಾರೆ, ಆದರೂ ಸಹ ರಾಜ್ಯ ಸರ್ಕಾರ ಮಾತ್ರ ಮೈಕ್ರೋ ಫೈನಾನ್ಸ್ ಗಳ ಹಾವಳಿಯನ್ನು ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂದೀಪ್ ರೆಡ್ಡಿ ಆರೋಪಿಸಿದರು.

ತಾಲೂಕಿನ ಬೀಚಗಾನಹಳ್ಳಿ ಗ್ರಾಮದಲ್ಲಿ ಫೆ.2 ರಂದು ಮೈಕ್ರೋ ಫೈನಾನ್ಸ್ ಕಿರಿಕಿರಿಯಿಂದ ಮೃತಪಟ್ಟ ಗಿರೀಶ್ ರವರ ಮನೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಸಂದೀಪ್ ರೆಡ್ಡಿ ಭೇಟಿ ನೀಡಿ ಸಾಂತ್ವನ ಹೇಳಿದರು.

ಸರ್ಕಾರದ ಮೊಂಡುತನ

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅನೇಕ ಮೈಕ್ರೋ ಫೈನಾನ್ಸ್ ಕಂಪನಿಗಳು ಆರ್.ಬಿ.ಐ ನಿಯಮಾವಳಿಗಳ ಪ್ರಕಾರ ನಡೆದುಕೊಳ್ಳುವುದಿಲ್ಲ. ಜೊತೆಗೆ ಬೇಕಾಬಿಟ್ಟಿ ಸಾಲಗಳನ್ನು ನೀಡುತ್ತಾರೆ. ಇದರಿಂದ ಸಾಲ ಕಟ್ಟೋಕೂ ಸಮಸ್ಯೆ ಎದುರಿಸುತ್ತಾರೆ. ಇನ್ನೂ ರಾಜ್ಯದಲ್ಲಿ ಸುಮಾರು ದಿನಗಳಿಂದ ಮೈಕ್ರೋ ಫೈನಾನ್ಸ್ ಹಾವಳಿಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಸರ್ಕಾರ ಮಾತ್ರ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಮೈಕ್ರೋಫೈನಾನ್ಸ್ ಕಂಪನಿಗಳ ಹಾವಳಿ ಕಡಿವಾಣ ಹಾಕಲು ಸರ್ಕಾರ ಮೊಂಡುತನ ಪ್ರದರ್ಶನ ಮಾಡುತ್ತಿದೆ ಎಂದು ಆರೋಪಿಸಿದರು.

ಮೈಕ್ರೋ ಫೈನಾನ್ಸ್ ಗಳ ನೀಡಿದ ಸಾಲಗಳನ್ನು ವಸೂಲಿ ಮಾಡಲು ಕಾನೂನಿನಂತೆ ಕ್ರಮ ತೆಗೆದುಕೊಳ್ಳಬೇಕು. ಆದರೆ ಸಾಲಗಾರರ ಬಲಹೀನತೆಯನ್ನು ದುರ್ಬಳಕೆ ಮಾಡಿಕೊಂಡು, ಬೇರೆ ರೀತಿಯಲ್ಲಿ ಬ್ಲಾಕ್ ಮೇಲ್ ಮಾಡುವುದು, ಅವಾಚ್ಯ ಶಬ್ದಗಳಿಂದ ಬೈಯುವುದನ್ನು ಮಾಡಬಾರದು. ಕಾನೂನಿನಂತೆ ನೀವು ಕೆಲಸ ಮಾಡಿದರೇ ಅವರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿಯೇ ಉದ್ಬವಿಸುವುದಿಲ್ಲ. ಈ ಆತ್ಮಹತ್ಯೆಗಳಿಗೆ ಮೈಕ್ರೋ ಫೈನಾನ್ಸ್ ಕಂಪನಿಗಳೇ ನೇರ ಹೊಣೆ ಎಂದು ಆರೋಪಿಸಿದರು.

ದೌರ್ಜನ್ಯ ನಡೆಸಬೇಡಿ

ಇದೇ ಸಮಯದಲ್ಲಿ ಮೃತರ ಕುಟುಂಬದವರಿಗೆ ಮೈಕ್ರೊ ಫೈನಾನ್ಸ್ ಕಂಪನಿಯ ಕಡೆಯಿಂದ ಕರೆ ಮಾಡಿ ಸಾಲ ಕಟ್ಟುವಂತೆ ಪೀಡಿಸುತ್ತಿದ್ದರು. ಸ್ಥಳದಲ್ಲೇ ಫೈನಾನ್ಸ್ ಕಂಪನಿಯವರನ್ನು ತರಾಟೆಗೆ ತೆಗೆದುಕೊಂಡ ಸಂದೀಪ್ ರೆಡ್ಡಿ, ನಿವು ಸಾಲ ಕೊಟ್ಟಿದ್ದು ತಪ್ಪಲ್ಲ, ಅವರು ತೆಗೆದುಕೊಂಡಿದ್ದು ತಪ್ಪಲ್ಲ. ಆದರೆ ಸಾಲ ತೆಗೆದುಕೊಂಡರು ಅಂತಾ ಅವರ ಮೇಲೆ ದೌರ್ಜನ್ಯ ಮಾಡುವುದು, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುವುದು ಸರಿಯಲ್ಲ. ನಿಮಗೂ ಸಹ ಸ್ವಲ್ಪ ಕನಿಕರ ಎಂಬುದು ಇರಬೇಕು. ಅವರಿಗೆ ಕಿರುಕುಳ ನೀಡುವ ಕೆಲಸ ಮಾಡಬಾರದೆಂದು ತರಾಟೆಗೆ ತೆಗೆದುಕೊಂಡರು.

ಮೃತರ ಕುಟುಂಬಕ್ಕೆ ನೆರವು

ಈ ಸಮಯದಲ್ಲಿ ಮೃತರ ಕುಟುಂಬಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ಸಂದೀಪ್ ರೆಡ್ಡಿ ಆರ್ಥಿಕ ಸಹಾಯ ಮಾಡಿ, ನೀವು ಸಾಲ ಮಾಡಿದ ಮೈಕ್ರೋಫೈನಾನ್ಸ್ ಕಂಪನಿಗಳ ಕಚೇರಿಗಳಿಗೆ ಹೋಗಿ ಕಿರುಕುಳ ನೀಡದಂತೆ ತಿಳಿಸುವುದಾಗಿ ಧೈರ್ಯ ತುಂಬಿದರು. ಈ ಸಮಯದಲ್ಲಿ ಬಿಜೆಪಿ ಮುಖಂಡರಾದ ಪ್ರತಾಪ್, ಗಂಗಿರೆಡ್ಡಿ, ಮಧುಸೂಧನ್, ನಾಗೇಶ್ ಸೇರಿದಂತೆ ಹಲವರು ಇದ್ದರು.