ಉಡುಪಿ ಜಿಲ್ಲೆಯ 207 ಕಡೆಗಳಲ್ಲಿ ಸಿಸಿ ಕ್ಯಾಮರ ಕಣ್ಗಾವಲು: ಎಸ್ಪಿ ಹರಿರಾಂ ಶಂಕರ್‌

| Published : Aug 12 2025, 12:31 AM IST

ಉಡುಪಿ ಜಿಲ್ಲೆಯ 207 ಕಡೆಗಳಲ್ಲಿ ಸಿಸಿ ಕ್ಯಾಮರ ಕಣ್ಗಾವಲು: ಎಸ್ಪಿ ಹರಿರಾಂ ಶಂಕರ್‌
Share this Article
  • FB
  • TW
  • Linkdin
  • Email

ಸಾರಾಂಶ

ಸುಮಾರು 2.50 ಕೋಟಿ ರು. ವೆಚ್ಚದ ಈ ಯೋಜನೆಗೆ ಛೇಂಬರ್‌ ಆಫ್‌ ಕಾಮರ್ಸ್ ಕೈಜೋಡಿಸಿದೆ. ಯೋಜನೆಯ ಆರಂಭಿಕ ಹಂತದಲ್ಲಿ ಜಿಲ್ಲೆಯ ಗಡಿ ಪ್ರದೇಶಗಳು, ಮತೀಯ ಸೂಕ್ಷ್ಮ ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ. ಈ ಕ್ಯಾಮೆರಾಗಳ ಮೂಲಕ ಸ್ಥಳೀಯ ಪೊಲೀಸ್ ಠಾಣೆ ಹಾಗೂ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಮ್‌ನಲ್ಲಿ ನಿರಂತರವಾಗಿ ವೀಕ್ಷಣೆ ನಡೆಸಲಾಗುವುದು.

ಕನ್ನಡಪ್ರಭ ವಾರ್ತೆ ಉಡುಪಿ

ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಉಡುಪಿ ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಗಳ ಕಣ್ಗಾವಲು ನಡೆಸುವುದಕ್ಕೆ ಕೋಮುಸೂಕ್ಷ್ಮ ಮತ್ತು ಆಯಕಟ್ಟಿನ 207 ಪ್ರದೇಶಗಳಲ್ಲಿ 601 ಸಿಸಿ ಕ್ಯಾಮರಗಳನ್ನು ಅಳವಡಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.

ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.

ಸುಮಾರು 2.50 ಕೋಟಿ ರು. ವೆಚ್ಚದ ಈ ಯೋಜನೆಗೆ ಛೇಂಬರ್‌ ಆಫ್‌ ಕಾಮರ್ಸ್ ಕೈಜೋಡಿಸಿದೆ. ಯೋಜನೆಯ ಆರಂಭಿಕ ಹಂತದಲ್ಲಿ ಜಿಲ್ಲೆಯ ಗಡಿ ಪ್ರದೇಶಗಳು, ಮತೀಯ ಸೂಕ್ಷ್ಮ ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ. ಈ ಕ್ಯಾಮೆರಾಗಳ ಮೂಲಕ ಸ್ಥಳೀಯ ಪೊಲೀಸ್ ಠಾಣೆ ಹಾಗೂ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಮ್‌ನಲ್ಲಿ ನಿರಂತರವಾಗಿ ವೀಕ್ಷಣೆ ನಡೆಸಲಾಗುವುದು ಎಂದರು.೨೧ ಕಡೆಗಳಲ್ಲಿ ದೃಷ್ಟಿ ಯೋಜನೆ:

