ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಒದಗಿಸಲು ಸಿಡಿಪಿಒ ಹರಸಾಹಸ

| Published : Feb 09 2024, 01:53 AM IST

ಸಾರಾಂಶ

ವಾಡಿ ಪಟ್ಟಣದಲ್ಲಿ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡಕ್ಕಾಗಿ ನಿವೇಶನ ಗುರುತಿಸಲು ಆಗಮಿಸಿದ್ದ ಶಹಾಬಾದ ಶಿಶು ಅಭಿವೃದ್ದಿ ಇಲಾಖೆ ಅಧಿಕಾರಿ ಡಾ.ವಿಜಯಲಕ್ಷ್ಮೀ ಹೇರೂರ ಸ್ಥಳ ಪರಿಶೀಲನೆ.

ಕನ್ನಡಪ್ರಭ ವಾರ್ತೆ ವಾಡಿ

ಪಟ್ಟಣ ಸೇರಿದಂತೆ ಶಹಾಬಾದ ನಗರಗಳಲ್ಲಿ ಕರ್ತವ್ಯ ನಿಬಾಯಿಸುತ್ತಿರುವ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ಒದಗಿಸಲು ಶಹಾಬಾದ ಶಿಶು ಅಭಿವೃದ್ದಿ ಇಲಾಖೆಯ (ಸಿಡಿಪಿಒ) ಡಾ.ವಿಜಯಲಕ್ಷ್ಮೀ ಹೇರೂರ ಹರಸಾಹಸ ಪಡುತ್ತಿದ್ದಾರೆ.

ಪಟ್ಟಣದ ಸಿದ್ದಾರ್ಥ ಬಡಾವಣೆಗೆಯಲ್ಲಿನ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಸ್ಥಳೀಯ ಹಲವು ಮುಖಂಡರೊಂದಿಗೆ ಹಾಗೂ ಪುರಸಭೆ ಅಧಿಕಾರಿಗಳ ಜೋತೆ ಸಮಾಲೋಚನೆ ನಡೆಸಿ ಕೇಂದ್ರಗಳಿಗೆ ಸ್ಥಳ ನೀಡುವಂತೆ ಮನವಿ ಮಾಡಿಕೊಂಡರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಡಿಪಿಒ ಡಾ.ವಿಜಯಲಕ್ಷ್ಮೀ, ಶಹಾಬಾದ ಮತ್ತು ವಾಡಿ ಪಟ್ಟಣಗಳಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ಇಲ್ಲದೆ ಬಾಡಿಗೆ ಕಟ್ಟಡದಲ್ಲಿ ಸೇವೆ ನೀಡಲಾಗುತ್ತಿದೆ. ಸರಕಾರದ ಸುತ್ತೋಲೆ ಪ್ರಕಾರ ಅನುಪಯುಕ್ತ ಕಟ್ಟಡಗಳನ್ನು ಗುರುತಿಸಿ ಅಂಗನವಾಡಿ ಕೇಂದ್ರಗಳಿಗೆ ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಆ ನಿಟ್ಟಿನಲ್ಲಿ ನಾವು ಸರ್ವೇ ನಡೆಸುತ್ತಿದ್ದೇವೆ. ದಾನಿಗಳು ಹಾಗೂ ರಾಜಕೀಯ ಗಣ್ಯರ ಸಹಕಾರ ಅವಶ್ಯಕತೆ ಇದ್ದು, ಅಂಗನವಾಡಿ ಕೇಂದ್ರಗಳ ಸ್ವಂತ ಕಟ್ಟಡಕ್ಕೆ ಸ್ಥಳ ಕಲ್ಪಿಸಲು ಸಾರ್ವಜನಿಕರು ಕೈಜೋಡಿಸಬೇಕು ಎಂದು ಹೇಳಿದರು.

ಇಂದಿರಾ ಕಟ್ಟಿ, ಭಾರತ ಕ್ವಾರಿ, ಮರಾಠಾ ಗಲ್ಲಿ, ಪಿಲಕಮ್ಮ ಏರಿಯಾ, ಬಿಯಾಬಾನಿ ಏರಿಯಾ, ಬಳಿರಾಮಚೌಕ್, ಸೇವಾಲಾಲ್ ನಗರ, ನಿಜಾಮ್ ಗೇಟ್, ವಡ್ಡರ ಗಲ್ಲಿ ಏರಿಯಾದಲ್ಲಿರುವ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ಒದಗಿಸಲು ನಿವೇಶನ ಗುರುತಿಸುವ ಪ್ರಯತ್ನ ನಡೆದಿದೆ ಎಂದು ಮಾಹಿತಿ ನೀಡಿದರು.

ಕಾಂಗ್ರೆಸ್ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ, ಅಂಗನವಾಡಿ ಕೇಂದ್ರದ ಹಿರಿಯ ಮೇಲ್ವಿಚಾರಕಿ ಮೀನಾಕ್ಷಿ ಗುಂಡಗುರ್ತಿ, ವಲಯ ಮೇಲ್ವಿಚಾರಕಿ ಸರನಾ ಹಾದಿಮನಿ, ಅಂಗನವಾಡಿ ಕಾರ್ಯಕರ್ತೆ ಮಹಾದೇವಿ ಕೊಂಚೂರ, ಉಮಾದೇವಿ ಕಟ್ಟಿಮನಿ ಹಾಗೂ ಪುರಸಭೆ ಸಿಬ್ಬಂದಿ ಶಿವಕಾಂತಮ್ಮ ಗಾಯಕವಾಡಿ ಇದ್ದರು.