ಜಾತಿಗಣತಿ ಬಿಡುಗಡೆ ಮಾಡಲೇಬೇಕು: ಮಹಾಲಿಂಗಪ್ಪ

| Published : Jan 18 2024, 02:02 AM IST

ಸಾರಾಂಶ

ರಾಜ್ಯದಲ್ಲಿ ಜಾತಿವಾರುಗಣತಿ ಬಿಡುಗಡೆ ಮಾಡುವಂತೆ ಹಿಂದುಳಿದ ಸಮುದಾಯಗಳು ಸುಮಾರು 92 ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿವೆ.

ಹಿರಿಯೂರು: ರಾಜ್ಯದಲ್ಲಿ ಜಾತಿವಾರುಗಣತಿ ಬಿಡುಗಡೆ ಮಾಡುವಂತೆ ಹಿಂದುಳಿದ ಸಮುದಾಯಗಳು ಸುಮಾರು 92 ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿವೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮೀಸೆ ಮಹಾಲಿಂಗಪ್ಪ ಹೇಳಿದರು.

ನಗರದ ಸಂಗೀತ ಕಂಫರ್ಟ್ಸ್ ಸಭಾಂಗಣದಲ್ಲಿ ನಡೆದ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ನಿರಂತರ ಹೋರಾಟದ ನಂತರವೂ ಇದುವರೆಗೂ ಜಾತಿಗಣತಿ ಬಿಡುಗಡೆ ಮಾಡಲಾಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದಲ್ಲಿ ಜಾತಿವಾರು ಜನಗಣತಿ ಸಮೀಕ್ಷೆ ನಡೆದಿದೆ. ಆದಷ್ಟು ತುರ್ತಾಗಿ ಬಿಡುಗಡೆಗೊಳಿಸಬೇಕು. ಜಾತಿ ಗಣತಿ ಬಿಡುಗಡೆ ಮಾಡುವುದರಿಂದ ಸಣ್ಣ-ಸಣ್ಣ ಸಮುದಾಯಗಳಿಗೆ ಅನುಕೂಲವಾಗುತ್ತದೆ.

ಚಿತ್ರದುರ್ಗದಲ್ಲಿ 28ರಂದು ನಡೆಯಲಿರುವ ಸಮಾವೇಶ ಎರಡು ಪ್ರಬಲ ಜಾತಿಗಳು ವಿರೋಧಿಸುತ್ತವೆ. ಜಾತಿಗಣತಿ ಬಹಿರಂಗಪಡಿಸುವ ಮೊದಲೇ ವಿರೋಧಿಸುವ ಉದ್ದೇಶ ಏನು? ಯಾರು ಎಷ್ಟೇ ವಿರೋಧಿಸಿದರು ಸಹ ಬೃಹತ್ ಸಮಾವೇಶ ನಡೆಯುತ್ತದೆ. ಸಮಾವೇಶಕ್ಕೆ ತಾಲೂಕಿನ ಎಲ್ಲಾ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ದಲಿತರು, ಸಾಹಿತಿಗಳು, ಹೋರಾಟಗಾರರು, ರೈತರು, ಮಹಿಳೆಯರು, ಯುವಕರು ಆಗಮಿಸಿ ಸಮಾವೇಶ ಯಶಸ್ವಿಗೊಳಿಸಬೇಕು ಎಂದರು.

ಕೆಪಿಸಿಸಿ ಸದಸ್ಯ ಕಂದಿಕೆರೆ ಸುರೇಶ್ ಬಾಬು, ಎಂಡಿ ರವಿ, ಎಸ್‌.ಆರ್.ತಿಪ್ಪೇಸ್ವಾಮಿ, ಬಿ.ಎನ್.ಪ್ರಕಾಶ್, ಸಾದತ್ ಉಲ್ಲಾ, ಕಲ್ಲಟ್ಟಿ ಹರೀಶ್, ಜಿ.ಎಲ್.ಮೂರ್ತಿ, ಶಿವರಂಜನಿ, ಗೋಡೆ ತಿಪ್ಪೇಸ್ವಾಮಿ, ದಯಾನಂದ್, ಕೃಷ್ಣಮೂರ್ತಿ, ಪ್ರಸನ್ನ, ಪ್ರದೀಪ್, ಮಂಜಪ್ಪ ಮುಂತಾದವರು ಉಪಸ್ಥಿತರಿದ್ದರು.