ಕಳ್ಳತನದಂತಹ ಪ್ರಕರಣಗಳನ್ನು ತಡೆಯುವ ಉದ್ದೇಶದಿಂದ 50-100 ಮನೆಗಳಿರುವ ವಠಾರಕ್ಕೆ ತರಬೇತಿ ಪಡೆದ ಗಾರ್ಡ್‌ಗಳನ್ನು ನೇಮಿಸುವ ದೃಷ್ಟಿ ಯೋಜನೆ ಈಗಾಗಲೇ ಉಡುಪಿ ನಗರ, ಶಿರ್ವ ಮತ್ತು ಗಂಗೊಳ್ಳಿ ಠಾಣೆ ವ್ಯಾಪ್ತಿಯಲ್ಲಿ ೨ ಕಡೆ ಹಾಗೂ ಕುಂದಾಪುರ, ಹೆಬ್ರಿ, ಕಾರ್ಕಳ ನಗರ, ಹಿರಿಯಡ್ಕ, ಶಂಕರನಾರಾಯಣ ಮತ್ತು ಬ್ರಹ್ಮಾವರ ಠಾಣಾ ಸರಹದ್ದಿನಲ್ಲಿ ತಲಾ ೧ ಕಡೆಗಳಲ್ಲಿ ಒಟ್ಟು ೧೨ ಕಡೆಗಳಲ್ಲಿ ದೃಷ್ಟಿ ಯೋಜನೆಯನ್ನು ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಉಳಿದ ಭಾಗಗಳಲ್ಲಿ ಇನ್ನೂ ೨೧ ಕಡೆಗಳಲ್ಲಿ ಯೋಜನೆಯನ್ನು ವಿಸ್ತರಿಸಲಾಗುವುದೆಂದು ಎಸ್ಪಿ ತಿಳಿಸಿದರು.೧೬೬ ಕಾಲೇಜುಗಳಲ್ಲಿ ಎಡಿಎಸಿ:

ಡ್ರಗ್ಸ್ ಮುಕ್ತ ಉಡುಪಿ ಧ್ಯೇಯವಾಕ್ಯದೊಂದಿಗೆ ಶಾಲಾ ಕಾಲೇಜುಗಳಲ್ಲಿ ಮಾದಕ ವಸ್ತು ನಿಯಂತ್ರಿಸಲು ಆ್ಯಂಟಿ ಡ್ರಗ್ ಅವೆರ್‌ನೆಸ್ ಕಮಿಟಿ (ಎಡಿಎಸಿ) ಆರಂಭಿಸಲಾಗಿದೆ. ಜಿಲ್ಲೆಯ ೧೨೦ ಪಿಯು ಕಾಲೇಜು ಹಾಗೂ ೪೬ ವೃತ್ತಿಪರ ಕಾಲೇಜು ಸೇರಿದಂತೆ ೧೬೬ ಕಾಲೇಜುಗಳಲ್ಲಿ ಕಮಿಟಿಯನ್ನು ರಚಿಸಲಾಗಿದೆ. ಈ ಕಮಿಟಿಯಲ್ಲಿ ಕಾಲೇಜಿನ ಪ್ರಿನ್ಸಿಪಾಲ್, ಇಬ್ಬರು ಸಿಬ್ಬಂದಿ ಹಾಗೂ ಪ್ರತಿ ತರಗತಿಯ ಓರ್ವ ವಿದ್ಯಾರ್ಥಿಗಳಿರುತ್ತಾರೆ. ಸ್ಥಳೀಯ ಠಾಣಾಧಿಕಾರಿ ನೋಡಲ್ ಅಧಿಕಾರಿಯಾಗಿರುತ್ತಾರೆ. ವಾಕಥಾನ್‌ನಂತಹ ಜಾಗೃತಿ ಕಾರ್ಯಕ್ರಮ, ಪ್ರತಿ 3 ತಿಂಗಳಿಗೊಮ್ಮೆ ನೋಡಲ್ ಅಧಿಕಾರಿಯ ಸಭೆ, ತಜ್ಞ ವೈದ್ಯರಿಂದ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ, ಮಾದಕ ವಸ್ತು ಸೇವನೆ ಪತ್ತೆಯಾದ ವಿದ್ಯಾರ್ಥಿಗಳಿಗೆ ಆಪ್ತ ಸಮಾಲೋಚನೆ, ಮಾದಕ ವಸ್ತು ಪೂರೈಕೆದಾರರ ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ ಎಂದರು.ಜಿಲ್ಲಾಧಿಕಾರಿ ನೇತತ್ವದ ಜಿಲ್ಲಾಮಟ್ಟದ ಸಮಿತಿಗೆ ನೋಡಲ್ ಅಧಿಕಾರಿಯಾಗಿ ಸೆನ್ ಅಪರಾಧ ಠಾಣೆಯ ಡಿವೈಎಸ್ಪಿ ಇರುತ್ತಾರೆ. ಯಾವುದೇ ಇತರೆ ಉಪಯುಕ್ತ ಮಾಹಿತಿ ಬಗ್ಗೆ ಅವರನ್ನು (೮೨೭೭೯೮೯೧೦೦) ಸಂಪರ್ಕಿಸುವಂತೆ ತಿಳಿಸಲಾಗಿದೆ ಎಂದು ಎಸ್ಪಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಎಎಸ್ಪಿ ಸುಧಾಕರ್ ಎಸ್. ನಾಯ್ಕ್, ಜಿಲ್ಲಾ ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಅಮ್ಮುಂಜೆ ಪ್ರಭಾಕರ್ ನಾಯಕ್, ಕಾರ್ಯದರ್ಶಿ ಡಾ. ವಿಜಯೇಂದ್ರ ಉಪಸ್ಥಿತರಿದ್ದರು.-----------ಎಲ್ಲೆಲ್ಲಿ ಕ್ಯಾಮರಗಳಿರುತ್ತವೆ?

ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಮಾಳ, ಹೊಸ್ಮಾರು, ಸಚ್ಚರಿಪೇಟೆ, ಕಾರ್ಕಳ ನಗರ ಠಾಣಾ ವ್ಯಾಪ್ತಿಯ ಸಾಣೂರು, ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮೆಶ್ವರ, ಅಮಾಸೆಬೈಲು ಠಾಣಾ ವ್ಯಾಪ್ತಿಯ ಹೊಸಂಗಡಿ, ಕೊಲ್ಲೂರು ಠಾಣಾ ವ್ಯಾಪ್ತಿಯ ದಳಿ, ಗಂಗೊಳ್ಳಿ ಠಾಣಾ ವ್ಯಾಪ್ತಿಯ ಮೇಲ್ ಗಂಗೊಳ್ಳಿ, ಮಲ್ಪೆ ಠಾಣಾ ವ್ಯಾಪ್ತಿಯ ಮಲ್ಪೆ ಬೀಚ್ ಮತ್ತು ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸಿಟಿ ಬಸ್ ನಿಲ್ದಾಣಗಳಲ್ಲಿ ಒಟ್ಟು 10 ಸ್ವಯಂ ಚಾಲಿತ ನಂಬರ್ ಪ್ಲೇಟ್ ರೀಡರ್ ಕ್ಯಾಮರ ಅಳವಡಿಸಲಾಗುವುದು.ಅಲ್ಲದೇ ಉಡುಪಿ ನಗರದ ಕಲ್ಸಂಕ, ಕರಾವಳಿ ಜಂಕ್ಷನ್, ಇಂದ್ರಾಳಿ ಬ್ರಿಡ್ಜ್, ಸಂತೆಕಟ್ಟೆ, ಸರ್ವಿಸ್ ಬಸ್ ನಿಲ್ದಾಣ ಮತ್ತು ಹಳೆ ಕೆಎಸ್‌ಆರ್‌ಟಿಸಿ ನಿಲ್ದಾಣ ಹಾಗೂ ಕುಂದಾಪುರ ಉಪವಿಭಾಗ ವ್ಯಾಪ್ತಿಯ ಎಂ ಕೋಡಿ ಜಂಕ್ಷನ್, ಕಂಡ್ಲೂರು ಪೇಟೆ ಹಾಗೂ ಕಾರ್ಕಳ ಉಪವಿಭಾಗ ವ್ಯಾಪ್ತಿಯ ಬಾರಾಡಿ ಮತ್ತು ನಾರಾವಿ ಸ್ಥಳಗಳಲ್ಲಿ ಒಟ್ಟು 10 ಉತ್ತಮ ಗುಣಮಟ್ಟದ ಕ್ಯಾಮರ ಅಳವಡಿಸಲಾಗುವುದು.