ಲಕ್ಷ್ಮೇಶ್ವರ: ಪಟ್ಟಣದ ಲಿಟಲ್ ಹಾರ್ಟ್ ಇಂಟರ್ ನ್ಯಾಶನಲ್ ಶಾಲೆಯ ಹತ್ತಿರ ಹುಬ್ಬಳ್ಳಿ ರಸ್ತೆಯಲ್ಲಿ ವಾಯು ವಿಹಾರ ಮುಗಿಸಿ ಮನೆಗೆ ಬರುತ್ತಿದ್ದವರ ಮೇಲೆ ಹಿಂದಿನಿಂದ ವೇಗವಾಗಿ ಬಂದ ಕಾರೊಂದು ಹರಿದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟು, ಓರ್ವ ಗಾಯಗೊಂಡಿರುವ ಘಟನೆ ಬುಧವಾರ ಬೆಳಗ್ಗೆ 6.45ರ ಸುಮಾರಿಗೆ ನಡೆದಿದೆ.
ಮೃತರನ್ನು ಶಿಕ್ಷಕ ಅಶೋಕ ಹರವಿ (51) ಹಾಗೂ ಆಟೋ ಚಾಲಕ ಶಿವಾನಂದ ಹುಲಕೋಟಿ (53) ಎಂದು ಗುರುತಿಸಲಾಗಿದೆ. ಶಿಕ್ಷಕ ಮಂಜುನಾಥ ಚಾಕಲಬ್ಬಿ ಅವರಿಗೆ ಗಾಯಗಳಾಗಿವೆ.ಬುಧವಾರ ಬೆಳಗ್ಗೆ ಎಂದಿನಂತೆ ಲಕ್ಷ್ಮೇಶ್ವರ-ಹುಬ್ಬಳ್ಳಿಯ ರಸ್ತೆಯ ಮೇಲೆ 8-10 ಜನರು ವಾಯುವಿಹಾರಕ್ಕೆ ತೆರಳಿ ಮನಗೆ ಮರಳಿ ಬರುತ್ತಿದ್ದ ವೇಳೆ ಹುಬ್ಬಳ್ಳಿ ಕಡೆಯಿಂದ ಲಕ್ಷ್ಮೇಶ್ವರಕ್ಕೆ ವೇಗವಾಗಿ ಬಂದ ಕಾರು ಹಿಂದಿನಿಂದ ಡಿಕ್ಕಿ ಹೊಡೆದಿದೆ. ಪರಿಣಾನ ಇಬ್ಬರು ಮೇಲಕ್ಕೆ ಹಾರಿ ರಸ್ತೆಗೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಶಿಕ್ಷಕ ಮಂಜುನಾಥ ಚಾಕಲಬ್ಬಿ ಅವರಿಗೆ ಅಲ್ಪ ಪ್ರಮಾಣದಲ್ಲಿ ತಾಗಿದ್ದರಿಂದ ಅವರು ಬೆನ್ನಿಗೆ ಗಾಯವಾಗಿದ್ದು, ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ.
ಚಾಲಕ ಕಾರ್ ಅನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾಗಿ ತಿಳಿದು ಬಂದಿದೆ. ಕಾರು ಲಕ್ಷ್ಮೇಶ್ವರ ಮೂಲದವರಿಗೆ ಸೇರಿದ್ದು, ಡಿಕ್ಕಿ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಈ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮುಗಿಲು ಮುಟ್ಟಿದ ಆಕ್ರಂದನ
ನಸುಕಿನಲ್ಲಿ ವಾಯು ವಿಹಾರಕ್ಕೆ ತೆರಳಿದ್ದವರು ಹೀಗೆ ಮೃತಪಟ್ಟಿರುವ ಸುದ್ದಿ ತಿಳಿದ ಕುಟುಂಬಸ್ಥರು ರೋಧಿಸುತ್ತಿರುವ ದೃಶ್ಯ ನೋಡುಗರ ಕಣ್ಣಲ್ಲಿ ನೀರು ತರಿಸಿತು.
ಶಾಸಕರ ಸಾಂತ್ವನ
ವಿಷಯ ತಿಳಿದ ಶಾಸಕ ಡಾ. ಚಂದ್ರು ಲಮಾಣಿ ಅವರು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಮೃತ ಶಿಕ್ಷಕ ಅಶೋಕ ಹರವಿ ಅವರ ಹೆಂಡತಿ ಮತ್ತು ಮಕ್ಕಳಿಗೆ ಧೈರ್ಯ ಹೇಳಿ ವೈದ್ಯರಿಗೆ ಪೋಸ್ಟ್ ಮಾರ್ಟಂ ಮಾಡಿ ದೇಹವನ್ನು ಬೇಗನೆ ನೀಡುವಂತೆ ತಿಳಿಸಿದರು.ಈ ವೇಳೆ ಸುನೀಲ ಮಹಾಂತಶೆಟ್ಟರ, ನಿಂಗಪ್ಪ ಬನ್ನಿ, ಗಂಗಾಧರ ಮೆಣಸಿನಕಾಯಿ, ಬಸವಣ್ಣೆಪ್ಪ ನಂದೆಣ್ಣವರ, ನಾಗರಾಜ ದೊಡ್ಡಮನಿ, ಬಸವರಾಜ ಕುಂಬಾರ, ಸಂತೋಷ ಜಾವೂರ ಸೇರಿದಂತೆ ಅನೇಕರು ಇದ್ದರು.