ಮುರುಡೇಶ್ವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಕಾರು ಅಪಘಾತದಲ್ಲಿ ಓರ್ವ ಮೃತಪಟ್ಟಿದ್ದು, ಮೂವರು ಗಾಯಗೊಂಡ ಘಟನೆ ನಡೆದಿದೆ.
ಭಟ್ಕಳ: ಮುರುಡೇಶ್ವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಕಾರು ಅಪಘಾತದಲ್ಲಿ ಓರ್ವ ಮೃತಪಟ್ಟಿದ್ದು, ಮೂವರು ಗಾಯಗೊಂಡ ಘಟನೆ ನಡೆದಿದೆ. ಕೇರಳ ನಿವಾಸಿ ಮಾಜಿ ಸೈನಿಕ ಸಾಗರನಾಥ್ ಸತ್ಯನಾಥ (40) ಮೃತ ವ್ಯಕ್ತಿ. ಕಾರು ಕೇರಳದಿಂದ ಮುರುಡೇಶ್ವರದ ಕಡೆ ಹೆದ್ದಾರಿಯಲ್ಲಿ ಸಾಗುತ್ತಿದ್ದ ವೇಳೆ ಮುರುಡೇಶ್ವರದ ರೈಲ್ವೆ ನಿಲ್ದಾಣದ ಎದುರು ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ತೀವ್ರ ಗಾಯಗೊಂಡ ಕಾರಿನ ಚಾಲಕನ ಸನಿಹದ ಸೀಟಿನಲ್ಲಿ ಕುಳಿತ ಸಾಗರನಾಥ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಉಳಿದ ಮೂವರಿಗೆ ಗಾಯಗಳಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮದ್ನಳ್ಳಿ ಬಳಿ ರಸ್ತೆ ಅಪಘಾತ: ಓರ್ವ ಸಾವು
ಹಳಿಯಾಳ: ತಾಲೂಕಿನ ಗಡಿ ಗ್ರಾಮವಾದ ಮದ್ನಳ್ಳಿ ಬಳಿ ರಾಜ್ಯ ಹೆದ್ದಾರಿಯಲ್ಲಿ ಶುಕ್ರವಾರ ನಡೆದ ರಸ್ತೆ ಅಪಘಾತದಲ್ಲಿ ಓರ್ವ ಪ್ರಯಾಣಿಕ ಸಾವಿಗೀಡಾಗಿದ್ದು, ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ. ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ ಮನೆ ನಿರ್ಮಾಣದ ಕೂಲಿ ಕೆಲಸ ಮಾಡುವ ಪ್ರಶಾಂತ ಸಿ.ಎಸ್. (36) ಮಡಿಕೇರಿ ತಾಲೂಕು ಕೊಡುಗು ಜಿಲ್ಲೆಯ ನಿವಾಸಿ. ಕಾರಿನಲ್ಲಿ ಪಯಣಿಸುತ್ತಿದ್ದವರೆಲ್ಲರೂ ಕೂಲಿ ಕಾರ್ಮಿಕರು ಎನ್ನಲಾಗಿದೆ. ಅಳ್ನಾವರದತ್ತ ತೆರಳುತ್ತಿದ್ದ ಕಾರು ನಿಯಂತ್ರಣ ತಪ್ಪಿದ ಪರಿಣಾಮ ಎದುರಿನಿಂದ ಹಳಿಯಾಳದತ್ತ ಬರುತ್ತಿದ್ದ ಟ್ರಕ್ಕಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿ ಒಳಗಿದ್ದವರು ಗಂಭೀರವಾಗಿ ಗಾಯಗೊಂಡಿದ್ದಾರೆ.ಗಾಯಗೊಂಡವರನ್ನು ಕೃಷ್ಣ ಎಚ್.ಟಿ. (55) ಕೊಡಗು ಜಿಲ್ಲೆ, ಎಂ.ಟಿ. ಕುಮಾರ (46) ಪಿರಿಯಾಪಟ್ಟಣ, ಮೈಸೂರು ಜಿಲ್ಲೆ, ಸಂತೋಷಕುಮಾರ್ ಎಚ್.ಕೆ. (34) ವಿರಾಜಪೇಟೆ ಕೊಡುಗು ಜಿಲ್ಲೆ ಹಾಗೂ ಕಾರು ಚಾಲಕ ಉಲ್ಲಾಳದ ಮಹಮದ್ ರಫೀಕ್ ಇಸ್ಮಾಯಿಲ್ ಬ್ಯಾರಿ (43) ಎಂದು ಗುರುತಿಸಲಾಗಿದ್ದು, ಸ್ಥಳೀಯರ ಸಹಾಯದಿಂದ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಅಪಘಾತ ನಡೆದ ತಕ್ಷಣ ಸ್ಥಳೀಯರು ಹಾಗೂ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವಾಹನಗಳ ಸವಾರರು ರಕ್ಷಣಾ ಕಾರ್ಯಕ್ಕೆ ಕೈಗೊಂಡರು. ತಕ್ಷಣ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಜಖಂಗೊಂಡ ವಾಹನಗಳನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು. ಹಳಿಯಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.